ನವದೆಹಲಿ: ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ದೇಶದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮಹತ್ವದ ಸಿಹಿ ಸುದ್ದಿ ನೀಡಿದೆ. ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆ (ಡಯಾಬಿಟಿಸ್) ಔಷಧಗಳ ಬೆಲೆ ಶೀಘ್ರದಲ್ಲೇ ಕಡಿಮೆಯಾಗಲಿದೆ ಎಂದು ಇಂದಿನ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಗಂಭೀರ ಹಾಗೂ ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಯ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಲಕ್ಷಾಂತರ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಆರ್ಥಿಕ ನೆರವು ದೊರೆಯಲಿದೆ.

ಕ್ಯಾನ್ಸರ್ ಮತ್ತು ಡಯಾಬಿಟಿಸ್ ಔಷಧಗಳನ್ನು ಅಗ್ಗವಾಗಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದೇ ನಮ್ಮ ಗುರಿ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಹೇಳಿದ್ದಾರೆ.

ಕೇಂದ್ರ ಸರ್ಕಾರ ಔಷಧಗಳ ಮೇಲಿನ ಜಿಎಸ್‌ಟಿ ದರ ಇಳಿಕೆ, ಕೆಲವು ಕ್ಯಾನ್ಸರ್ ಔಷಧಗಳಿಗೆ ಆಮದು ಸುಂಕ ವಿನಾಯಿತಿ ಹಾಗೂ ದೇಶೀಯ ಔಷಧ ಉತ್ಪಾದನೆಗೆ ಉತ್ತೇಜನ ನೀಡಲು ಸಜ್ಜಾಗಿದೆ. ಕ್ಯಾನ್ಸರ್ ಚಿಕಿತ್ಸೆ ದುಬಾರಿಯಾಗಿರುವುದರಿಂದ ಔಷಧ ಬೆಲೆ ಇಳಿಕೆಯಿಂದ ರೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ. ದಿನನಿತ್ಯ ಔಷಧ ಸೇವಿಸುವ ಡಯಾಬಿಟಿಸ್ ರೋಗಿಗಳಿಗೆ ಇದು ದೊಡ್ಡ ನೆರವಾಗಲಿದೆ. ಪರಿಷ್ಕೃತ ದರಗಳು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಜಾರಿಗೆ ಬರಲಿವೆ. ಜನರ ಆರೋಗ್ಯದ ದೃಷ್ಟಿಯಿಂದ ಇದೊಂದು ಮಹತ್ವದ ನಿರ್ಧಾರ ಎಂದು ಹೇಳಲಾಗುತ್ತಿದೆ.











