ನವದೆಹಲಿ: ಪ್ರತಿ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸಲಾಗುತ್ತದೆ. ಆದರೆ ಇದೇ ದಿನ ಭಾರತಕ್ಕೆ ಮರೆಯಲಾಗದ ದುಃಖದ ದಿನವೂ ಆಗಿದೆ. 7 ವರ್ಷಗಳ ಹಿಂದೆ ಭಾರತೀಯ ಸೈನ್ಯದ(Indian Army) ಮೇಲೆ ಭೀಕರ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಭದ್ರತಾ ಪಡೆಯ (CRPF) 40 ಯೋಧರು ಹುತಾತ್ಮರಾಗಿದ್ದರು.

2019ರ ಫೆಬ್ರವರಿ 14ರಂದು ಜಮ್ಮುವಿನಿಂದ ಶ್ರೀನಗರಕ್ಕೆ 78 ವಾಹನಗಳಲ್ಲಿ 2547 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದರು. ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿ ಈ ಭೀಕರ ದಾಳಿ ನಡೆಯಿತು.ಆತ್ಮಾಹುತಿ ದಾಳಿಕೋರನೊಬ್ಬ 100 ಕೆ.ಜಿ. ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಯೋಧರ ಬಸ್‌ಗೆ ಡಿಕ್ಕಿ ಹೊಡೆಸಿದ್ದ. ಸ್ಫೋಟದ ತೀವ್ರತೆಗೆ ಬಸ್ ಸಂಪೂರ್ಣ ನಾಶವಾಯಿತು. 40 ಯೋಧರು ಸ್ಥಳದಲ್ಲೇ ಹುತಾತ್ಮರಾದರು.

ಘಟನೆ ನಡೆದ ಆರು ದಿನಗಳ ನಂತರ, ಕಾಶ್ಮೀರ ಪೊಲೀಸರಿಂದ ರಾಷ್ಟ್ರೀಯ ತನಿಖಾ ದಳ (NIA) ತನಿಖೆಯನ್ನು ವಹಿಸಿಕೊಂಡಿತು. ಈ ಉಗ್ರ ದಾಳಿ ಸಂಚು ರೂಪಿಸಿದ್ದು 23 ವರ್ಷದ ಜೈಶ್-ಎ-ಮೊಹಮ್ಮದ್(Jaish-e-Mohammed) ಉಗ್ರ ಮುದಾಸಿರ್ ಅಹ್ಮದ್ ಖಾನ್ ಎಂಬುದು ತನಿಖೆಯಿಂದ ಬಯಲಾಯಿತು. ನಂತರ ನಡೆದ ಎನ್‌ಕೌಂಟರ್‌ನಲ್ಲಿ ಸೇನೆ ಆತನನ್ನು ಹತ್ಯೆ ಮಾಡಿತ್ತು.

ಭಾರತದ ಪ್ರತಿಕ್ರಿಯೆ ಹೇಗಿತ್ತು..?
ಈ ದಾಳಿ ದೇಶಾದ್ಯಂತ ಖಂಡನೆಗೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ( Narendra Modi) ಅವರು ಯೋಧರನ್ನು ಕಳೆದುಕೊಂಡ ದುಃಖದ ಕಣ್ಣೀರಿಗೆ ಪ್ರತೀಕಾರ ಖಂಡಿತಾ ತೀರಿಸುತ್ತೇವೆ. ಶತ್ರುಗಳ ಜೊತೆ ಪ್ರತೀಕಾರ ತೀರಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದ್ದರು. ಅದರಂತೆ ಪುಲ್ವಾಮಾ ದಾಳಿಯ 12 ದಿನಗಳ ಬಳಿಕ, ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಉಗ್ರರ ತರಬೇತಿ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಸುಮಾರು 300 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಆದರೆ ಈ ಪುಲ್ವಾಮಾ ದಾಳಿ ಭಾರತ ಇತಿಹಾಸದಲ್ಲೇ ಅತ್ಯಂತ ಕರಾಳ ಘಟನೆಗಳಲ್ಲಿ ಒಂದಾಗಿ ಉಳಿದಿದೆ. ದೇಶದ ಜನರು ಹುತಾತ್ಮ ಯೋಧರನ್ನು ಇಂದು ಕೂಡ ಗೌರವದಿಂದ ಸ್ಮರಿಸುತ್ತಿದ್ದಾರೆ.







