ನವದೆಹಲಿ: ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್(Union Budget 2026) ಇಂದು ಮಂಡನೆಯಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಆಯವ್ಯಯವನ್ನು ಮಂಡಿಸುತ್ತಿದ್ದಾರೆ. ಬಜೆಟ್ ಕುರಿತು ದೇಶಾದ್ಯಂತ ಭಾರಿ ಕುತೂಹಲವಿದೆ.

ನಿರ್ಮಲಾ ಸೀತಾರಾಮನ್ ಇಂದು ತಮ್ಮ 9ನೇ ಬಜೆಟ್ ಮಂಡಿಸುತ್ತಿದ್ದಾರೆ. ಇದುವರೆಗೆ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆಯು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ (10 ಬಾರಿ) ಅವರ ಹೆಸರಿನಲ್ಲಿ ಇದೆ. ಆ ದಾಖಲೆಗೆ ನಿರ್ಮಲಾ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.

ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ಆಗಮಿಸಿದ್ದಾರೆ. ಈ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆ ಈ ಆಯ್ಕೆ ಮಹತ್ವ ಪಡೆದಿದೆ.

ಬಜೆಟ್‌ಗೆ ಮುನ್ನ 16ನೇ ಹಣಕಾಸು ಆಯೋಗದ ವರದಿ ಸದನದ ಮುಂದೆ ಮಂಡನೆಯಾಗಿದೆ. ಇದರಲ್ಲಿ ರಾಜ್ಯಗಳಿಗೆ ತೆರಿಗೆ ಪಾಲು ಹೇಗಿರಲಿದೆ ಎಂಬುದರ ಮೇಲೆ ಗಮನ ಹರಿಸಲಾಗಿದೆ. ಕರ್ನಾಟಕಕ್ಕೆ ಕಡಿಮೆ ಪಾಲು ಸಿಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ವರದಿ ಬಗ್ಗೆ ಹೆಚ್ಚಿನ ಕುತೂಹಲವಿದೆ.
ಇದನ್ನೂ ಓದಿ: Union Budget 2026: ಆದಾಯ ತೆರಿಗೆ ಕಡಿತ- ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬದಲಾವಣೆ ತರಬಹುದೇ?

ಕರ್ನಾಟಕದ ಪ್ರಮುಖ ನಿರೀಕ್ಷೆಗಳು
ಭದ್ರಾ ಮೇಲ್ದಂಡೆ ಯೋಜನೆಗೆ ₹5,400 ಕೋಟಿ ಅನುದಾನ
ರಾಜ್ಯದಲ್ಲಿರುವ 9 ರೈಲ್ವೇ ಯೋಜನೆಗಳಿಗೆ ಹೆಚ್ಚುವರಿ ಹಣ
ಬೆಂಗಳೂರು ಮೆಟ್ರೋ ಮತ್ತು ಸಬ್ ಅರ್ಬನ್ ರೈಲು ಯೋಜನೆಗೆ ಹೆಚ್ಚಿನ ಅನುದಾನ
ಐಐಟಿ, ಐಐಎಂ, ಐಐಎಸ್ಸಿ, ಐಐಐಟಿ ಮೊದಲಾದ ಕೇಂದ್ರ ಸಂಸ್ಥೆಗಳಿಗೆ ಹೆಚ್ಚಿನ ಹಣ
ಉತ್ತರ ಕರ್ನಾಟಕಕ್ಕೆ ಏಮ್ಸ್ ಆಸ್ಪತ್ರೆ ಮಂಜೂರು ಮಾಡುವ ನಿರೀಕ್ಷೆ ಕೇಂದ್ರ ಸರ್ಕಾರದ ಮೇಲೆ ಕರ್ನಾಟಕ ಇಟ್ಟುಕೊಂಡಿದೆ.











