ಕಲಬುರಗಿ: ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ(Aland Ladle Mashak Dargah) ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು ಕಲಬುರಗಿ ಹೈಕೋರ್ಟ್ ಪೀಠ ಅನುಮತಿ ನೀಡಿದೆ.

ಫೆಬ್ರವರಿ 15ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಕೇವಲ ಅರ್ಜಿದಾರ ಸಿದ್ರಾಮಯ್ಯ ಹಿರೇಮಠ ಅವರಿಗೆ ಮಾತ್ರ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ನೀಡಿದೆ.

ಪೂಜೆ ಸಲ್ಲಿಸಲು ತೆರಳುವ ಅರ್ಜಿದಾರರಿಗೆ ಸೂಕ್ತ ಭದ್ರತೆ ನೀಡುವಂತೆ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ. ಕಾನೂನು ಸುವ್ಯವಸ್ಥೆ ಉಲ್ಲಂಘನೆ ನಡೆದರೆ ಕಠಿಣ ಕ್ರಮ ಕೈಗೊಳ್ಳುವಂತೆ ಕೂಡ ಆದೇಶಿಸಿದೆ.

ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಮಾಡಲು 15 ಜನರಿಗೆ ಅವಕಾಶ ನೀಡುವಂತೆ ಹಿಂದೂ ಸಂಘಟನೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಕೋರ್ಟ್, ಕೇವಲ ಒಬ್ಬ ಅರ್ಜಿದಾರರಿಗೆ ಮಾತ್ರ ಅನುಮತಿ ನೀಡಿದೆ. ಇದರಿಂದ 15 ಜನರಿಗೆ ಅನುಮತಿ ನಿರೀಕ್ಷಿಸಿದ್ದ ಸಂಘಟನೆಗಳಿಗೆ ನಿರಾಸೆಯಾಗಿದೆ.






