ಒಂದೆಡೆ ದೇಶದ ಜನತೆಗೆ ‘ವಿಶ್ವಗುರು ಭಾರತʼದ ಭವ್ಯ ಭವಿಷ್ಯದ ಕನಸು ಕಾಣಲು ಪ್ರೇರೇಪಿಸಲಾಗುತ್ತಿದೆ. ಇನ್ನೊಂದೆಡೆ ದೇಶದ ಯುವಕರು ಯಾವುದೋ ದೇಶಗಳ ಯುದ್ಧಗಳ ನಡುವೆ ಅನ್ಯಾಯವಾಗಿ ಬಲಿಯಾಗುತ್ತಿದ್ದಾರೆ. ಮತ್ತೊಂದೆಡೆ, ಭವ್ಯ ಭಾರತದ ಹಲವಾರು ಇಂಜಿನಿಯರ್‌ಗಳು ಸೈಬರ್ ಕ್ರೈಮ್ ಮಾಫಿಯಾದೊಳಗೆ ದಿಗ್ಭಂಧನಕ್ಕೊಳಗಾಗಿ ಇನ್ಯಾರನ್ನೋ ವಂಚಿಸುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಇದು ಆತ್ಮ ನಿರ್ಭರ ಭಾರತ ದೇಶದ ಯುವಕರ ಅವಸ್ಥೆ.

ಭಾರತೀಯ ಯುವಕರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಗ್ಗದ ‘ಬಲಿಪಶು’ಗಳಾಗಿ (Victims) ಕಾಣುತ್ತಿದ್ದಾರೆ. ರಷ್ಯಾದಲ್ಲಿ ದೈಹಿಕ ಗುಲಾಮಗಿರಿ (ಯುದ್ಧ ಮಾಡಲು ಒತ್ತಾಯಿಸುವುದು). ಆಗ್ನೇಯ ಏಷ್ಯಾದಲ್ಲಿ ಡಿಜಿಟಲ್ ಗುಲಾಮಗಿರಿ (ಕಂಪ್ಯೂಟರ್ ಮುಂದೆ ಕೂರಿಸಿ ವಂಚನೆ ಮಾಡಿಸುವುದು) ಇದು ನಮ್ಮ ದೇಶದ ಆರ್ಥಿಕ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ.

ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಓದಿದ ಡಿಗ್ರಿಗೆ ಸರಿಯಾದ ಕೆಲಸ ಸಿಗುತ್ತಿಲ್ಲ. ಕೆಲಸ ಕೊಡಿ ಅಂದ್ರೆ ಪಕೋಡಾ ಮಾರಿ ಅನ್ನುವ ಪ್ರಧಾನಿ.. ಕುಟುಂಬವನ್ನು ನೋಡಿಕೊಳ್ಳಬೇಕು, ಮದುವೆ ಮಾಡಿ ಸಂಸಾರ ಮಾಡಬೇಕು ಎಂಬೆಲ್ಲಾ ಕನಸು ಕಾಣುತ್ತಿರುವ ವಿದ್ಯಾವಂತ ಯುವಕರು ಕಡೆಯದಾಗಿ ಹೋಗಿ ಬೀಳುತ್ತಿರುವುದು ಇಂತಹಾ ಜಾಲಕ್ಕೆ. ಆದರೆ, ದೇಶದ ಯಾವುದೇ ಮುಖ್ಯ ವಾಹಿನಿಯಲ್ಲಿ ಈ ಬಗ್ಗೆ ಗಂಭೀರವಾದ ಚರ್ಚೆ ನಡೆಯುತ್ತಿಲ್ಲ.. ಮಾಧ್ಯಮಗಳು ಯಾರ ಮನೆಯಲ್ಲಿ ಬೀಫ್ ಇದೆ? ಯಾರು ಯಾರನ್ನು ಲವ್ ಮಾಡ್ತಿದ್ದಾರೆ ಎಂಬಿತ್ಯಾದಿ ಅರ್ಥಹೀನ ವಿಷಯಗಳ ಕಡೆಗೆ ಜನರ ಗಮನ ಸೆಳೀತಿದೆ. ಇದು ಈ ಕಾಲದ ಅತ್ಯಂತ ದೊಡ್ಡ ದುರಂತ.

ಗೋಲ್ಡನ್ ಟ್ರಯಾಂಗಲ್ ಎಂಬ ಅಪರಾಧಿಗಳ ಸ್ವರ್ಗ!
