• Home
  • About Us
  • ಕರ್ನಾಟಕ
Wednesday, January 28, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

ಮನ್ವಂತರ ಕಾಲದಲ್ಲಿ ದೂರಗಾಮಿ ಮುಂಗಾಣ್ಕೆ ಉಜ್ವಲ ಭವಿಷ್ಯಕ್ಕೆ ಸೇತುವೆಯಾಗುತ್ತದೆ

ನಾ ದಿವಾಕರ by ನಾ ದಿವಾಕರ
January 28, 2026
in Top Story, ಅಂಕಣ, ಜೀವನದ ಶೈಲಿ, ವಿಶೇಷ
0
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Share on WhatsAppShare on FacebookShare on Telegram

ವಿಕಾಸದ ಗುರಿಯತ್ತ ಸಾಗುತ್ತಿರುವ ನವ-ಡಿಜಿಟಲ್‌ ಭಾರತ ಎಲ್ಲ ಮಗ್ಗುಲುಗಳಲ್ಲೂ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ದೇಶದ ಪ್ರಗತಿ ಅಥವಾ ಅಭಿವೃದ್ಧಿಯ ಕಲ್ಪನೆಯನ್ನು ಆರ್ಥಿಕ ಪರಿಭಾಷೆಯಿಂದ ಹೊರತುಪಡಿಸಿ ವಿಶ್ಲೇಷಿಸುವಾಗ ಸಹಜವಾಗಿ ಸಮಾಜ, ಸಂಸ್ಕೃತಿ ಮತ್ತು ಇವೆರಡನ್ನೂ ಭವಿಷ್ಯದೆಡೆಗೆ ಕರೆದೊಯ್ಯುವ ವಿದ್ಯಾರ್ಥಿ ಯುವ ಜನರತ್ತ ಗಮನ ಹರಿಯುತ್ತದೆ. ವಿದ್ಯಾರ್ಥಿ ಸಮುದಾಯವನ್ನೊಳಗೊಂಡ ಮಿಲೆನಿಯಂ ಜಗತ್ತು ಹಾಗೂ ಅದರಿಂದಾಚೆಗಿನ 1990ರ ದಶಕದ ಯುವ ಸಮಾಜ ಎರಡನ್ನೂ ಒಂದು ಬದಿಯಲ್ಲಿಟ್ಟು ನೋಡಿದಾಗ, ಭಾರತ ಎದುರಿಸುತ್ತಿರುವ ಸಂದಿಗ್ಧತೆಯನ್ನೂ, ಈ ಎರಡು ಸಮಾಜಗಳು ಎದುರಿಸುತ್ತಿರುವ ಸಂಕೀರ್ಣ ಸನ್ನಿವೇಶಗಳನ್ನೂ ಪರಾಮರ್ಶಿಸಲು ಸಾಧ್ಯ.

ADVERTISEMENT
Dinesh Amin Mattu on Governors : ರಾಜಭವನವನ್ನು ಆಸ್ಪತ್ರೆ ಅಥವಾ ಪಾರ್ಕ್ ಮಾಡಿಬಿಡಿ..! | karnataka Governor

ಈ ಅವಲೋಕನದ ಹಾದಿಯಲ್ಲಿ ನಾವು ಗುರುತಿಸಬೇಕಿರುವುದು ಈ ಸಮುದಾಯಗಳ ಆತಂಕ ಮತ್ತು ತಲ್ಲಣಗಳನ್ನು. ರಾಜಕೀಯವಾಗಿ ಬಳಕೆಯ ಸರಕುಗಳಾಗಿರುವ ಎರಡೂ ಸಮಾಜಗಳು, ಸಾಂಸ್ಕೃತಿಕವಾಗಿಯೂ ಸಹ ಒಂದು ಹಂತದ ನಂತರ ದಾಟು ಸೇತುವೆಗಳಂತಾಗಿರುವುದು (Passing Bridge) ಕಣ್ಣಿಗೆ ಕಾಣುವ ವಾಸ್ತವ. 1960-70ರ ದಶಕಗಳಿಗೆ ಹೋಲಿಸಿ ನೋಡುವುದು ಸೂಕ್ತ ವಿಧಾನವಲ್ಲ ಎಂಬ ಅರಿವಿನೊಂದಿಗೇ, ಗಮನಿಸಬೇಕಾದ ಅಂಶ ಎಂದರೆ ಭಾರತೀಯ ಸಮಾಜ ಈ ಐದಾರು ದಶಕಗಳಲ್ಲಿ ಯಾವುದೇ ರೀತಿಯಲ್ಲೂ ಬದಲಾಗಿಲ್ಲ ಅಥವಾ ಯುಗಾಂತರದ ಅಗತ್ಯತೆಗಳಿಗೆ ಅನುಗನುಗುಣವಾಗಿ ರೂಪಾಂತರಗೊಂಡಿಲ್ಲ. ಆ ಕಾಲಘಟ್ಟದಲ್ಲಿದ್ದಂತಹ ನಡವಳಿಕೆ, ವರ್ತನೆ, ಧೋರಣೆ ಹಾಗೂ ತಾತ್ವಿಕ ಚೌಕಟ್ಟುಗಳು ಯಥಾವತ್ತಾಗಿ ಉಳಿದಿವೆ.

