ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ತರುವ ಬಗ್ಗೆ ಶೀಘ್ರದಲ್ಲಿಯೇ ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು, ಈ ಜಿಲ್ಲೆಗಳಿಗೆ ನದಿಯ ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಯೋಜನೆ ಮಾಡಿದರು. ಆದರೆ ಬೆಂಗಳೂರಿನ ರೊಚ್ಚು ನೀರು ಕೊಟ್ಟರು. ಮೂರನೇ ಹಂತದ ಶುದ್ಧೀಕರಣ ಮಾಡಿ ಎಂದರೂ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷ್ಣಾ ನದಿಯ ನೀರು ಬಿಟ್ಟರೆ ನಮಗೆ ಬೇರೆ ದಾರಿ ಇಲ್ಲ ಎಂದು ಎಂದರು.

ಈ ಜಿಲ್ಲೆಗೆ ಕೃಷ್ಣಾ ನೀರು ತರುವ ಬಗ್ಗೆ ಸಂಸದರಾದ ಮಲ್ಲೇಶ್ ಬಾಬು ಅವರು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ನನ್ನ ಬೆಂಬಲವೂ ಇದೆ. ಕೃಷ್ಣ ನದಿ ನೀರನ್ನು ಹರಿಸುವ ಕುರಿತು ಮಲ್ಲೇಶ್ ಬಾಬು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಆಂಧ್ರದ ಮುಖ್ಯಮಂತ್ರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೆಲಸ ಸಾಧಿಸಬೇಕಿದೆ. ಅದಕ್ಕಾಗಿ ಅವರನ್ನು ಭೇಟಿ ಮಾಡುತ್ತೇನೆ. ಅವರ ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಅವರ ಸಹಕಾರ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಮಲ್ಲೇಶ್ ಬಾಬು ಅವರನ್ನು ಗೆಲ್ಲಿಸಿದ ರುಣ ನಮ್ಮಮೇಲಿದೆ. ಅದನ್ನು ತೀರಿಸುವ ಕೆಲಸ ಮಾಡುವ ಪ್ರಯತ್ನ ಮಾಡುತ್ತೇವ ಎಂದು ಕೇಂದ್ರ ಸಚಿವರು ಹೇಳಿದರು.

2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆಆಡಿದ ದಿನವೇ ನಾನು ಕೋಲಾರದಲ್ಲಿದ್ದೆ. ಅವತ್ತೇ ಹೇಳಿದ್ದೆ. ಇಲ್ಲಿ ನೀರು ಸಿಗುವುದಿಲ್ಲ, ಸರಕಾರ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ದೆ. ಆದರೂ ಐದೇ ವರ್ಷದಲ್ಲಿ ನೀರು ಕೊಡುತ್ತೇವೆ ಎಂದು ಹೇಳಿದರು. ನಾನು ನಮ್ಮ ಕಡೆಯ ಹಳ್ಳಿ ಭಾಷೆಯಲ್ಲಿ ಅವತ್ತೇ ಹೇಳಿದ್ದೆ. ಎತ್ತಿನಹೊಳೆಯಿಂದ ಎರಡು ವರ್ಷಗಳಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ಳುವೆ ಎಂದು ಹೇಳಿದ್ದೆ. ನನ್ನ ತಲೆಯಲ್ಲಿ ಕೂದಲು ಹೋಯಿತೇ ಹೊರತು ಈ ಜಿಲ್ಲೆಗಳಿಗೆ ನೀರು ಹರಿಯಲಿಲ್ಲ ಎಂದು ಅವರು ಲೇವಡಿ ಮಾಡಿದರು.

ಅವತ್ತಿನ ಕಾಂಗ್ರೆಸ್ ಸರ್ಕಾರ ನೀರು ಕೊಡುವುದಾಗಿ ಹೇಳಿ ಹತ್ತು ವರ್ಷ ಆಗಿದೆ. ಆ ಯೋಜನೆಯ ಹೆಸರಿನಲ್ಲಿ ಎಷ್ಟೆಲ್ಲಾ ಲೂಟಿ ಆಗಿದೆ ಎನ್ನುವುದು ಗೊತ್ತಿದೆ. ಸಿಎಜಿ ವರದಿಯಲ್ಲಿ ಇದೆಲ್ಲವೂ ಇದೆ. ಅನರ್ಹ ಗುತ್ತಿಗೆದಾರರಿಗೆ ಕಾಮಗಾರಿ ಕೊಟ್ಟಿದ್ದಾರೆ, ಕಳಪೆ ಕಾಮಗಾರಿ ಆಗಿ ಹಣ ದುರುಪಯೋಗ ಆಗಿದೆ ಎಂದು ವರದಿಯಲ್ಲಿ ಉಲ್ಲೇಖವಿದೆ. ಈಗ ₹30,000 ಕೋಟಿಗೆ ಎತ್ತಿನಹೊಳೆ ಯೋಜನಾ ವೆಚ್ಚ ತಲುಪಿದೆ. ಇದೆಲ್ಲಾ ನಮ್ಮ ಶ್ರೀನಿವಾಸಪುರದ ಬುದ್ದಿವಂತ ಮಾಜಿ ಶಾಸಕರಿಗೆ ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಬೆಂಗಳೂರಿನ ರೊಚ್ಚು ನೀರಿನಿಂದಾಗಿ ಸಣ್ಣ ಮಕ್ಕಳು ಕೂಡ ಕಾಯಿಲೆಗೆ ತುತ್ತಾಗುತ್ತಿವೆ. ನದಿಯ ನೀರು ಕೊಡುತ್ತೇವೆ ಎಂದವರು ರೊಚ್ಚು ನೀರು ಕೊಟ್ಟು ಮೋಸ ಮಾಡಿದರು. ಈ ಜಿಲ್ಲೆಗಳ ಜನ ಕಾಂಗ್ರೆಸ್ಸಿಗರಿಗೆ ಏನು ದ್ರೋಹ ಮಾಡಿದ್ದರು? ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ವರದಿ ನೀಡಿವೆ. ಅವುಗಳನ್ನು ನೋಡಿದರೆ ಈ ಜಿಲ್ಲೆಗಳಿಗೆ ಆಗಿರುವ ಹಾನಿ ಏನೆಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನು ದೇಶ ವಿದೇಶಗಳಲ್ಲಿ ಪೈಪೋಟಿಗೆ ಬಿದ್ದು ಖರೀದಿ ಮಾಡುತ್ತಿದ್ದರು. ಇವತ್ತು ಈ ಭಾಗದ ತರಕಾರಿಯನ್ನು ಕೇಳುವವರೇ ಇಲ್ಲ. ಈಗ ನೋಡಿದರೆ 2027ಕ್ಕೆ ಎತ್ತಿನಹೊಳೆ ನೀರು ಕೊಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ! ಎತ್ತಿನಹೊಳೆಯ ಯಂತ್ರೋಪಕರಣಗಳು ಈಗಾಗಲೇ ತುಕ್ಕು ಹಿಡಿಯುತ್ತಿವೆ. ಕೋಲಾರ, ಚಿಕ್ಕಬಳ್ಳಾಪುರ ಜನರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರಕ್ಕೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಇನ್ನು ಎಷ್ಟು ದಿನ ಬೇಕು? ಎಷ್ಟು ದಿನ ಹೀಗೆಯೇ ಸುಳ್ಳು ಹೇಳಿಕೊಂಡು ತಿರುಗುತ್ತೀರಿ? ನಾಡಿನ ಜನರು 140 ಶಾಸಕರನ್ನು ಗೆಲ್ಲಿಸಿ ಕೊಟ್ಟು ಕೆಲಸ ಮಾಡಿ ಎಂದು ಹೇಳಿದರೆ, ಇವರು ಮಾತ್ರ ಕುರ್ಚಿ ಕಿತ್ತಾಟ ನಡೆಸುತ್ತಿದ್ದಾರೆ. ಮಾತೆತ್ತಿದರೆ ಕೇಂದ್ರ ಸರ್ಕಾರದ ಬೆರಳು ಮಾಡುತ್ತಾರೆ. ರಾಜ್ಯದ ಕೆಲಸಗಳಿಗೆ ಸಂಬಂಧಿಸಿ ಈವರೆಗೂ ಸಿಎಂ, ಡಿಸಿಎಂ ಸೇರಿ ಯಾವೊಬ್ಬ ಸಚಿವರು ನಮ್ಮನ್ನು ಭೇಟಿ ಮಾಡಿಲ್ಲ. ಆದರೂ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ನಮ್ಮ ಪ್ರಯತ್ನದಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಂದ್ರ ಸರ್ಕಾರ ಮಾವಿಗೆ ಬೆಂಬಲ ಬೆಲೆ ನೀಡಿದೆ. ತಂಬಾಕು ಬೆಳೆಗಾರರ ಹಿತರಕ್ಷಣೆ ಮಾಡಿದ್ದೇವೆ. ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ್ದೇವೆ ಎಂದು ಹೇಳಿದರು.