ಒಂದೆಡೆ ಆಗ್ನೇಯ ಏಷ್ಯಾದ ‘ಗೋಲ್ಡನ್ ಟ್ರಯಾಂಗಲ್’ ಎಂಬ ಡಿಜಿಟಲ್ ಗುಲಾಮಗಿರಿಯ ಕೂಪ, ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಡೇಟಾ ಎಂಟ್ರಿ, ಸಾಫ್ಟ್ವೇರ್ ಇಂಜಿನಿಯರಿಂಗ್ ಕೆಲಸ ಕೊಡಿಸ್ತೀವಿ ಅಂತ ನಂಬಿಸಿ ಭಾರತೀಯ ಯುವಕರನ್ನು ಟಾರ್ಗೆಟ್ ಮಾಡುವ ಈ ಸೈಬರ್ ಕ್ರೈಮ್ ಮಾಪಿಯಾದವರು ಥಾಯ್ಲೆಂಡ್, ಸಿಂಗಾಪುರ, ಮಲೇಷಿಯಾ ಮೊದಲಾದ ಕಡೆಗಳಿಗೆ ಕೆಲಸದ ಆಮಿಷ ಒಡ್ಡಿ ಭಾರತೀಯ ಯುವಕ ಯುವತಿಯರನ್ನು ಕರೆಸುತ್ತಿದ್ದಾರೆ.
ಒಂದು ಬಾರಿ ಅಲ್ಲಿ ತಲುಪಿದರೆ ಸಾಕು ನಂತರ ಕಿಡ್ನ್ಯಾಪ್.! ಬಳಿಕ ನೋ ಫೋನ್, ನತಿಂಗ್.! ಅವರು ಕೊಟ್ಟ ಟಾರ್ಗೆಟ್ ಮುಗಿಸಿದ್ರೆ ಕೂಲಿ. ಅದೂ ಜುಜುಬಿ. ಪಾಸ್ ಪೋರ್ಟ್ ಮೊದಲೇ ಅವರು ತೆಗೆದಿಟ್ಟಿರುತ್ತಾರೆ. ಅಷ್ಟಕ್ಕೂ ಅವರು ಕೊಡುವ ಕೆಲಸ ಏನು ಗೊತ್ತಾ? ದಿನಾ ಇಂತಿಷ್ಟು ಮಂದಿಯನ್ನು ಸೈಬರ್ ಮೂಲಕ ವಂಚಿಸೋದು, ಅವರಿಂದ ಹಣವನ್ನು ಆನ್ ಲೈನ್ ನಲ್ಲಿ ಲೂಟಿ ಮಾಡೋದು. ಊಟ, ನಿದ್ದೆ ಬೇಕಂದ್ರೆ ಇಂತಿಷ್ಟು ಮಂದಿಯನ್ನು ಮೋಸ ಮಾಡಲೇಬೇಕು ಎಂಬ ಷರತ್ತು.

ಈ ಮಾಫಿಯಾ ಎಷ್ಟು ಕರಾರುವಕ್ಕಾಗಿ ಕೆಲಸ ಮಾಡ್ತಿದೆ ಗೊತ್ತಾ? ಗೋಲ್ಡನ್ ಟ್ರಯಾಂಗಲ್ ಎಂಬ ಪ್ರದೇಶ. ಗೋಲ್ಡನ್ ಟ್ರಯಾಂಗಲ್ ಎಂದರೆ ಮ್ಯಾನ್ಮಾರ್, ಲಾವೋಸ್ ಮತ್ತು ಥೈಲ್ಯಾಂಡ್ ದೇಶಗಳ ಗಡಿಗಳು ಸಂಧಿಸುವ ಪ್ರದೇಶ. ರುವಾಕ್ ಮತ್ತು ಮೇಕಾಂಗ್ ನದಿಗಳು ಸೇರುವ ಈ ಭಾಗವು ಪರ್ವತಗಳಿಂದ ಆವೃತವಾಗಿದ್ದು, ದಟ್ಟವಾದ ಕಾಡುಗಳನ್ನು ಹೊಂದಿದೆ. ವಿವಿಧ ದೇಶದ ಗಡಿ, ನದಿ ಹಾಗೂ ಪರ್ವತ ಇರುವುದರಿಂದ ಯಾವುದೇ ದೇಶಕ್ಕೂ ಸಂಪೂರ್ಣ ಸಾರ್ವಭೌಮತ್ವ ಇಲ್ಲ. ಹಾಗಾಗಿಯೇ ಇದು ಅಪರಾಧಿಗಳಿಗೆ ಸ್ವರ್ಗ.!