ಚಲನಶೀಲತೆಯ ವೈರುಧ್ಯಗಳು

ಇದನ್ನು ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ʼಸಾಮಾಜಿಕ-ಸಾಂಸ್ಕೃತಿಕʼ ಜಡತ್ವ ಎನ್ನಲಾಗುತ್ತದೆ. ಆಧುನಿಕತೆ ಮತ್ತು ನವನವೀನ ತಂತ್ರಜ್ಞಾನದ ಅವಿಷ್ಕಾರಗಳೊಂದಿಗೆ ತನ್ನ ಜೀವನ ವಿಧಾನಗಳಲ್ಲಿ ಬದಲಾವಣೆ ತಂದುಕೊಳ್ಳಬೇಕಿರುವ ಸಮಾಜಗಳು, ಈ ಎರಡೂ ವಿದ್ಯಮಾನಗಳ ಫಲಾನುಭವಿಯಾದರೂ, ವರ್ತಮಾನದ ತಲೆಮಾರಿಗೆ ಹೊಸ ದಿಕ್ಕು ತೋರುವ ಅಥವಾ ನವೀಕೃತ ಮಾದರಿಗಳನ್ನು ಸೂಚಿಸುವ ಕ್ಷಮತೆಯನ್ನು ಹೊಂದಿರಬೇಕು. ಇಲ್ಲವಾದರೆ ಎಂತಹ ಉದಾತ್ತ ಚಿಂತನೆಗಳೂ ಸಹ ಹೆಪ್ಪುಗಟ್ಟುತ್ತವೆ, ಅಭೇದ್ಯವಾಗುತ್ತವೆ, ಅಪರಿಹಾರಕವಾಗುತ್ತವೆ. ಭಾರತೀಯ ಸಮಾಜದಲ್ಲಿ ಈ ಜಡತ್ವಕ್ಕೆ ಕಾರಣವನ್ನು ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಗುರುತಿಸಬಹುದಾದರೂ, ಇದನ್ನೂ ದಾಟಿ ದಿನದಿಂದ ದಿನಕ್ಕೆ ಸಾಮಾಜಿಕ ನಿಯಂತ್ರಣವನ್ನು ಬಿಗಿಗೊಳಿಸುತ್ತಿರುವ ಧಾರ್ಮಿಕ-ಆಧ್ಯಾತ್ಮಿಕ ಚೌಕಟ್ಟುಗಳಲ್ಲೂ ಗುರುತಿಸಬೇಕಾಗುತ್ತದೆ.

Dinesh Amin Mattu On Gilli Nata : ಬಿಗ್ ಬಾಸ್ ಆ ಒಂದು ಕಾರಣಕ್ಕೆ ನೋಡ್ತೀನಿ...  | BBK12 | Kiccha Sudeep

ಈ ಎರಡೂ ಸಾಮಾಜಿಕ ವ್ಯವಸ್ಥೆಗಳಿಗೆ ಇರುವ ಆಯಸ್ಕಾಂತೀಯ ಶಕ್ತಿ ಮತ್ತು ಆಕರ್ಷಣೀಯ ಸಾಧನಗಳೆಂದರೆ ನಂಬಿಕೆ, ಶ್ರದ್ಧಾಭಕ್ತಿ, ಆಚರಣೆಗಳು ಮತ್ತು ಇವುಗಳನ್ನು ಪೋಷಿಸುವಂತಹ ಧಾರ್ಮಿಕ-ಆಧ್ಯಾತ್ಮಿಕ ಸಾಂಸ್ಥಿಕ ನೆಲೆಗಳು. ಇಲ್ಲಿ ಸೃಷ್ಟಿಸಲಾಗುವ ಆಚರಣಾತ್ಮಕ ವಿಧಾನಗಳು ಮೇಲ್ವರ್ಗದ, ಮೇಲ್ಜಾತಿಯ ಸಮಾಜಗಳಿಂದಲೇ ನಿರ್ವಚಿಸಲ್ಪಡುವುದರಿಂದ, ಸಾಮಾನ್ಯ ಜನತೆಯ ಜೀವನ ವಿಧಾನಗಳೂ ಸಹ ಇದರ ಪ್ರಭಾವಕ್ಕೊಳಗಾಗುತ್ತವೆ. ಈ ಜನರ ನಡುವಿನಿಂದಲೇ ಹೊರಮೂಡುವ ವಿದ್ಯಾರ್ಥಿ ಯುವ ಸಮೂಹಗಳು ಸಹಜವಾಗಿ ತಮ್ಮ ಸಾಂಸ್ಕೃತಿಕ ಪದರಗಳನ್ನು ಕಳಚಿಕೊಂಡು, ಧಾರ್ಮಿಕ ಚಹರೆಗಳನ್ನು ಬದಿಗಿಟ್ಟು ವೈಚಾರಿಕ-ವೈಜ್ಞಾನಿಕ ಚಿಂತನಾಧಾರೆಗಳೊಡನೆ ಅನುಸಂಧಾನ ನಡೆಸಬೇಕಾಗುತ್ತದೆ. ಇಲ್ಲಿ ಅಡ್ಡಿಯಾಗಬಹುದಾದ ಅಸ್ಮಿತೆಯ ಚೌಕಟ್ಟುಗಳನ್ನು ಮತ್ತು ಸಂಪ್ರದಾಯದ ಗೋಡೆಗಳನ್ನು ಭೇದಿಸಿ, ಹೊಸ ಚಿಂತನೆಗಳಿಗೆ ತೆರೆದುಕೊಳ್ಳಬೇಕಾಗುತ್ತದೆ.

