ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಬಿಜೆಪಿ ಮುಖಂಡನಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಶಿಕಾರಿಪುರದ ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್(r BD Bhukanth) ಅವರನ್ನು ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಹುದ್ದೆಗೆ ರಾಜ್ಯ ಸಚಿವ ಸ್ಥಾನಮಾನವೂ ನೀಡಲಾಗಿದೆ.

ಕಾಂಗ್ರೆಸ್ ಸರ್ಕಾರ ಫೆಬ್ರವರಿ 7ರಂದು ರಾಜ್ಯ ಸರ್ಕಾರ 54 ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಅದರಲ್ಲೇ ಬಿ.ಡಿ. ಭೂಕಾಂತ್ ಅವರಿಗೂ ಮಹತ್ವದ ಹುದ್ದೆ ನೀಡಲಾಗಿದೆ. ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಿಷ್ಟಾಚಾರ ವಿಭಾಗ ಹೊರಡಿಸಿದೆ.

ಬಿಜೆಪಿ ಮುಖಂಡರಿಗೆ ಹುದ್ದೆ ನೀಡಿರುವುದಕ್ಕೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಪಕ್ಷದ ಒಳಗಡೆ ಅಸಮಾಧಾನ ಮೂಡಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಬಿಜೆಪಿ ಮುಖಂಡರಿಗೆ ಹುದ್ದೆ ನೀಡಿರುವುದು ಯಾಕೆ? ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆಯೇ? ವಿಚಾರಗಳು ಈಗ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.