ಹಲವು ದಶಕಗಳ ಕಾಲ ಈ ಪ್ರದೇಶವು ವಿಶ್ವದ ಅತಿದೊಡ್ಡ ಅಫೀಮು (Opium) ಮತ್ತು ಹೆರಾಯಿನ್ ಉತ್ಪಾದನಾ ಕೇಂದ್ರವಾಗಿತ್ತು. 1970ರ ದಶಕದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಯಾದ CIA ಈ ಪ್ರದೇಶಕ್ಕೆ ‘ಗೋಲ್ಡನ್ ಟ್ರಯಾಂಗಲ್’ ಎಂಬ ಹೆಸರು ನೀಡಿತು. ಇಲ್ಲಿನ ಗುಂಪುಗಳು ಜಗತ್ತಿನಾದ್ಯಂತ ಡ್ರಗ್ಸ್ ಸರಬರಾಜು ಮಾಡುತ್ತಿದ್ದವು.

ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶವು ಡ್ರಗ್ಸ್ನಿಂದ ಸೈಬರ್ ಅಪರಾಧಗಳ ಕಡೆಗೆ ಹೊರಳಿದೆ. ಇಲ್ಲಿನ ಕೆಲವು ಭಾಗಗಳಲ್ಲಿ ಆಯಾ ದೇಶಗಳ ಕಾನೂನು ನಡೆಯುವುದಿಲ್ಲ. ಹಾಗಾಗಿ, ಚೀನಾ ಮೂಲದ ಮಾಫಿಯಾಗಳು ಇಲ್ಲಿ ಬೃಹತ್ ಕ್ಯಾಸಿನೋಗಳನ್ನು ಮತ್ತು ರೆಸಾರ್ಟ್ಗಳನ್ನು ನಿರ್ಮಿಸಿವೆ. ‘ಪಿಗ್ ಬುಚರಿಂಗ್’ (Pig Butchering) ಎನ್ನುವ ಆನ್ಲೈನ್ ವಂಚನೆಗಳನ್ನು ಇಲ್ಲಿಂದಲೇ ನಡೆಸಲಾಗುತ್ತದೆ. ಸಾವಿರಾರು ಜನರನ್ನು (ವಿಶೇಷವಾಗಿ ಭಾರತೀಯರು ಮತ್ತು ಫಿಲಿಪೈನ್ಸ್ನವರು) ಒತ್ತೆ ಇರಿಸಿಕೊಂಡು ಈ ವಂಚನೆ ಮಾಡಿಸಲಾಗುತ್ತದೆ.
ಭಾರತೀಯರಿಗೆ ಬಲೆ ಬೀಸುವುದು ಹೇಗೆ?
“ಡಿಜಿಟಲ್ ಮಾರ್ಕೆಟಿಂಗ್” ಅಥವಾ “ಡೇಟಾ ಎಂಟ್ರಿ” ಕೆಲಸದ ಹೆಸರಿನಲ್ಲಿ ಯುವಕರನ್ನು ಥೈಲ್ಯಾಂಡ್ ಅಥವಾ ಕಾಂಬೋಡಿಯಾಕ್ಕೆ ಕರೆಸಿಕೊಳ್ಳಲಾಗುತ್ತದೆ. ಒಂದು ಬಾರಿ ಅವರು ವಿಮಾನ ನಿಲ್ದಾಣದಲ್ಲಿ ಇಳಿದರೆ ಸಾಕು, ಅವರನ್ನು ನೇರವಾಗಿ ಮ್ಯಾನ್ಮಾರ್ ಅಥವಾ ಲಾವೋಸ್ನ ಗಡಿ ದಾಟಿಸಿ, ಸಶಸ್ತ್ರ ಕಾವಲು ಇರುವ ಕಾಂಪೌಂಡ್ಗಳ ಒಳಗೆ ಕೂಡಿ ಹಾಕಲಾಗುತ್ತದೆ. ಬಳಿಕ ವಂಚಿಸಲು ಬೇಕಾದ ಡೇಟಾಗಳನ್ನು ನೀಡಿ, ಇಂತಿಷ್ಟು ಮಂದಿಯನ್ನು ವಂಚಿಸಲೇಬೇಕೆಂಬ ಟಾರ್ಗೆಟ್ ನೀಡಲಾಗುತ್ತದೆ. ವಂಚನೆಯ ಟಾರ್ಗೆಟ್ ಮುಟ್ಟದಿದ್ದರೆ ಅಥವಾ ತಪ್ಪಿಸಿಕೊಳ್ಳಲು ಯತ್ನಿಸಿದರೆ ಚಾಕುವಿನಿಂದ ಇರಿಯುವುದು, ವಿದ್ಯುತ್ ಶಾಕ್ ನೀಡುವುದು ಅಥವಾ ದೈಹಿಕವಾಗಿ ಹಲ್ಲೆ ಮಾಡುವಂತಹ ಕ್ರೌರ್ಯ ನಡೆಯುತ್ತದೆ. ಇದು ಯಾವುದು ಕೂಡಾ ಅತಿಶಯೋಕ್ತಿಯಲ್ಲ. ಅಲ್ಲಿಂದ ಬದುಕುಳಿದು ಬಂದವರೇ ಹೇಳಿಕೊಂಡ ಕ್ರೂರ ವಾಸ್ತವಗಳಿವು.