ವಿದ್ಯಾರ್ಥಿ ಯುವ ಸಮೂಹ ರಾಷ್ಟ್ರಕವಿ ಕುವೆಂಪು ಹೇಳಿದ ಹಾಗೆ ʼನಿರಂಕುಶಮತಿʼ ಗಳಾಗಬೇಕಿರುವುದು ಈ ಹಂತದಲ್ಲಿ. ಆದರೆ ಈ ಸಮುದಾಯಗಳ ಸಿಕ್ಕುಗಳು ಇರುವುದೂ ಈ ಹಂತದಲ್ಲೇ ಎನ್ನುವುದು ಗಮನಿಸಬೇಕಾದ ಅಂಶ. ಡಿಜಿಟಲ್‌ ಯುಗದ ಯುವ ಸಮೂಹಕ್ಕೆ ಮಾರ್ಗದರ್ಶಿಯಾಗಬೇಕಾದ ದರ್ಶನಗಳು ಮತ್ತು ದಾರ್ಶನಿಕ ಚಿಂತನಾವಾಹಿನಿಗಳು ಹೇರಳವಾಗಿವೆ. ಆದರೆ ಈ ಧಾರೆಗಳಲ್ಲಿ ಸಂಭವಿಸಿರುವ ತಾತ್ವಿಕ ವಿಘಟನೆಗಳು, ಎದ್ದಿರುವ ಗೋಡೆಗಳು, ಮೂಡಿರುವ ಪ್ರತ್ಯೇಕತೆಯ ಭಾವನೆಗಳು , ಸ್ವಾತಂತ್ರ್ಯಪೂರ್ವ ಭಾರತದ ಉದಾತ್ತ ಆಲೋಚನೆಗಳೆಲ್ಲವನ್ನೂ ಚದುರಿಸಿ ಕೋಶೀಕರಣಕ್ಕೊಳಪಡಿಸಿವೆ (Cellularisation) . ಇಲ್ಲಿ ಗಾಂಧಿ, ಅಂಬೇಡ್ಕರ್‌, ವಿವೇಕಾನಂದ, ಫುಲೆ, ಲೋಹಿಯಾ ಎಲ್ಲರೂ ಸಹ ಸಂಕುಚಿತ ಕೋಶಗಳಲ್ಲಿ ಬಂಧಿತರಾಗಿರುವುದನ್ನು ಎಲ್ಲ ಸ್ತರಗಳಲ್ಲೂ ಗುರುತಿಸಬಹುದು.

Dinesh Amin Mattu on Governors : ರಾಜಭವನವನ್ನು ಆಸ್ಪತ್ರೆ ಅಥವಾ ಪಾರ್ಕ್ ಮಾಡಿಬಿಡಿ..! | karnataka Governor

