ಮೈಸೂರು: ಮೈಸೂರಿನ ಹೆಸರಾಂತ ಕುಸ್ತಿ ಪೈಲ್ವಾನ್ ಟೈಗರ್ ಬಾಲಾಜಿ (67) ಅವರು ಇಂದು ವಿಧಿವಶರಾಗಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನಾಡಹಬ್ಬ ಮೈಸೂರು ದಸರಾದ ಅತ್ಯಂತ ಪುರಾತನ ಹಾಗೂ ಸಾಹಸಮಯ ಸಂಪ್ರದಾಯವಾದ ‘ವಜ್ರಮುಷ್ಠಿ ಕಾಳಗ’ಕ್ಕೆ ಟೈಗರ್ ಬಾಲಾಜಿ ಅವರೇ ರೂವಾರಿಯಾಗಿದ್ದರು. ದಸರಾದ ಪ್ರಮುಖ ಆಕರ್ಷಣೆಯಾದ ವಜ್ರಮುಷ್ಠಿ ಕಾಳಗಕ್ಕೆ ಟೈಗರ್ ಬಾಲಾಜಿ ಅವರ ಕೊಡುಗೆ ಅಪಾರವಾಗಿದೆ. ದಶಕಗಳ ಕಾಲ ಪೈಲ್ವಾನರಿಗೆ ತರಬೇತಿ ನೀಡಿ, ಈ ಪಾರಂಪರಿಕ ಕ್ರೀಡೆಯನ್ನು ಜೀವಂತವಾಗಿ ಉಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಟೈಗರ್ ಬಾಲಾಜಿ ಅವರು ಕುಸ್ತಿ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದರು. ತಮ್ಮ ವೃತ್ತಿಜೀವನದಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಸುಮಾರು 350ಕ್ಕೂ ಹೆಚ್ಚು ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಿದ್ದರು. ಅನೇಕ ಪ್ರಶಸ್ತಿ ಹಾಗೂ ಗೌರವಗಳನ್ನು ಅವರು ಪಡೆದಿದ್ದರು. ಕುಸ್ತಿ ಕಣದಲ್ಲಿ ಅವರ ವೇಗ ಮತ್ತು ಪಟ್ಟುಗಳಿಂದಾಗಿ ಅವರಿಗೆ ‘ಟೈಗರ್’ ಎಂಬ ಹೆಸರು ಬಂದಿತ್ತು.

ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಟೈಗರ್ ಬಾಲಾಜಿ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಟೈಗರ್ ಬಾಲಾಜಿ ಅವರ ನಿಧನಕ್ಕೆ ಕುಸ್ತಿ ಅಭಿಮಾನಿಗಳು, ಕ್ರೀಡಾಪಟುಗಳು ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ನಿಧನದಿಂದ ಮೈಸೂರಿನ ಕುಸ್ತಿ ಲೋಕಕ್ಕೆ ದೊಡ್ಡ ನಷ್ಟವಾಗಿದೆ.