ಈ ಪ್ರದೇಶದ ಕೆಲವು ಭಾಗಗಳಲ್ಲಿ ಮ್ಯಾನ್ಮಾರ್ನ ಸೇನೆ ಅಥವಾ ಅಲ್ಲಿನ ಸ್ಥಳೀಯ ಬಂಡುಕೋರರ ಗುಂಪುಗಳ ನಿಯಂತ್ರಣವಿದೆ. ಹೀಗಾಗಿ, ಯಾವುದೇ ದೇಶದ ಅಧಿಕೃತ ಪೊಲೀಸ್ ಪಡೆಗಳು ಈ ಪ್ರದೇಶದ ಒಳಗೆ ಪ್ರವೇಶಿಸಿ ಜನರನ್ನು ರಕ್ಷಿಸುವುದು ಅಸಾಧ್ಯದ ಮಾತಾಗಿದೆ. ಇದು ಒಂದು ರೀತಿಯಲ್ಲಿ “ಕಾನೂನು ಇಲ್ಲದ ಭೂಮಿ” ಆಗಿ ಭೂಮಿಯ ಮೇಲೆ ಉಳಿದಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಾಯಭಾರ ಕಚೇರಿಗಳ ದಾಖಲೆಗಳ ಪ್ರಕಾರ, ಕಾಂಬೋಡಿಯಾದಿಂದ ಈವರೆಗೆ ಸುಮಾರು 1,200 ರಿಂದ 1,500 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಿ ತಾಯ್ನಾಡಿಗೆ ಕರೆತರಲಾಗಿದೆ. ಮ್ಯಾನ್ಮಾರ್ನ ಮ್ಯಾವಾಡ್ಡಿ (Myawaddy) ಎಂಬ ಅತ್ಯಂತ ಅಪಾಯಕಾರಿ ಪ್ರದೇಶದಿಂದ ಸುಮಾರು 400 ರಿಂದ 500 ಜನರನ್ನು ರಕ್ಷಿಸಲಾಗಿದೆ. ಲಾವೋಸ್ನಿಂ ಸುಮಾರು 150 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಮೂಲಗಳ ಪ್ರಕಾರ ಸರಕಾರದ ದಾಖಲೆಗಳಲ್ಲಿ ರಕ್ಷಿಸಲ್ಪಟ್ಟವರ ಸಂಖ್ಯೆ ಸುಮಾರು 2,500 ರಿಂದ 3,000 ದಾಟಿದೆ. ಆದರೆ, ತನಿಖಾ ವರದಿಗಾರರು, ಸೈಬರ್ ಕ್ರೈಂ ತಜ್ಞರು ಮತ್ತು ಅಲ್ಲಿಂದ ತಪ್ಪಿಸಿಕೊಂಡು ಬಂದವರ ಮಾಹಿತಿಯ ಪ್ರಕಾರ ಈ ಸಂಖ್ಯೆ ಭೀಕರವಾಗಿದೆ. ಕಾಂಬೋಡಿಯಾ ಒಂದರಲ್ಲೇ: ಸುಮಾರು 5,000 ಕ್ಕೂ ಹೆಚ್ಚು ಭಾರತೀಯರು ಇಂದಿಗೂ ಸೈಬರ್ ವಂಚನೆಯ ಕೇಂದ್ರಗಳಲ್ಲಿ (Scam Centers) ಕೆಲಸ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಮ್ಯಾನ್ಮಾರ್, ಲಾವೋಸ್ ಮತ್ತು ಥೈಲ್ಯಾಂಡ್ ಗಡಿಭಾಗಗಳನ್ನು ಒಳಗೊಂಡಂತೆ ಒಟ್ಟು 10,000 ದಿಂದ 15,000 ಭಾರತೀಯರು ಈ ಜಾಲದಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ವರದಿ ಮಾಡಿದ್ದವು.