ನವಯುಗದ ವಿರೋಧಾಭಾಸಗಳು

ಇಂದಿನ ಯುವ ಸಮೂಹಕ್ಕೆ ಆದರ್ಶನೀಯ ಮಾದರಿಗಳಿಲ್ಲ ಎಂಬ ಆತಂಕದ ಹಿಂದೆ, ಸ್ವತಂತ್ರ ಭಾರತ ಅಂತಹ ಮಾದರಿಗಳನ್ನು ಸೃಷ್ಟಿಸಿಲ್ಲ ಎಂಬ ಕಟು ವಾಸ್ತವವೂ ಅಡಗಿದೆ. ಆದರೆ ಸ್ವಾತಂತ್ರ್ಯಪೂರ್ವ ಭಾರತದ ಮಾದರಿಗಳನ್ನೂ ಸಹ ಅಸ್ಮಿತೆಗಳ ಸಂಕೋಲೆಗಳಿಂದ ಮುಕ್ತವಾಗಿರಿಸಲು ಹಿರಿಯ ತಲೆಮಾರು ವಿಫಲವಾಗಿದೆ. 1960-70ರ ದಶಕದಲ್ಲಿ ಹೊಸ ಚಿಂತನೆಗಳೊಂದಿಗೆ ಜಟಿಲ ಸವಾಲುಗಳಗೆ ಮುಖಾಮುಖಿಯಾದ ಒಂದು ತಲೆಮಾರಿನ ಚಿಂತಕರು ಈ ಸವಾಲುಗಳನ್ನು ಮೆಟ್ಟಿನಿಂತು ಒಂದು ಹಂತದವರೆಗೆ ಹೊಸ ಜಗತ್ತಿನ ಹಾದಿಯನ್ನು ಸುಗಮಗೊಳಿಸಿದರೂ, ಸಂಘಟನಾತ್ಮಕವಾಗಿ ಹಾಗೂ ಸಾಂಸ್ಥಿಕವಾಗಿ ಇದನ್ನು ಧೃವೀಕರಿಸಿ, ಘನೀಕರಿಸುವುದರಲ್ಲಿ ಎಡವಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ಅಂಬೇಡ್ಕರ್‌ವಾದ, ಲೋಹಿಯಾವಾದ ಮತ್ತು ಮಾರ್ಕ್ಸ್‌ವಾದ ಈ ಮೂರು ಸೈದ್ದಾಂತಿಕ ನೆಲೆಗಳು ಒದಗಿಸಿದ ತಾತ್ವಿಕ ಬಲ ಮತ್ತು ಚಿಂತನಾಶೀಲ ಶಕ್ತಿ ಈ ಎರಡು ದಶಕಗಳಲ್ಲಿ ಭಾರತೀಯ ಸಮಾಜದಲ್ಲಿ ಸೃಷ್ಟಿಸಿದ ವಿಪ್ಲವಕಾರಿ ಬೆಳವಣಿಗೆಗಳನ್ನು ಈಗ ಮರುವಿಮರ್ಶೆ ಮಾಡಬೇಕಿದೆ. ಈ ಮೂರೂ ವಾದಗಳು ತಮ್ಮದೇ ಆದ ದಾರಿಯಲ್ಲಿ ಭವಿಷ್ಯ ಭಾರತಕ್ಕೆ ಸುಭದ್ರ ಅಡಿಪಾಯವನ್ನು ಒದಗಿಸುವ ಸಾಂಘಿಕ ಶಕ್ತಿಯನ್ನೂ ನೀಡಿದ್ದವು. ಆದರೆ ಕಾಲಕ್ರಮೇಣ ಈ ʼವಾದಗಳುʼ ಜನಸಮೂಹಗಳ ನಡುವೆ ಸಕ್ರಿಯವಾದಂತೆಲ್ಲಾ ʼ ವಾದಿಗಳ ʼ ಗುಂಪುಗಳಾಗಿ ವಿಫಟನೆಗೊಳಗಾಗಿದ್ದು ಅಲ್ಲಗಳೆಯಲಾಗದ ಸತ್ಯ. ಈ ವಿಘಟನೆಯಿಂದ ಕ್ರಿಯಾಶೀಲತೆಗೆ ಅಪಾಯವಾಗದೆ ಇದ್ದರೂ, ಅತ್ಯವಶ್ಯವಾಗಿದ್ದ ತಾತ್ವಿಕ ಚಲನಶೀಲತೆಯನ್ನು ಒಂದು ಹಂತದ ನಂತರ ಜಡಗೊಳಿಸಿದ್ದನ್ನು ಗಂಭೀರವಾಗಿ ಮರುವಿಮರ್ಶೆ ಮಾಡಬೇಕಿದೆ. ಈ ವಿಘಟನೆ ಮತ್ತು ಜಡತ್ವದ ಪರಿಣಾಮವಾಗಿಯೇ 1990ರ ನಂತರದ ಹೆಚ್ಚಿನ ಜನಾಂದೋಲನಗಳು ತಾರ್ಕಿಕ ಗೆಲುವು ಸಾಧಿಸಲಾಗಿಲ್ಲ.

dcm D.K. Shivakumar on gillinata : ಬಿಗ್ ಬಾಸ್ ಗೆದ್ದ ಗಿಲ್ಲಿನ ಮನಸಾರೆ ಹೊಗಳಿದ ಡಿಕೆ ಶಿವಕುಮಾರ್ #pratidhvani

