ಭಾರತದ ಏಕೈಕ ಸಕ್ರಿಯ ಹಾಗೂ ಪ್ರಮುಖ ಚಿನ್ನದ ಗಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯ ಸರ್ಕಾರ ಸ್ವಾಮ್ಯದ ‘ಹಟ್ಟಿ ಚಿನ್ನದ ಗಣಿ’ (HGML) ಇದೀಗ ಗಂಭೀರ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಕಳೆದ ವರ್ಷ ನಿಗದಿತ ಗುರಿಗಿಂತಲೂ ಅಧಿಕ ಚಿನ್ನ ಉತ್ಪಾದಿಸಿ ಗಮನ ಸೆಳೆದಿದ್ದ ಈ ಸಂಸ್ಥೆ, 2025ರ ಡಿಸೆಂಬರ್ ಅಂತ್ಯದ ವೇಳೆಗೆ ತನ್ನ ಗುರಿ ಸಾಧಿಸಲು ವಿಫಲವಾಗಿದೆ. ಬರೋಬ್ಬರಿ 285 ಕೆ.ಜಿ. ಚಿನ್ನದ ಉತ್ಪಾದನಾ ಕೊರತೆ ಕಂಡುಬಂದಿದ್ದು, ಇದನ್ನು ಗಣಿ ಇತಿಹಾಸದ ಪ್ರಮುಖ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ಉತ್ಪಾದನೆ ಕುಸಿತ ಕಂಡಿರುವುದು ಕೇವಲ ಕಂಪನಿಗೆ ಮಾತ್ರವಲ್ಲದೆ, ರಾಜ್ಯದ ಬೊಕ್ಕಸಕ್ಕೂ ಪರೋಕ್ಷವಾಗಿ ಹೊಡೆತ ನೀಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಗುರಿಗಿಂತ ಬಹಳ ಕಡಿಮೆ ಉತ್ಪಾದನೆ
ರಾಜ್ಯ ಸರ್ಕಾರದ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಯು 2025ರ ಡಿಸೆಂಬರ್ ಅಂತ್ಯದ ವೇಳೆಗೆ 1,187 ಕೆ.ಜಿ. ಚಿನ್ನ ಉತ್ಪಾದನೆ ಮಾಡುವ ಗುರಿ ಹೊಂದಿತ್ತು. ಆದರೆ ವಾಸ್ತವದಲ್ಲಿ ಕೇವಲ 900–901 ಕೆ.ಜಿ. ಮಾತ್ರ ಚಿನ್ನ ಉತ್ಪಾದನೆಯಾಗಿದೆ. ಇದರೊಂದಿಗೆ ಗುರಿಗಿಂತ ಸುಮಾರು 285 ಕೆ.ಜಿ. ಚಿನ್ನದ ಕೊರತೆ ಉಂಟಾಗಿದೆ ಎಂದು ಕಂಪನಿಯ ಆಂತರಿಕ ದಾಖಲೆಗಳು ಸ್ಪಷ್ಟಪಡಿಸುತ್ತವೆ.
ಅದಿರು ತೆಗೆಯುವಲ್ಲಿಯೂ ಹಿನ್ನಡೆ
ಚಿನ್ನ ಉತ್ಪಾದನೆ ಕುಸಿತಕ್ಕೆ ಅಯಸ್ಕ ಉತ್ಪಾದನೆಯಲ್ಲಿನ ಭಾರೀ ಹಿನ್ನಡೆಯೇ ಪ್ರಮುಖ ಕಾರಣವಾಗಿದೆ. 2025–26ನೇ ಸಾಲಿನ ಮೊದಲ 9 ತಿಂಗಳ ಅವಧಿಯಲ್ಲಿ 5 ಲಕ್ಷ 70 ಸಾವಿರ ಟನ್ ಅದಿರು ತೆಗೆಯುವ ಗುರಿ ಇಟ್ಟಿದ್ದರೆ, ವಾಸ್ತವದಲ್ಲಿ 4,39,434 ಟನ್ ಮಾತ್ರ ಅದಿರನ್ನು (ಅಯಸ್ಕ) ಹೊರತೆಗೆಯಲಾಗಿದೆ. ಇದರಿಂದ 1,30,566 ಟನ್ ಅದಿರು ಕೊರತೆ ಉಂಟಾಗಿದೆ.

ಗಣಿಯ ಆಧುನೀಕರಣದ ಭಾಗವಾಗಿ ಆರಂಭಿಸಲಾದ ‘ನ್ಯೂ ಸರ್ಕ್ಯುಲರ್ ಶಾಫ್ಟ್’ ಮೂಲಕ ದಿನಕ್ಕೆ 3,000 ಟನ್ ಅಯಸ್ಕ ಸಂಸ್ಕರಣೆ ಮಾಡಿ, ವರ್ಷಕ್ಕೆ 3 ಟನ್ ಚಿನ್ನ ಉತ್ಪಾದನೆ ಮಾಡುವ ಗುರಿ ಇಡಲಾಗಿತ್ತು. ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯಿಂದಲೂ ನಿರೀಕ್ಷಿತ ಮಟ್ಟದ ಉತ್ಪಾದನೆ ಸಾಧ್ಯವಾಗಿಲ್ಲ. ತಾಂತ್ರಿಕ ದೋಷಗಳು, ಸಮರ್ಪಕ ಯೋಜನೆಯ ಕೊರತೆ ಹಾಗೂ ಆಡಳಿತಾತ್ಮಕ ವೈಫಲ್ಯವೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.
ಕುಸಿತಕ್ಕೆ ಕಾರಣವೇನು?
ಅಯಸ್ಕದ ಲಭ್ಯತೆ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸ, ನ್ಯೂ ಸರ್ಕ್ಯುಲರ್ ಶಾಫ್ಟ್ ಯೋಜನೆಯಿಂದ ನಿರೀಕ್ಷಿತ ಫಲಿತಾಂಶ ಲಭ್ಯವಾಗದಿರುವುದು, ತಾಂತ್ರಿಕ ಮತ್ತು ಆಡಳಿತಾತ್ಮಕ ನಿರ್ವಹಣೆಯ ಕೊರತೆ ಹಾಗೂ ಸಮರ್ಪಕ ಮುಂಚಿತ ಯೋಜನೆ ಹಾಗೂ ಮೇಲ್ವಿಚಾರಣೆಯ ಅಭಾವ ಚಿನ್ನದ ಉತ್ಪಾದನೆ ಕೊರತೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅದಾಗ್ಯೂ, ಈ ಕೊರತೆಗೆ ಅಧಿಕೃತ ಕಾರಣ ಏನು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ.

ರಾಜ್ಯ ಮತ್ತು ದೇಶದ ಮೇಲೆ ಪರಿಣಾಮ
ಚಿನ್ನದ ಬೆಲೆ ಏರಿಕೆಯ ನಡುವೆಯೂ ಉತ್ಪಾದನೆ ಕುಸಿತಗೊಂಡಿರುವುದು ರಾಜ್ಯ ಸರ್ಕಾರದ ಆದಾಯದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಹಟ್ಟಿ ಚಿನ್ನದ ಗಣಿ ರಾಜ್ಯದ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾಗಿರುವುದರಿಂದ, ಇದರ ಲಾಭಾಂಶ ರಾಜ್ಯ ಬೊಕ್ಕಸಕ್ಕೆ ಮಹತ್ವದ ಆದಾಯ ಮೂಲವಾಗಿದೆ. ಉತ್ಪಾದನೆ ನಿರಂತರವಾಗಿ ಇಳಿಕೆಯಾಗಿದರೆ, ರಾಜ್ಯದ ಹಣಕಾಸು ಸ್ಥಿತಿಗೂ ಹೊಡೆತ ಬೀಳುವ ಆತಂಕವಿದೆ.

ಗಣಿ ಕಾರ್ಮಿಕರ ಭವಿಷ್ಯ ಅತಂತ್ರ?
ಇದಲ್ಲದೆ, ಈ ಗಣಿಯ ಮೇಲೆ ಅವಲಂಬಿತ ಸಾವಿರಾರು ಕಾರ್ಮಿಕರು ಹಾಗೂ ಕುಟುಂಬಗಳ ಜೀವನೋಪಾಯಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ. ಚಿನ್ನದ ಗಣಿಯ ಮೇಲೆ ಅವಲಂಬಿತ ಸಾವಿರಾರು ಕುಟುಂಬಗಳ ಮೇಲೆ ಉತ್ಪಾದನಾ ಕುಸಿತದ ಪರಿಣಾಮ ಬೀರಿದೆ. ಕಾರ್ಮಿಕರ ಬೋನಸ್, ಪ್ರೋತ್ಸಾಹಧನ ಹಾಗೂ ವಿವಿಧ ಕಲ್ಯಾಣ ಯೋಜನೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಈ ಕುರಿತು ಗಣಿಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸ್ಪಷ್ಟ ಪ್ರತಿಕ್ರಿಯೆ ಲಭ್ಯವಾಗಿಲ್ಲ.











