ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ರ(Bigg Boss Kannada Season) ಗ್ರ್ಯಾಂಡ್ ಫಿನಾಲೆ ನಿನ್ನೆ ರಾತ್ರಿ ನಡೆದಿದ್ದು, ಕನ್ನಡ ಜನತೆಯ ನಿರೀಕ್ಷೆಯಂತೆ ಐವತ್ತು ಕೋಟಿಗೂ ಅಧಿಕ ಮತಗಳನ್ನು ಪಡೆಯುವ ಮೂಲಕ ಹಾಸ್ಯ ಕಲಾವಿದ ಗಿಲ್ಲಿ ನಟ(Gilli Nata) ಭರ್ಜರಿ ಗೆಲುವು ಸಾಧಿಸಿದ್ದಾರೆ.

ಪ್ರೇಕ್ಷಕರ ಹೃದಯ ಗೆದ್ದ ಗಿಲ್ಲಿ ಕೊನೆಗೂ ಬಿಗ್ ಬಾಸ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಗಿಲ್ಲಿ ನಟ ಅವರ ಗೆಲುವಿಗೆ ಕೇವಲ ಕಲರ್ಸ್ ಕನ್ನಡ ಮಾತ್ರವಲ್ಲದೇ, ಪ್ರತಿಸ್ಪರ್ಧಿ ವಾಹಿನಿಯಾದ ಜೀ ಕನ್ನಡವೂ(Zee kannada) ವಿಶೇಷವಾಗಿ ಶುಭಾಶಯ ಕೋರಿರುವುದು ಈಗ ಎಲ್ಲರ ಗಮನ ಸೆಳೆದಿದೆ.

ಇತ್ತ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಘೋಷಣೆಯಾಗುತ್ತಿದ್ದಂತೆ ಅತ್ತ ಜೀ ಕನ್ನಡ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗಿಲ್ಲಿಗೆ ಶುಭಾಶಯ ಕೋರಿರುವ ಪೋಸ್ಟ್ ಹಂಚಿಕೊಂಡಿದೆ. ಈ ಪೋಸ್ಟ್‌ನಲ್ಲಿ ತನ್ನ ಕಾಮಿಡಿ ಟೈಮಿಂಗ್, ಅಮೋಘ ಪ್ರತಿಭೆಯ ಮೂಲಕ ವಿಜೇತನಾಗಿ ಕರುನಾಡಿನ ಮನಗೆದ್ದ ನಮ್ಮ ಗಿಲ್ಲಿಗೆ Congratulations ಎಂದು ಬರೆಯಲಾಗಿದೆ. ಸದ್ಯ ಜೀ ಕನ್ನಡದ ಅಭಿನಂದನಾ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: BBK 12: ಬಿಗ್ ಬಾಸ್ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
ಗಿಲ್ಲಿ ನಟ ಅವರು ಈ ಹಿಂದೆ ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ‘ಕಾಮಿಡಿ ಕಿಲಾಡಿಗಳು’, ‘ಭರ್ಜರಿ ಬ್ಯಾಚೂಲರ್ಸ್’ ಹಾಗೂ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಈ ಹಿನ್ನೆಲೆಯಲ್ಲೇ ಜೀ ಕನ್ನಡ ಗಿಲ್ಲಿಯನ್ನು ತಮ್ಮದೇ ಆದ ಪ್ರತಿಭೆ ಎಂದು ಹೆಮ್ಮೆಯಿಂದ ಅಭಿನಂದಿಸಿದೆ.