ವೈಫಲ್ಯದ ಕಾರಣ-ಪರಿಣಾಮಗಳು

ಈ ಬೆಳವಣಿಗೆಗಳಿಗೆ ಕಾರಣಗಳು ಹಲವು. (1) ಸಿದ್ಧಾಂತಗಳನ್ನು ಮರು ನಿರ್ವಚಿಸುವ ಮೂಲಕ ಅಲ್ಲಿ ಸೃಷ್ಟಿಯಾಗುವ ಸಂಘಟನಾತ್ಮಕ ಮಾದರಿಗಳನ್ನೂ ಸಹ ಮರುಕಟ್ಟುವ ಪ್ರಯತ್ನಗಳು. (2) ಸಿದ್ಧಾಂತಗಳನ್ನು ಸಾಂಸ್ಥೀಕರಿಸಿ ಅದರ ಸುತ್ತ ಅಭೇದ್ಯ ಗೋಡೆಗಳನ್ನು ನಿರ್ಮಿಸುವ ಆಲೋಚನೆಗಳು. (3) ಈ ಸಾಂಸ್ಥೀಕರಿಸಿದ ತಾತ್ವಿಕ ನೆಲೆಗಳನ್ನು ಶ್ರೇಷ್ಠತೆಯ ಪರಿಭಾಷೆಯಲ್ಲಿ ನಿರ್ವಚಿಸುತ್ತಾ ಮೂಲ ದರ್ಶನಗಳನ್ನೂ ವಿಭಾಗೀಕರಿಸುವ ಅಥವಾ ವರ್ಗೀಕರಣಕ್ಕೊಳಪಡಿಸುವ ಬೌದ್ಧಿಕ ವಿಧಾನಗಳು. (4), ಸಿದ್ಧಾಂತಗಳ ಮೂಲ ಧಾತು ಒಂದೇ ಆದರೂ, ವರ್ತಮಾನದ ಸಮಾಜಕ್ಕೆ ಅವುಗಳನ್ನು ಅನ್ವಯಿಸುವಾಗ ತಮ್ಮದೇ ಆದ ರೀತಿಯಲ್ಲಿ ಮರುವ್ಯಾಖ್ಯಾನಕ್ಕೊಳಪಡಿಸಿ, ಭಿನ್ನ ಮಾದರಿಗಳನ್ನು ರೂಪಿಸುವುದು. (5) ಈ ಮಾದರಿಗಳಲ್ಲೇ ಸೃಷ್ಟಿಯಾಗುವ ಸಂಘಟನೆಗಳನ್ನು ಮರುವಿಘಟನೆಗೊಳಪಡಿಸುವ ರಾಜಕೀಯ ಪ್ರಯತ್ನಗಳು. (ಇದರಲ್ಲಿ ಯಶಸ್ವಿಯಾಗಿದ್ದನ್ನೂ ಕರ್ನಾಟಕದ 1980ರ ಬೆಳವಣಿಗೆಗಳು ದೃಢೀಕರಿಸುತ್ತವೆ). (6) ಕೊನೆಯದಾಗಿ, ಸಂಘಟನಾತ್ಮಕವಾಗಿ ರೂಪಿಸಿಕೊಂಡ ಮಾದರಿಗಳನ್ನು ಸಮಷ್ಟಿ ಪ್ರಜ್ಞೆಯೊಂದಿಗೆ ನೋಡದೆ, ತಾವು ನಡೆದ ಹಾದಿಯೇ ಶ್ರೇಷ್ಠ ಮತ್ತು ಅಂತಿಮ ಎಂಬ ದಾರ್ಷ್ಟ್ಯವನ್ನು ಸಾಂಸ್ಥಿಕವಾಗಿಯೇ ಬೆಳೆಸಿಕೊಂಡಿದ್ದು.

ಈ ಎಲ್ಲ ಬೆಳವಣಿಗೆಗಳಿಂದ ಉಂಟಾದ ಗೊಂದಲ ಮತ್ತು ತಾತ್ವಿಕ ಸಂಕೀರ್ಣತೆಗಳು ವರ್ತಮಾನದ ವಿದ್ಯಾರ್ಥಿ-ಯುವ ಸಮೂಹವನ್ನು ಕವಲು ಹಾದಿಯಲ್ಲಿ ನಿಲ್ಲಿಸಿವೆ. ಇದಕ್ಕೆ ಕಾರಣ ಯಾರು ಎಂಬ ಪ್ರಶ್ನೆಯೇ ಮರುವಿಘಟನೆಗೆ ಕಾರಣವಾಗುವ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಸ್ಪಷ್ಟವಾದ ಕಾರಣವನ್ನು ಅಧಿಕಾರ ರಾಜಕಾರಣದಲ್ಲಿ, ರಾಜಕೀಯ ಆಕಾಂಕ್ಷೆ ಮತ್ತು ಅವಕಾಶವಾದದಲ್ಲಿ ಹಾಗೂ ಸಾಮಾಜಿಕ ಅಸ್ಮಿತೆಗಳ ನೆಲೆಯಲ್ಲಿ ಗುರುತಿಸಬಹುದು. ಒಡೆದು ಆಳುವ ಪ್ರವೃತ್ತಿಯನ್ನು ಬ್ರಿಟೀಷ್‌ ವಸಾಹತು ಆಳ್ವಿಕೆಯ ಲಕ್ಷಣ ಎಂದೇ ಗುರುತಿಸುವ ನಾವು, ಆಂತರಿಕವಾಗಿ ಈ ಪ್ರವೃತ್ತಿಯನ್ನು ಸ್ವತಂತ್ರ ಭಾರತದ ರಾಜಕೀಯ ಬೆಳವಣಿಗೆಯಲ್ಲಿ ಇನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಇಲ್ಲಿ ಸಮಾಜ, ಸಮುದಾಯ, ಸಂಘಟನೆ ಮತ್ತು ಸಂಸ್ಥೆ ಇವೆಲ್ಲವೂ ಸಹ ಗುರಿಯಾಗಿರುವುದು ನಿರ್ವಿವಾದ ಸತ್ಯ.

Gilli Nata Interview | ತಲೆ ಬಾಚಿ ಕೊಳ್ಳಲ್ಲಒಳ್ಳೆ ಡ್ರೆಸ್ ಹಾಕಲ್ಲಅನ್ನೋರಿಗೆ ಗಿಲ್ಲಿ ಖಡಕ್ ಉತ್ತರ!#pratidhvani