ಈ ವ್ಯತ್ಯಾಸಕ್ಕೆ ಮೂರು ಮುಖ್ಯ ಕಾರಣಗಳಿವೆ:
1. ದಾಖಲೆಗಳ ಕೊರತೆ: ಅನೇಕ ಯುವಕರು ಪ್ರವಾಸಿ ವೀಸಾದಲ್ಲಿ (Tourist Visa) ಅಲ್ಲಿಗೆ ಹೋಗಿರುತ್ತಾರೆ. ಅವರು ಕೆಲಸಕ್ಕೆ ಸೇರಿಕೊಂಡ ಮೇಲೆ ಅವರ ಪಾಸ್ಪೋರ್ಟ್ಗಳನ್ನು ಕಿತ್ತುಕೊಳ್ಳಲಾಗುತ್ತದೆ. ಹೀಗಾಗಿ ಅವರು ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ.
2. ಗುಪ್ತ ಕಾರ್ಯಾಚರಣೆ: ಇವು ಕಾಡಿನ ಮಧ್ಯದಲ್ಲಿ ಅಥವಾ ಖಾಸಗಿ ಸೇನೆಗಳ (Militias) ನಿಯಂತ್ರಣದಲ್ಲಿರುವ ಪ್ರದೇಶಗಳಾಗಿರುವುದರಿಂದ ಅಧಿಕೃತವಾಗಿ ಗಣತಿ ಮಾಡುವುದು ಅಸಾಧ್ಯ.
3. ಭಯ: ಅನೇಕ ಯುವಕರು ಅಲ್ಲಿಂದ ವಾಪಸ್ ಬಂದರೂ, ತಾವು ಮಾಡಿದ “ವಂಚನೆಯ ಕೆಲಸ”ದ ಬಗ್ಗೆ ಅಥವಾ ಏಜೆಂಟ್ಗಳ ಬೆದರಿಕೆಗೆ ಹೆದರಿ ಪೊಲೀಸರಿಗೆ ದೂರು ನೀಡುವುದಿಲ್ಲ.
ಮುಖ್ಯವಾಗಿ ಈ ಮೂರು ವಿಚಾರಗಳಿಂದಾಗಿ ಅಲ್ಲಿ ಸಿಲುಕಿಕೊಂಡಿರುವ ಭಾರತೀಯರ ಸಂಖ್ಯೆ ಇದುವರೆಗೂ ಸರಿಯಾಗಿ ಲಭ್ಯವಾಗದೆ ಉಳಿದಿದೆ. ಆದರೆ, ಇವರೆಲ್ಲರೂ ದೇಶದಲ್ಲಿ ಸರಿಯಾದ ಉದ್ಯೋಗವಿಲ್ಲದೆ, ಹೊರ ದೇಶದಲ್ಲಿ ದುಡಿದು ಬದುಕು ಕಟ್ಟಿಕೊಳ್ಳುವ ಆಸೆಯಿಂದ ಹೋದವರಂತೂ ದಿಟ!

‘ಗೋಲ್ಡನ್ ಟ್ರಯಾಂಗಲ್’ ಭಾಗದಲ್ಲಿ ನಡೆಯುತ್ತಿರುವ ಸೈಬರ್ ವಂಚನೆಯ ಜಾಲವು ಇಂದು ಆಧುನಿಕ ಜೀತ ಪದ್ಧತಿಯನ್ನು ಮರುಸೃಷ್ಟಿಸಿದೆ. Data Entry ಕೆಲಸದ ಹೆಸರಿನಲ್ಲಿ ಅಲ್ಲಿಗೆ ಕರೆದೊಯ್ಯಲ್ಪಡುವ ಯುವಕರನ್ನು ಕತ್ತಲೆ ಕೋಣೆಗಳಲ್ಲಿ ಕೂರಿಸಿ, ಅವರ ಪಾಸ್ಪೋರ್ಟ್ಗಳನ್ನು ಕಿತ್ತುಕೊಂಡು, ವಿಶ್ವದಾದ್ಯಂತ ಜನರನ್ನು ವಂಚಿಸಲು ಬಳಸಿಕೊಳ್ಳಲಾಗುತ್ತಿದೆ. ಇದು ಕೇವಲ ಕ್ರಿಮಿನಲ್ ಚಟುವಟಿಕೆಯಲ್ಲ, ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆ. ಆದರೆ, ನಮ್ಮ ವಿದೇಶಾಂಗ ಇಲಾಖೆಯ ಪ್ರತಿಕ್ರಿಯೆಗಳು ಕೇವಲ ‘ಅಡ್ವೈಸರಿ’ ಅಥವಾ ಎಚ್ಚರಿಕೆ ಪತ್ರಗಳಿಗೆ ಸೀಮಿತವಾಗುತ್ತಿರುವುದು ದುರಂತ. ವಿಶ್ವಗುರು ಎಂದು ಬಡಾಯಿ ಮಾತ್ರ ಕೊಚ್ಚಿಕೊಳ್ಳುವ ಸರಕಾರವು ಇಲ್ಲಿ ಸಿಲುಕಿರುವ ಭಾರತೀಯರನ್ನು ಸಂಪೂರ್ಣವಾಗಿ ರಕ್ಷಿಸಲು ಪರದಾಡುತ್ತಲೇ ಇದೆ. ಕುಟುಂಬಸ್ಥರು ತಮ್ಮ ಮಕ್ಕಳನ್ನು ಕಾಯುತ್ತಲೇ ಇದ್ದಾರೆ.

ಇದನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು? ವಿಶ್ವದ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ ಎಂದು ನಾವು ಬೆನ್ನು ತಟ್ಟಿಕೊಳ್ಳುತ್ತಿರುವಾಗಲೇ, ನಮ್ಮ ಯುವಕರು ಲಕ್ಷಾಂತರ ರೂಪಾಯಿ ಸಾಲ ಮಾಡಿ, ಪ್ರಾಣದ ಹಂಗು ತೊರೆದು ರಷ್ಯಾಕ್ಕೆ ಏಕೆ ಹೋಗುತ್ತಿದ್ದಾರೆ?
ಗೋಲ್ಡನ್ ಟ್ರಯಾಂಗಲ್ನ ಡಿಜಿಟಲ್ ಜೈಲುಗಳು ಮತ್ತು ರಷ್ಯಾದ ರಕ್ತಸಿಕ್ತ ಕಂದಕಗಳು ನಮಗೆ ನೀಡುತ್ತಿರುವ ಎಚ್ಚರಿಕೆ ಒಂದೇ: “ಒಂದು ದೇಶ ತನ್ನ ಯುವಜನತೆಗೆ ತನ್ನ ಮಣ್ಣಿನಲ್ಲೇ ಬದುಕುವ ದಾರಿ ತೋರಿಸದಿದ್ದರೆ, ಆ ಯುವಜನತೆ ಪರಕೀಯರ ಯುದ್ಧಕ್ಕೆ ಮಣ್ಣಾಗುವುದು ಅನಿವಾರ್ಯವಾಗುತ್ತದೆ.”
ರಷ್ಯಾದ ರಣರಂಗ: ಕೂಲಿ ಸೈನಿಕರಾಗುತ್ತಿರುವ ಭಾರತೀಯರು
ಇತ್ತ ರಷ್ಯಾದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ರಷ್ಯನ್ ಸೇನೆಯಲ್ಲಿ ಸಹಾಯಕರ ಕೆಲಸ ಎಂದು ಹೋದ ಯುವಕರು ಇಂದು ಉಕ್ರೇನ್ ಗಡಿಯಲ್ಲಿ ಯಾರೋ ಹೂಡಿದ ಯುದ್ಧಕ್ಕೆ ಬಲಿಯಾಗುತ್ತಿದ್ದಾರೆ. ಸೆಕ್ಯುರಿಟಿ ಗಾರ್ಡ್ ಕೆಲಸ, ಭದ್ರತಾ ಪಡೆಯಲ್ಲಿ ಸಹಾಯಕರ ಕೆಲಸ ಎಂಬೆಲ್ಲಾ ಆಕರ್ಷಕ ಕೆಲಸದ ಆಮಿಷ ಒಡ್ಡಿ ಭಾರತೀಯ ಯುವಕರನ್ನು ರಣರಂಗಕ್ಕೆ ದೂಡುತ್ತಿರುವ ಇನ್ನೊಂದು ಜಾಲ ರಷ್ಯಾ ಭಾಗದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ.

ರಷ್ಯಾ ದೇಶವು ಉಕ್ರೇನ್ ಜೊತೆಗಿನ ಯುದ್ಧಕ್ಕೆ ಬಾಡಿಗೆ ಸೇನಾ ಪಡೆಯ ಸೇವೆ ಪಡೆಯುತ್ತಿದೆ. ಈ ಸೇನೆಗಳ ಚಟುವಟಿಕೆಗಳು ಯಾವುದೇ ಗ್ಯಾಂಗ್ ಗಳ ಚಟುವಟಿಕೆಗಳಿಗಿಂತ ಕಮ್ಮಿಯಿಲ್ಲ. ಅಕ್ರಮ ಬಂಧನ, ಅಪಹರಣ, ಜೀತಗಾರಿಕೆ, ಎಲ್ಲವೂ ಈ ಗ್ಯಾಂಗ್ ಗಳು ಸೇನೆಯ ಹೆಸರಿನಲ್ಲಿ ನಡೆಸುತ್ತವೆ. ಭಾರತದ ನೂರಾರು ಯುವಕರನ್ನು ಕೆಲಸಕ್ಕೆಂದು ಕರೆಸಿ ಅವರ ಕೈಗಳಿಗೆ ಬಂದೂಕುಗಳನ್ನು ಕೊಟ್ಟು ಯುದ್ಧ ರಂಗಕ್ಕೆ ಒತ್ತಾಯಪೂರ್ವಕವಾಗಿ ತಳ್ಳಿ ಬಿಡಲಾಗುತ್ತಿದೆ.
ಈಗಾಗಲೇ 200 ಕ್ಕೂ ಅಧಿಕ ಭಾರತೀಯರನ್ನು ಇಂತಹ ಸೇವೆಗಳಿಂದ ಭಾರತವು ಬಿಡಿಸಿ ತಾಯ್ನಾಡಿಗೆ ಮರಳಿ ಕರೆತಂದಿದೆ. ಆದರೆ, ಈ ಯುವಕರು ದೇಶ ಬಿಟ್ಟು ಪರದೇಶಿ ಮಾಫಿಯಾಗಳಿಗೆ ಸುಲಭದ ತುತ್ತಾಗುತ್ತಿರುವುದು ಹೇಗೆಂಬ ಬಗ್ಗೆ ಯಾಕೆ ಎಲ್ಲೂ ಪ್ರೈಮ್ ಟೈಮ್ ಚರ್ಚೆಯಾಗುತ್ತಿಲ್ಲ? ನಿರುದ್ಯೋಗ ಮತ್ತು ವಿದೇಶಿ ಉದ್ಯೋಗ ಎಂಬ ಅಡಕತ್ತರಿಯಲ್ಲಿ ಭಾರತೀಯ ಯುವಕರನ್ನು ಹಾಕಿ ಹೇಗೆ ದೇಶವನ್ನು ನಾವು ಕಟ್ಟಬಲ್ಲೆವು? ಯುವ ಜನಾಂಗಕ್ಕೆ ಉದ್ಯೋಗದ ಭರವಸೆಯನ್ನೇ ಕೊಡದೆ, ಭವಿಷ್ಯದ ಕನಸನ್ನೇ ಕಾಣಿಸದೆ ನಾವು ಹೇಗೆ ವಿಶ್ವ ಗುರುವಾಗಬಲ್ಲೆವು?

ಈ ಸಮಸ್ಯೆಯ ಮೂಲ ಇರುವುದು ನಮ್ಮ ದೇಶದ ಒಳಗೇ ಇದೆ. ಇಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಇದ್ದ ಉದ್ಯೋಗಗಳೂ ಮಾಯವಾಗುತ್ತಿವೆ. ಪ್ರತಿಷ್ಠಿತ ಪದವಿಗಳನ್ನು ಹಿಡಿದು ಬೀದಿ ಅಲೆಯುವ ಯುವಕರಿಗೆ “ಎಲ್ಲಿಯಾದರೂ ಸರಿ, ಒಂದು ಕೆಲಸ ಸಿಕ್ಕರೆ ಸಾಕು” ಎಂಬ ಹತಾಶೆ ಕಾಡುತ್ತಿದೆ. ಆ ಹತಾಶೆಯನ್ನೇ ಈ ಮಾನವ ಕಳ್ಳಸಾಗಣೆದಾರರು (Human Traffickers) ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ.
