ಬೆಂಗಳೂರು: ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಖುದ್ದು ಶಕ್ತಿಕೇಂದ್ರ ವಿಧಾನಸೌಧ ಹಾಗೂ ವಿಕಾಸಸೌಧ ಆವರಣದಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗುತ್ತಿದೆ.
ರಾಜ್ಯದ ಇತರೆ ಸರ್ಕಾರಿ ಕಟ್ಟಡಗಳಲ್ಲಿಯೂ ಸೌರಶಕ್ತಿ ಅಳವಡಿಕೆಗೆ ಪ್ರೇರಣೆ ಸಿಗಬೇಕೆಂಬ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಮಾಡಿದೆ. ಇದರಿಂದ ವಿಧಾನಸೌಧ ಹಾಗೂ ವಿಕಾಸಸೌಧಗಳ ಲಕ್ಷಾಂತರ ರೂ. ವಿದ್ಯುತ್ ಬಿಲ್ ಉಳಿತಾಯವಾಗಲಿದೆ.
ಸದ್ಯ ಈ ಯೋಜನೆಯನ್ನು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸೆಲ್ಕೋ ಫೌಂಡೇಶನ್ ಮೂಲಕ ಜಾರಿಗೊಳಿಸಲಾಗುತ್ತಿದೆ. ವಿಧಾನಸೌಧದಲ್ಲಿ ಜಾಗದ ಕೊರತೆ ಹಾಗೂ ಪರಂಪರಾ ಕಟ್ಟಡದ ಸ್ವರೂಪಕ್ಕೆ ಧಕ್ಕೆಯಾಗಬಾರದೆಂಬ ಕಾರಣದಿಂದ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿಲ್ಲ. ಬದಲಾಗಿ, ಮುಖ್ಯ ಕಟ್ಟಡದ ಹೊರಭಾಗದಲ್ಲಿರುವ ಪಾರ್ಕಿಂಗ್ ಪ್ರದೇಶ ಸೇರಿದಂತೆ ಆವರಣದ ವಿವಿಧ ಭಾಗಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲಾಗುತ್ತಿದೆ.
ವಿಧಾನಸೌಧ ಮತ್ತು ವಿಕಾಸಸೌಧ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ಫಲಕ ಅಳವಡಿಕೆ ನಡೆಯುತ್ತಿದ್ದು, ಇದರಿಂದ ಸುಮಾರು 300 ಕಿಲೋವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದು ಈ ಕಟ್ಟಡಗಳಿಗೆ ಅಗತ್ಯವಿರುವ ಒಟ್ಟು ವಿದ್ಯುತ್ ಬೇಡಿಕೆಯ ಶೇ. 12ರಷ್ಟು ಮಾತ್ರವಾಗಿದ್ದು, ಕಟ್ಟಡದ ವಿಸ್ತೀರ್ಣ ದೊಡ್ಡದಾದರೂ ಸಂಪೂರ್ಣವಾಗಿ ಸೌರ ಫಲಕ ಅಳವಡಿಸಲು ಸಾಧ್ಯವಾಗಿಲ್ಲ.
ವಿಧಾನಸೌಧ ಮತ್ತು ವಿಕಾಸಸೌಧದ ಎರಡು ಕಟ್ಟಡಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಕೊಠಡಿಗಳಿದ್ದು, ಪ್ರತಿ ತಿಂಗಳು 12 ಲಕ್ಷದಿಂದ 15 ಲಕ್ಷ ರೂ.ವರೆಗೆ ವಿದ್ಯುತ್ ಬಿಲ್ ಬರುತ್ತಿದೆ. ಇದೀಗ 300 ಕಿಲೋವಾಟ್ ಸಾಮರ್ಥ್ಯದ ಸೌರ ಫಲಕ ಅಳವಡಿಕೆಯಿಂದ ವರ್ಷಕ್ಕೆ ಸುಮಾರು 20 ಲಕ್ಷ ರೂ. ಉಳಿತಾಯವಾಗುವ ನಿರೀಕ್ಷೆ ಇದೆ. ಯೋಜನೆಯಿಂದ ಎರಡು ವರ್ಷಗಳೊಳಗೆ ಹೂಡಿಕೆಯ ಲಾಭ ದೊರಕಲಿದೆ ಎಂದು ಅಂದಾಜಿಸಲಾಗಿದೆ.