ಇದರ ಫಲಾನುಭವಿಗಳಾಗಿ ರಾಜಕೀಯ ಪಕ್ಷಗಳು ತಮ್ಮ ಭದ್ರಕೋಟೆಗಳನ್ನು ರಕ್ಷಿಸಿಕೊಂಡಿವೆ. ಅಷ್ಟೇ ಅಲ್ಲದೆ ಈ ಭದ್ರತೆಗೆ ರಕ್ಷಾಕವಚಗಳಾಗಿ ಜಾತಿ ಸಂಘಟನೆಗಳನ್ನು, ಮತೀಯ ಗುಂಪುಗಳನ್ನು, ಸಮುದಾಯಗಳನ್ನು ವ್ಯವಸ್ಥಿತವಾಗಿ ಬೆಳಸುತ್ತಾ ಬಂದಿವೆ. ಇಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿರುವುದು ಅಂಬೇಡ್ಕರ್‌ ಎನ್ನುವುದು ಒಪ್ಪಲೇಬೇಕಾದ ಕಹಿ ಸತ್ಯ. ಕರ್ನಾಟಕದಲ್ಲಷ್ಟೇ ಅಲ್ಲದೆ ದೇಶಾದ್ಯಂತ ವಿಘಟನೆಗೊಳಗಾಗಿರುವ ಅಂಬೇಡ್ಕರ್‌ವಾದದ ವಾರಸುದಾರ ಗುಂಪುಗಳು , ಸ್ವತಃ ಅಂಬೇಡ್ಕರ್‌ ಅವರನ್ನು ಪ್ರತಿಮೆ, ಸಮುದಾಯ ಭವನಗಳ ಸಂಕೋಲೆಗಳಲ್ಲಿ ಬಂಧಿಸಿ ನೂರೆಂಟು ತೊರೆಗಳಾಗಿ ತಮ್ಮ ಅಸ್ತಿತ್ವ ಕಂಡುಕೊಂಡಿವೆ. ಭಾವನಾತ್ಮಕ ವಿಚಾರಗಳಲ್ಲಿ ಒಂದಾಗುವ ಈ ಸಂಘಟನೆಗಳು ತಾತ್ವಿಕವಾಗಿ ಐಕ್ಯತೆಯ ಬಗ್ಗೆ ಯೋಚಿಸಲೂ ಸಾಧ್ಯವಾಗದ ಹಾಗೆ, ರಾಜಕೀಯ ಪಕ್ಷಗಳು ಸಂಘಟನೆಗಳನ್ನು ತಮ್ಮ ಅಂಗಳಗಳಲ್ಲಿ ಬಂಧಿಸಿವೆ. ಇಲ್ಲಿ ಕಲ್ಪಿಸಲಾಗುವ ಅವಕಾಶಗಳು, ಸಾಮಾಜಿಕ ಸ್ಥಾನಮಾನ, ಪದವಿ/ಹುದ್ದೆಗಳು, ಆರ್ಥಿಕ ನೆಲೆಗಳು ಸಂಘಟನೆಗಳ ಒಳಗೇ ನಾಯಕತ್ವ ಮತ್ತು ಕಾರ್ಯಕರ್ತರ ನಡುವೆ ದೊಡ್ಡ ಕಂದರಗಳನ್ನು ಉಂಟುಮಾಡಿವೆ.

ಕಮ್ಯುನಿಸ್ಟ್‌ ಪಕ್ಷಗಳಲ್ಲಿ ಅಧಿಕಾರ ರಾಜಕಾರಣದ ಸಂಕೋಲೆಗಳಿಲ್ಲದೇ ಹೋದರೂ, ಸ್ವಯಂ ಕಲ್ಪಿತ ಸೈದ್ಧಾಂತಿಕ ಸರಳುಗಳು ವಿವಿಧ ಪಕ್ಷಗಳನ್ನು, ಸಮೂಹ ಸಂಘಟನೆಗಳನ್ನು (Mass organisations), ಕಾರ್ಮಿಕ ಸಂಘಟನೆಗಳನ್ನು ಪ್ರತ್ಯೇಕತಾ ಭಾವನೆಗೊಳಪಡಿಸಿರುವುದು ಸತ್ಯ. ವರ್ತಮಾನದ ಕಾಲಘಟ್ಟದಲ್ಲಿ ಕೇವಲ ಚಾರಿತ್ರಿಕ ಪಳೆಯುಳಿಕೆಗಳಾಗಿ ಕಾಣುವ ಅಥವಾ ಆಲಂಕಾರಿಕ ಪದಗಳಾಗಿ ಕಾಣುವ ಪರಿಷ್ಕರಣವಾದ (Revisionism) , ಸಾಹಸವಾದ (Adventurism) ಮತ್ತು ಚಾರಿತ್ರಿಕ ಚೀನಾ-ರಷ್ಯಾ ಮಾದರಿಗಳು ಇಂದಿಗೂ ಸಹ ಕಮ್ಯುನಿಸ್ಟ್‌ ಚಳುವಳಿಯನ್ನು ಒಂದುಗೂಡದಂತೆ ಮಾಡುತ್ತಿವೆ. ಎಡಪಂಥೀಯ ಕಾರ್ಮಿಕ ಸಂಘಟನೆಗಳು ಎಡಪಕ್ಷಗಳ ಐಕ್ಯತೆಗೆ ದೊಡ್ಡ ಅಡ್ಡಿಯಾದರೆ, ಈ ಅಪ್ರಸ್ತುತ ನಿರ್ವಚನೆಗಳು ತಾತ್ವಿಕ ಐಕ್ಯತೆಗೆ ಅಡ್ಡಿಯಾಗುತ್ತಿವೆ.

