ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ಹಾಸನದ ನಿವಾಸದ ಬಳಿ ಸೈಟ್ ವಿವಾದ ಮತ್ತಷ್ಟು ಕಗ್ಗಂಟಾಗಿದ್ದು, ಯಶ್ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್ ದೇವರಾಜ್ ನಡುವೆ ಇಂದು ರಸ್ತೆಯಲ್ಲೇ ವಾಗ್ವಾದ ನಡೆದಿದೆ.

ಇಂದು ನಿವೇಶನದ ಬಳಿ ಪುಷ್ಪಾ ಅವರು ಆಗಮಿಸಿದ ಸಂದರ್ಭದಲ್ಲಿ, ಜಿಪಿಎ ಹೋಲ್ಡರ್ ದೇವರಾಜು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಿವೇಶನದ ನಿಜವಾದ ಮಾಲೀಕತ್ವ ಮತ್ತು ದಾಖಲೆಗಳ ಬಗ್ಗೆ ಪುಷ್ಪಾ ಅವರು ಪ್ರಶ್ನೆ ಎತ್ತಿದ್ದು, ನಿವೇಶನಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ತೋರಿಸಿ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ದಾಖಲೆ ವಿಚಾರವಾಗಿ ಆರಂಭವಾದ ಸಂಭಾಷಣೆ ಕೆಲವೇ ಕ್ಷಣಗಳಲ್ಲಿ ತಾರಕಕ್ಕೇರಿದ್ದು, ಈ ಸಂದರ್ಭದಲ್ಲಿ ಪುಷ್ಪಾ ಅವರು ʼನಾನು ಸೆಲೆಬ್ರಿಟಿಯ ತಾಯಿ ಎಂಬ ಕಾರಣಕ್ಕೆ ಇಲ್ಲಿಗೆ ಬಂದಿಲ್ಲ. ನಾನು ಇಲ್ಲಿಯೇ ಹುಟ್ಟಿ ಬೆಳೆದವಳು. ನನ್ನ ಹಕ್ಕುಗಳಿಗಾಗಿ ನಿಲ್ಲುತ್ತಿದ್ದೇನೆʼ ಎಂದು ಹೇಳಿದ್ದಾರೆ ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ. ಅಲ್ಲದೇ ಇನ್ನು ಮುಂದೆ ಈ ನಿವೇಶನದೊಳಗೆ ಕಾಲಿಡಬಾರದು ಎಂದು ದೇವರಾಜು ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜು, ಈ ರೀತಿ ಮಾತನಾಡುವುದು ಸರಿಯಲ್ಲ. ಕಾನೂನು ಪ್ರಕಾರವೇ ಎಲ್ಲವೂ ನಡೆಯಬೇಕು ಎಂದು ಹೇಳಿದ್ದು, ಇದರಿಂದ ವಾತಾವರಣ ಮತ್ತಷ್ಟು ಉದ್ವಿಗ್ನಗೊಂಡಿತು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಪುಷ್ಪಾ ಅವರು, ರೌಡಿಗಳನ್ನು ಕರೆದುಕೊಂಡು ರೌಡಿಸಂ ಮಾಡ್ತಿಯಾ? ಈ ವಿಚಾರವಾಗಿ ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಗೆ ನೇರವಾಗಿ ದೂರು ನೀಡುತ್ತೇನೆ. ಇನ್ನು ಮುಂದೆ ಇಲ್ಲಿಗೆ ಬಂದರೆ ಸುಮ್ಮನಿರಲ್ಲ ಎಂದು ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಘಟನೆಯ ಸಮಯದಲ್ಲಿ ಸುತ್ತಮುತ್ತಲ ನಿವಾಸಿಗಳು ಹಾಗೂ ಸಾರ್ವಜನಿಕರು ಜಮಾಯಿಸಿದ್ದು, ವಿದ್ಯಾನಗರ ಬಡಾವಣೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಹಿರಿಯರು ಹಾಗೂ ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಿದ ಪರಿಣಾಮ, ದೊಡ್ಡ ಗಲಾಟೆ ತಪ್ಪಿದೆ. ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಯಾರು ನಿಜವಾದ ಹಕ್ಕುದಾರರು, ಜಿಪಿಎ ಆಧಾರದ ಮೇಲೆ ದೇವರಾಜು ಅವರಿಗೆ ಇರುವ ಅಧಿಕಾರ ಎಷ್ಟರ ಮಟ್ಟಿಗೆ ಮಾನ್ಯ, ದಾಖಲೆಗಳ ನಿಜಾಸ್ಪದತೆ ಏನು ಎಂಬ ವಿಚಾರಗಳು ಇನ್ನೂ ಸ್ಪಷ್ಟವಾಗಿಲ್ಲ. ಈ ಕಾರಣದಿಂದಾಗಿ ವಿವಾದ ಕಾನೂನು ಹಂತಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕೆಲ ದಿನಗಳಲ್ಲಿ ಕಾಂಪೌಂಡ್ ಹಾಕುವುದಾಗಿ ಯಶ್ ಅವರ ತಾಯಿ ಪುಷ್ಪ ಹೇಳಿದ್ದಾರೆ ಎನ್ನಲಾಗಿದೆ.