ರಾಜತಾಂತ್ರಿಕವಾಗಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಪ್ರಬಲವಾಗಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದಲ್ಲಿ, ವಿದೇಶಿ ಮಾಫಿಯಾಗಳಿಗೆ ಭಾರತೀಯರನ್ನು ಮಾಡುತ್ತಿರುವ ಈ ಮೋಸದ ಏಜೆಂಟರ ಜಾಲವನ್ನು ಮಟ್ಟ ಹಾಕಲು ನಮಗೆ ಏಕೆ ಸಾಧ್ಯವಾಗುತ್ತಿಲ್ಲ? ಕಾಂಬೋಡಿಯಾ ಅಥವಾ ರಷ್ಯಾದಲ್ಲಿ ಸಿಲುಕಿರುವವರನ್ನು ಮರಳಿ ತರಲು ನಾವು ಸೈನ್ಯ ಅಥವಾ ಪ್ರಬಲ ರಾಜತಾಂತ್ರಿಕ ಒತ್ತಡವನ್ನು ಏಕೆ ಬಳಸುತ್ತಿಲ್ಲ?

. ನಮ್ಮ ಯುವಕರು ‘ವಿಶ್ವಗುರು’ವಿನ ರಾಯಭಾರಿಗಳಾಗಬೇಕಿತ್ತೇ ಹೊರತು, ಜಾಗತಿಕ ಮಾಫಿಯಾಗಳ ಗುಲಾಮರಲ್ಲ. ಕೊನೆಯದಾಗಿ ಒಂದು ಮಾತು, ದೇಶಪ್ರೇಮದ ಭಾಷಣಗಳು ಹೊಟ್ಟೆ ತುಂಬಿಸುವುದಿಲ್ಲ. ನಮ್ಮ ಯುವಕರು ಪರದೇಶದ ಯುದ್ಧಕ್ಕೆ ಬಲಿಯಾಗುತ್ತಿದ್ದಾರೆ ಎಂದರೆ, ನಾವು ಎಲ್ಲೋ ಒಂದು ಕಡೆ ಸೋಲುತ್ತಿದ್ದೇವೆ ಎಂದೇ ಅರ್ಥ. ಇದು ಕೇವಲ ರಷ್ಯಾ-ಉಕ್ರೇನ್ ಯುದ್ಧವಲ್ಲ, ಇದು ನಮ್ಮ ದೇಶದ ಯುವಕರ ಭವಿಷ್ಯದ ವಿರುದ್ಧ ನಡೆಯುತ್ತಿರುವ ಯುದ್ಧ ಕೂಡಾ ಹೌದು!
“ಒಬ್ಬ ಯುವಕ ದೇಶ ಬಿಟ್ಟು ಹೋಗುವುದು ತನ್ನ ಬೆಳವಣಿಗೆಗಾಗಿ ಆಗಿರಬೇಕೇ ಹೊರತು, ಬದುಕುವ ಅನಿವಾರ್ಯತೆಗಾಗಿ ಆಗಿರಬಾರದು. ರಷ್ಯಾದ ಯುದ್ಧ ಭೂಮಿಯಲ್ಲಿ ಅಥವಾ ಮ್ಯಾನ್ಮಾರ್ನ ಸೈಬರ್ ಕೋಣೆಗಳಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯ ಯುವಕನೂ ನಮ್ಮ ದೇಶದ ‘ಉದ್ಯೋಗ ನೀತಿ’ಯ ವೈಫಲ್ಯದ ಸಂಕೇತ. ಇದು ಕೇವಲ ಪೊಲೀಸ್ ಅಥವಾ ವಿದೇಶಾಂಗ ಇಲಾಖೆ ಬಗೆಹರಿಸುವ ಸಮಸ್ಯೆಯಲ್ಲ; ಇದು ದೇಶದ ಒಳಗೆ ಯುವಜನತೆಗೆ ಘನತೆಯಿಂದ ಬದುಕುವಂತಹ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಮಾತ್ರ ಬಗೆಹರಿಯುವ ಸಮಸ್ಯೆ. ಸರಕಾರವು ಆ ನಿಟ್ಟಿನಲ್ಲೂ ಯೋಚಿಸಿ, ಕಾರ್ಯರೂಪಕ್ಕೆ ತರಲಿ…