Siddaramaiah : ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಮಾಡಿದ ಸಿಎಂ ಸಿದ್ದರಾಮಯ್ಯ  #pratidhvani #siddaramaiah

ಭವಿಷ್ಯದ ಹಾದಿಯನ್ನು ಅರಸುತ್ತಾ

ಯಾವುದೇ ಸಾಮಾಜಿಕ ಚಳುವಳಿಗಳಾದರೂ, ಚಾರಿತ್ರಿಕ ಯಶಸ್ಸುಗಳಲ್ಲಿ ಸಂಭ್ರಮಿಸುವುದಕ್ಕಿಂತಲೂ, ವರ್ತಮಾನದ ಅವಶ್ಯಕತೆಗಳಿಗೆ ಸ್ಪಂದಿಸುವುದು ವಿವೇಕಯುತ. ಹಾಗೆಯೇ ನಡೆದುಬಂದ ಹಾದಿಯಲ್ಲಿ ಉದ್ಭವಿಸಿರಬಹುದಾದ ತಾತ್ವಿಕ ಭಿನ್ನಾಭಿಪ್ರಾಯ-ಭಿನ್ನಮತಗಳು ವರ್ತಮಾನದ ಸಂದರ್ಭದಲ್ಲಿ ಕಲಿತ ಪಾಠಗಳಾಗಬೇಕೇ ಹೊರತು, ವೈರುಧ್ಯಗಳನ್ನು ಮುಂದುವರೆಸುವ ಆಕರಗಳಾಗಕೂಡದು. ಚಾರಿತ್ರಿಕ ಪ್ರಮಾದಗಳು/ವೈರುಧ್ಯಗಳು ವರ್ತಮಾನದ ವಿಘಟನೆಗೆ ಅಥವಾ ಅನೈಕ್ಯತೆಗೆ ಕಾರಣವಾಗುವುದು, ಬೌದ್ಧಿಕ ದೀವಾಳಿತನವನ್ನು , ಸೈದ್ಧಾಂತಿಕ ಅರಿವಿನ ಕೊರತೆಯನ್ನು ಸೂಚಿಸುತ್ತದೆ. ರಾಜಕೀಯವಾಗಿ ಇದು ಒಂದು ಹಂತದವರೆಗೆ ಕೆಲವು ಪಕ್ಷ/ಗುಂಪುಗಳಿಗೆ ಉಪಯುಕ್ತವಾದರೂ, ತಳಮಟ್ಟದಲ್ಲಿ ವಿಶೇಷವಾಗಿ ವಿದ್ಯಾರ್ಥಿ-ಯುವ ಸಮೂಹದಲ್ಲಿ ಹಿಮ್ಮುಖ ಚಲನೆಗೆ ಕಾರಣವಾಗುತ್ತದೆ.

ಈ ಹಿನ್ನಡಿಗೆಯ ಫಲಾನುಭವಿಗಳಾಗಲು ಬೂರ್ಷ್ವಾ ರಾಜಕೀಯ ಪಕ್ಷಗಳು ತುದಿಗಾಲಲ್ಲಿ ನಿಂತಿರುತ್ತವೆ. ಕಾಲೇಜು-ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಿಂದ ಚುನಾವಣಾ ಮತಗಟ್ಟೆಗಳವರೆಗೂ ವಿಸ್ತರಿಸುವ ಈ ಹಿಂಚಲನೆ ಭಾರತದ ಕಾರ್ಮಿಕ ಚಳುವಳಿಯನ್ನೇ ದುರ್ಬಲಗೊಳಿಸಿರುವುದನ್ನು ಗಂಭೀರವಾಗಿ ವಿಮರ್ಶಿಸಬೇಕಿದೆ. ವಾರ್ಷಿಕ ಸಾರ್ವತ್ರಿಕ ಮುಷ್ಕರ, ಸಾಂದರ್ಭಿಕ ಐಕ್ಯ ಹೋರಾಟಗಳು ಈ ದೌರ್ಬಲ್ಯವನ್ನು ಹೋಗಲಾಡಿಸಲಾಗುವುದಿಲ್ಲ. ಏಕೆಂದರೆ ನವ ಉದಾರವಾದ, ಹಿಂದುತ್ವ ಫ್ಯಾಸಿಸಂ ಮತ್ತು ಜಾತಿ ರಾಜಕಾರಣದ ಏಕಕಾಲದ ದಾಳಿಯನ್ನು ಎದುರಿಸುತ್ತಿರುವ ವಿದ್ಯಾರ್ಥಿ ಯುವ ಸಮೂಹಕ್ಕೆ ಭವಿಷ್ಯದ ಹಾದಿಯಲ್ಲಿ ಸ್ಪಷ್ಟತೆ ಬೇಕಿದೆ. ಮೇಲ್ನೋಟದ ಐಕ್ಯತೆಯಿಂದ ತಾತ್ಕಾಲಿಕ ಪರಿಹಾರಗಳು ಒದಗಬಹುದಾದರೂ, ತಳಮಟ್ಟದ ಸೈದ್ಧಾಂತಿಕ ವಿಘಟನೆ, ಈ ಮೂರೂ ಅಪಾಯಗಳನ್ನು ಮತ್ತಷ್ಟು ಬಲಪಡಿಸುತ್ತವೆ.

Interview with Ashita Chandrappa : ನನಗೆ ಧಾರವಾಹಿಯಲ್ಲಿ ಅವಕಾಶ ಸಿಗದೇ ಇರೋದಕ್ಕೆ ಇವರೇ ಕಾರಣ..! #pratidhvani

ಭಾರತದ ವಿದ್ಯಾರ್ಥಿ-ಯುವ ಸಮೂಹ ತನ್ನ ಆದ್ಯತೆಗಳನ್ನು ನಿರ್ವಚಿಸಲು, ಬಾಧ್ಯತೆಗಳನ್ನು ಗ್ರಹಿಸಲು ಹಾಗೂ ಮುಂದಣ ದಾರಿಯನ್ನು ರೂಪಿಸಲು ಮಾರ್ಗದರ್ಶಿ ಸೂತ್ರಗಳು ಅಗತ್ಯವಾಗುತ್ತವೆ. ಈ ಸೂತ್ರಗಳನ್ನು ಒದಗಿಸಬೇಕಾದ ಚಳುವಳಿಗಳು, ಆಂದೋಲನಗಳು ಹಾಗೂ ಸಾಂಘಿಕ ಚಟುವಟಿಕೆಗಳು ತಮ್ಮೊಳಗಿನ ವಿಘಟನೆಯನ್ನು ನಿವಾರಿಸುವುದು ವರ್ತಮಾನದ ಅನಿವಾರ್ಯತೆಯಾಗಿದೆ. ಇಲ್ಲವಾದಲ್ಲಿ ಮೇಲ್ಮಟ್ಟದ ಕವಲುಗಳೇ ತಳಸ್ತರದಲ್ಲೂ ಯಥಾವತ್ತಾಗಿ ರೂಪುಗೊಳ್ಳುತ್ತವೆ. ಈ ಕವಲುಗಳು ಸಂಧಿಸಲು ಅವಕಾಶವನ್ನೇ ನೀಡದಂತೆ ಅಧಿಕಾರ ರಾಜಕಾರಣ ಸದಾ ಜಾಗೃತವಾಗಿರುತ್ತದೆ. ಈ ಅಪಾಯವನ್ನು ಮೀರುವುದು ಹಿರಿಯ ತಲೆಮಾರಿನ ಜವಾಬ್ದಾರಿಯೂ ಹೌದು, ನೈತಿಕ ಕರ್ತವ್ಯವೂ ಹೌದು.

ಇಲ್ಲವಾದರೆ ವರ್ತಮಾನದ ವಿದ್ಯಾರ್ಥಿ-ಯುವ ಸಮೂಹ ಎತ್ತ ಸಾಗುತ್ತಿದೆ ? ಎತ್ತ ನೋಡುತ್ತಿದೆ ? ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ.

(ವಿದ್ಯಾರ್ಥಿ ಯುವ ಸಮೂಹದ ಆದ್ಯತೆ-ಬಾಧ್ಯತೆಗಳು- ಮುಂದಿನ ಭಾಗದಲ್ಲಿ )

Previous Post

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

Next Post

ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ವಸ್ತುಗಳ ದರೋಡೆ

Related Posts

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
0

ಜೆಡಿಎಸ್ Janata Dal (Secular) ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ “ಒಂಟಿಯಾಗಿ ಸ್ಪರ್ಧಿಸುತ್ತೇವೆ” ಎಂಬ ಘೋಷಣೆ ಮಾಡಿದೆ. ಪಕ್ಷದ ನಾಯಕರು ಇದನ್ನು ಧೈರ್ಯದ ಹೆಜ್ಜೆ, ಸ್ವತಂತ್ರ ರಾಜಕೀಯದ ಸಂಕೇತ...

Read moreDetails
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

January 28, 2026
BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

January 28, 2026
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

January 28, 2026
ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

ಬಡವರು ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ-RSS ಹುನ್ನಾರ-ಸಿಎಂ ಸಿದ್ದರಾಮಯ್ಯ

January 27, 2026
Next Post
ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ವಸ್ತುಗಳ ದರೋಡೆ

ಬಿಲ್ಡರ್ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ವಸ್ತುಗಳ ದರೋಡೆ

Recent News

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?
Top Story

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

by ಪ್ರತಿಧ್ವನಿ
January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್
Top Story

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
January 28, 2026
BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?
Top Story

BIG BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನ: ಆಗಿದ್ದೇನು..?

by ಪ್ರತಿಧ್ವನಿ
January 28, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು

by ನಾ ದಿವಾಕರ
January 28, 2026
Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!
Top Story

Daily Horoscope January 28: ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ ಪಡೆಯುವ ರಾಶಿಗಳಿವು..!

by ಪ್ರತಿಧ್ವನಿ
January 28, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

JDS: ಸ್ಥಳೀಯ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ: ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದೀತೇ?

January 28, 2026
ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

ಅಜಿತ್ ಪವಾರ್ ಸಾ**ನ ಸುದ್ದಿ ಕೇಳಿ ನನಗೂ ಗಾಬರಿ..ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು-ಡಿ.ಕೆ ಶಿವಕುಮಾರ್

January 28, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada