ಸಾಮಾನ್ಯ ಪರಿಭಾಷೆಯಲ್ಲಿ ಗೊನೆ ಎಂಬ ಪದ ನಿರ್ದಿಷ್ಟ ಹಣ್ಣುಗಳ ಗುಚ್ಚವನ್ನು ಪ್ರತಿನಿಧಿಸುತ್ತದೆ. ಒಂದು ಗೊನೆ ಎಂದರೆ ಅದರಲ್ಲಿ ಒಂದೇ ತೆರನಾದ ಹಣ್ಣುಗಳು ಇರುವುದೂ ಸಹ ನೈಸರ್ಗಿಕ ಸೃಷ್ಟಿ. ಬಿಡಿಸದೆ ಕಾಂಡದಲ್ಲೇ ಇರುವ ಹೂವುಗಳನ್ನು ಕ್ರೋಢೀಕರಿಸಿ ಒಂದು ಕಂತೆ ಮಾಡಿದರೆ ಅದನ್ನು ʼ ಗೊಂಚಲು ʼಎಂದು ಕರೆಯುತ್ತೇವೆ. ಹಣ್ಣಿನ ಗೊನೆ ಮತ್ತು ಹೂ ಗೊಂಚಲು ಇವೆರಡನ್ನೂ ಒಂದು ಕೋಶದಲ್ಲಿಟ್ಟಾಗ ಹೇಗೆ ನಿರ್ವಚನೆ ಮಾಡಬಹುದು ? ಈ ಜಿಜ್ಞಾಸೆ ಮನದಲ್ಲಿ ಮೂಡಲು ಕಾರಣ, ನಮ್ಮ ನಡುವಿನ ಹಿರಿಯ ಸಾಹಿತಿ (ಜನಪದ. ಇತಿಹಾಸ. ರಂಗಭೂಮಿ. ರಾಜಕೀಯ. ಸಾಹಿತ್ಯ ಎಲ್ಲವನ್ನೂ ಅರಗಿಸಿಕೊಂಡ ವ್ಯಕ್ತಿ ) ಹೊರೆಯಾಲ ದೊರೆಸ್ವಾಮಿ ಅವರ ʼಗೊನೆ ʼ ಹೆಸರಿನ ಅಂಕಣ ಬರಹಗಳ ಸಂಕಲನ.
ಧ್ವನಿ ಗಟ್ಟಿಯಾಗಿದ್ದರೂ ಸಹ ಇವರನ್ನು ನಾನು ಸದ್ದಿಲ್ಲದ ಸಾಹಿತಿ ಎಂದೇ ಕರೆಯುತ್ತೇನೆ. ಏಕೆಂದರೆ ಇವರಲ್ಲಿರುವ ಸಾಹಿತ್ಯದ ಅರಿವು ಮತ್ತು ಅಪಾರ ಜ್ಞಾನದ ಹೊರತಾಗಿಯೂ ಸಾಹಿತ್ಯ-ರಂಗಭೂಮಿ ವಲಯದಲ್ಲಿ ಹೆಚ್ಚು ಸದ್ದು ಮಾಡಿದವರಲ್ಲ. ಕಾವ್ಯ, ಸಣ್ಣಕತೆ, ಕಾದಂಬರಿ, ಪ್ರಬಂಧ, ನಾಟಕ, ರೂಪಕಗಳು, ಜಾನಪದ, ವಿಮರ್ಶಾ ಬರಹ ಹೀಗೆ ಅಕ್ಷರ ಲೋಕದ ಎಲ್ಲ ಪ್ರಕಾರಗಳಲ್ಲೂ ತಮ್ಮ ಗಟ್ಟಿ ಹೆಜ್ಜೆಗಳನ್ನಿಟ್ಟು ಈಗ 80ರ ಹರೆಯದಲ್ಲಿರುವ ಹೊರೆಯಾಲ ದೊರೆಸ್ವಾಮಿ , ಕನ್ನಡ ಸಾಹಿತ್ಯ ಲೋಕದಲ್ಲಿ ಕಲರವ ಉಂಟುಮಾಡದೆ ತಮ್ಮಷ್ಟಕ್ಕೆ ತಾವು ಸದ್ದಿಲ್ಲದೇ ಬರೆದಿರುವ 62 ಕೃತಿಗಳನ್ನು ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅದರಲ್ಲಿ ಇತ್ತೀಚಿನದಾದ ʼ ಗೊನೆ ʼ ನನ್ನ ಕೈಗೆ ಬಂದು, ಈ ಕೃತಿಯ ಬಗ್ಗೆ ನೀವು ಮಾತನಾಡಬೇಕು ಎಂದು ಕೇಳಿದಾಗ, ಥಟ್ಟನೆ ಆಗಲಿ ಎಂದುಬಿಟ್ಟೆ. ಸಮಯ ಹತ್ತು ದಿನಗಳೇ ಇದ್ದರೂ 340 ಪುಟಗಳ ಪುಸ್ತಕವನ್ನು ಒಮ್ಮೆಲೆ ಕೂತು ಓದುವ ಸದಾವಕಾಶ ಸಿಕ್ಕ ಸಂತೋಷ ಇತ್ತು

ಇಂದು ಈ ಬಹುವೈವಿಧ್ಯ ವಿಚಾರಗಳ ಸಂಕಲನ ಓದುಗರ ಮುಂದಿದೆ. ಇದನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಅವಕಾಶ ನನ್ನದು.
ಕೃತಿಯ ವಿಶಾಲ ಹಂದರ
ಆರು ಕುಡಿಗಳಲ್ಲಿ (ಅಧ್ಯಾಯಗಳು) ಹರಡಿರುವ ಈ ಅಕ್ಷರ ಗೊನೆಯೊಳಗೆ ಅವಿತಿರುವ ಮಾಹಿತಿ, ವಿಶ್ಲೇಷಣೆ, ವಿಮರ್ಶೆ ಮತ್ತು ವ್ಯಕ್ತಿ ಪರಿಚಯಗಳು ಯಾವುದೇ ಸಮಾಜಶಾಸ್ತ್ರೀಯ ಅಧ್ಯಯನಕಾರರಿಗೆ ಹೈಪರ್ ಲಿಂಕ್‌ಗಳಾಗಿ (ಕೊಂಡಿಗಳಾಗಿ) ಬಳಕೆಯಾಗಬಹುದು. ಮೊದಲನೆ ಕುಡಿಯನ್ನು ಸಾಮಾಜಿಕ ಪರಿವರ್ತನೆಯ ಹರಿಕಾರ 12ನೆ ಶತಮಾನದ ಬಸವಣ್ನನಿಂದಲೇ ಆರಂಭಿಸುತ್ತಾರೆ. ವರ್ತಮಾನದಲ್ಲಿ ಅಧಿಕಾರ, ಸಂಪತ್ತು ಮತ್ತು ಕ್ರೋಢೀಕರಣದ ಭಾವಗಳಲ್ಲಿ ಗುರುತಿಸಲಾಗುವ ಬಸವ ಧರ್ಮವನ್ನು, ಇವರ ಬಸವಣ್ಣನ ನೈಜ ಧರ್ಮ ಲೇಖನವು ಪರೋಕ್ಷವಾಗಿ ನೇಪಥ್ಯಕ್ಕೆ ತಳ್ಳುತ್ತಾ, ಬಸವಣ್ಣನ ವಚನಗಳಲ್ಲಿದ್ದ ಸರ್ವ ಸಮಾನತೆ, ಸ್ಥಾಪಿತ ವೈದಿಕಶಾಹಿಯ ವಿರುದ್ಧ ಪ್ರತಿರೋಧ ಮತ್ತು ಹೊಸ ಸಮಾಜದ ಆಶಯಗಳನ್ನು ದೊರೆಸ್ವಾಮಿ ಕೆಲವು ವಚನಗಳನ್ನು ಉದ್ಧರಿಸುವ ಮೂಲಕ ಸೂಚಿಸುತ್ತಾರೆ. ಇದೇ ಓಘದಲ್ಲಿ ಅನುಭವ ಮಂಟಪದ ಕಿರು ಪರಿಚಯವೂ ಇದೆ.
ಮೊದಲನೆ ಕುಡಿಯಲ್ಲಿ ಸ್ವಾರಸ್ಯಕರವಾಗಿ ಕಾಣುವುದು ಕನಕರೋ ರೇವಣಸಿದ್ಧೇಶ್ವರರೊ ಎಂಬ ಲೇಖನ. ಕುರುಬ ಸಮುದಾಯದ ಕುಲಗುರುಗಳು ಕನಕದಾಸರೋ ಅಥವಾ ರೇವಣ ಸಿದ್ದೇಶ್ವರರೋ ಎಂಬ ಜಿಜ್ಞಾಸೆಯ ಸುತ್ತ ನಡೆದ ವಿದ್ವತ್ ಪೂರ್ಣ ಸಂವಾದಗಳನ್ನು ಉಲ್ಲೇಖಿಸುವ ಮೂಲಕ ದೊರೆಸ್ವಾಮಿ ಅವರು ಈ ಕುರಿತ ತಮ್ಮ ಖಚಿತ ಅಭಿಪ್ರಾಯವನ್ನೂ ಮಂಡಿಸುತ್ತಾರೆ. ಈ ಲೇಖನ ಮುಖ್ಯವಾಗುವುದಕ್ಕೆ ಕಾರಣ ಚಾರಿತ್ರಿಕ ಕಾಲಘಟ್ಟದ ಅನೇಕ ವೈವಿಧ್ಯ-ವಿರೋಧಾಭಾಸಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಯುವ ತಲೆಮಾರಿಗೆ ಇಂತಹುವನ್ನೇ ಪರಿಚಯಿಸಬೇಕಿದೆ. ಕುವೆಂಪು ದೃಷ್ಟಿಯಲ್ಲಿ ದೇವರು ಮತ್ತು ಧರ್ಮ ಎಂಬ ಲೇಖನವೂ ಸಹ ಇದೇ ನೆಲೆಯಲ್ಲಿ ಮುಖ್ಯವಾಗುತ್ತದೆ. ಮತ ಮತ್ತು ಧರ್ಮ ಇವುಗಳ ನಡುವಿನ ವ್ಯತ್ಯಾಸವನ್ನು ಅರಿಯುವುದು ವರ್ತಮಾನದ ತುರ್ತು. ಈ ಹಿನ್ನೆಲೆಯಲ್ಲಿ ಕುವೆಂಪು ಅವರ ಧರ್ಮ ಮತ್ತು ದೇವರ ಬಗೆಗಿನ ದೃಷ್ಟಿಕೋನಗಳನ್ನು ಅವರ ಕವಿತೆಗಳನ್ನು ಉಲ್ಲೇಖಿಸುವ ಮೂಲಕ ದೊರೆಸ್ವಾಮಿಯವರು ವಿಶ್ಲೇಷಿಸಿದ್ದಾರೆ. “ ಜಗತ್ತಿನ ಚೆಲುವಿನಲ್ಲಿ ದೇವರು, ವ್ಯಕ್ತಿಯ ಎದೆಯಲ್ಲಿ ಧರ್ಮ ಕಂಡರೆ ಯಾವ ದೇವರೂ ಬೇಕಿಲ್ಲ “ಎಂಬ ಬಹಳ ಉದಾತ್ತ ಚಿಂತನೆಯನ್ನು ಲೇಖಕರು ತೆರೆದಿಡುತ್ತಾರೆ.

ಈ ಕುಡಿಯಲ್ಲಿ ಅರಳುವ ಮತ್ತೊಂದು ಮೊಗ್ಗು ಗಿರೀಶ್ ಕಾರ್ನಾಡ್ ಅವರನ್ನು ಕುರಿತ, ವ್ಯಕ್ತಿ ಮತ್ತು ಕೃತಿಗಳು ಲೇಖನದಲ್ಲಿ. ಎನ್ ಕೆ ಮೋಹನ್ ರಾಮ್ ಅವರ ಕೃತಿಯೊಂದನ್ನು ಪರಿಚಯಿಸುವ ಈ ಲೇಖನ, ಸ್ವಾರಸ್ಯಕರ ವ್ಯಕ್ತಿಯಾಗಿ ಅಷ್ಟೇ ವಿವಾದಾಸ್ಪದ ವಿದ್ವಾಂಸರಾಗಿ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ನೆಲೆಯಾಗಿರುವ ಕಾರ್ನಾಡರನ್ನು ವಸ್ತುನಿಷ್ಠವಾಗಿ ಪರಿಚಯಿಸುತ್ತದೆ. ಮೋಹನ್ ರಾಮ್ ಬಹಳ ಮೊನಚಾಗಿ, ನಿಖರವಾಗಿ, ಯಾವುದೇ ಮುಜುಗರ ಸಂಕೋಚ ಇಲ್ಲದೆ ವಾಸ್ತವಗಳನ್ನು ದಾಖಲಿಸುವ ಲೇಖಕರಾಗಿಯೇ ಪ್ರಸಿದ್ಧಿ ಪಡೆದವರು. ಇವರ ಕೃತಿ ಓದಿದವರಿಗೆ ಗಿರೀಶ್ ಕಾರ್ನಾಡರ ಮತ್ತೊಂದು ಮುಖವನ್ನೂ ಗುರುತಿಸಲು ಸಾಧ್ಯವಾಗುತ್ತದೆ . ಈ ಲೇಖನ ಮುಖ್ಯವಾಗುವುದು ಕೇವಲ ಭಿನ್ನ ಅಭಿಪ್ರಾಯಗಳಿಗಾಗಿ ಅಲ್ಲ, ಕನ್ನಡ ಸಾಹಿತ್ಯ ಲೋಕದ ಒಳಸುಳಿಗಳನ್ನು ಅರಿತುಕೊಳ್ಳುವುದಕ್ಕೆ. ದೊರೆಸ್ವಾಮಿಯವರು ಇದನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಮತ್ತೊಂದು ಲೇಖನ ಪರಸಂಗದ ಗೆಂಡೆತಿಮ್ಮ ಕತೆಯ ಪರಿಚಯ. ದಿವಂಗತ ಕೃಷ್ಣ ಆಲನಹಳ್ಳಿ ಅವರ ಈ ಕತೆ ಚಲನಚಿತ್ರವಾಗಿಯೂ ಕನ್ನಡಿಗರ ನಡುವೆ ಚಿರಸ್ಥಾಯಿಯಾಗಿ ನಿಂತಿರುವುದು, ಈ ಕತೆಯೊಳಗೆ ಬರುವ ಮನುಜ ಸಂಬಂಧಗಳ ಸೂಕ್ಷ್ಮತೆಗಳ ನೆಲೆಯಲ್ಲಿ. ಮೂಲ ಲೇಖಕರ ಆಲೋಚನಾ ಲಹರಿಯನ್ನು ಸ್ವೀಕರಿಸುತ್ತಲೇ ದೊರೆಸ್ವಾಮಿ ಅವರು ಇಡೀ ಕತೆಯನ್ನು ವಿಮರ್ಶಾತ್ಮಕ ನೆಲೆಯಲ್ಲಿ ನೋಡುತ್ತಾ, ಎರಡು ವ್ಯಕ್ತಿತ್ವಗಳು ಹೇಗೆ ತಮ್ಮದೇ ಆದ ನಡೆಯ ಮೂಲಕ ಸ್ವಯಂ ಕೃತ ದುರಂತಕ್ಕೆ ಕಾರಣವಾಗುತ್ತವೆ ಎನ್ನುವುದನ್ನು ಖಚಿತ ಮಾತುಗಳಲ್ಲಿ ಹೇಳುತ್ತಾರೆ. ವಿಮರ್ಶಾ ಸಾಹಿತ್ಯದ ದೃಷ್ಟಿಯಿಂದ ಈ ಲೇಖನ ಆಪ್ತವೆನಿಸುತ್ತದೆ.
ಸಾಮಾಜಿಕ ಆರ್ಥಿಕ ಹಂದರದಲ್ಲಿ

ಎರಡನೆ ಕುಡಿಯನ್ನು ದೊರೆಸ್ವಾಮಿಯವರು ಆರಂಭಿಸುವುದೇ ನಮ್ಮ ನಡುವೆ ದೈತ್ಯಾಕಾರದಲ್ಲಿ ಬೆಳೆದು ನಿಂತಿರುವ ಜಾಗತೀಕರಣ ಎಂಬ ಮಾರುಕಟ್ಟೆ ಬಂಡವಾಳದ ವಿದ್ಯಮಾನದ ನೆರಳಿನಲ್ಲಿ. ಜಾಗತೀಕರಣ ಯುಗದಲ್ಲಿ ಸಮಾಜದ ಕೆಳಸ್ತರದ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಸವಾಲುಗಳು ಕಠಿಣ ಮತ್ತು ಜಟಿಲವೂ ಹೌದು. ಈ ದೃಷ್ಟಿಯಿಂದ ಸಮೃದ್ಧವಾಗಿರುವ ಜನಪದೀಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳು ಜಾಗತೀಕರಣ ಎಂಬ ಆಧುನಿಕ ವೈಪರೀತ್ಯವನ್ನು ಎದುರಿಸಲು ಸಮರ್ಥವಾದ ಅಸ್ತ್ರವಾಗಬಹುದೇ ಎಂಬ ವಿಶ್ಲೇಷಣೆ ಈ ಅಧ್ಯಾಯದಲ್ಲಿದೆ. ಇದು ಸಾಧ್ಯವಾಗದು ಎಂಬ ಲೇಖಕರ ಅಭಿಪ್ರಾಯದ ಹೊರತಾಗಿಯೂ, ಈ ಚರ್ಚೆ ಇನ್ನೂ ವಿಸ್ತರಿಸಬೇಕಾದ ಅವಶ್ಯಕತೆಯಂತೂ ಇದೆ.
ಮತ್ತೊಂದು ಗಮನ ಸೆಳೆಯುವ ಅಧ್ಯಾಯ ಸ್ವಾತಂತ್ರ್ಯ ಸಂಗ್ರಾಮದ ನಡುವೆ ರಚಿತವಾದ ಭಾರತ ಬೋಧೆ ಎಂಬ ಗೀತೆಯ ಪರಿಚಯ. ರಘುರಾಮದಾಸ ಎಂಬ ಚಳುವಳಿಗಾರನಿಂದ ರಚಿತವಾದ ಈ ಗೀತೆ ದೇಶೀಯತೆ ಮತ್ತು ಸ್ವಾತಂತ್ರ್ಯದ ಕಲ್ಪನೆಗಳಿಗೆ ಇಂಬು ಕೊಡುವಂತಹುದು ಎಂದು ಲೇಖಕರು ಅರ್ಥೈಸುತ್ತಾರೆ. 19 ಚೌಪದಿಗಳ ಈ ಗೀತೆಯ ಕೆಲವು ಸಾಲುಗಳನ್ನು ಉದ್ಧರಿಸುತ್ತಲೇ ಈ ಗೀತೆಯಲ್ಲಿ ಕಾಣಬಹುದಾದ ಜಾತೀಯತೆ ಮತ್ತು ಅನೈಕ್ಯತೆಯ ಸುಳಿವುಗಳನ್ನೂ ಗುರುತಿಸುವ ಮೂಲಕ, ದೊರೆಸ್ವಾಮಿ ಅವರು ಈ ಗೀತೆಯನ್ನು ಓದಬೇಕು ಎಂಬ ಹಂಬಲವನ್ನಂತೂ ಓದುಗರಲ್ಲಿ ಮೂಡಿಸುತ್ತಾರೆ. ಒಬ್ಬ ಪಾರದರ್ಶಕ ಲೇಖಕನ ಮುಖ್ಯ ಲಕ್ಷಣ ಇದು.
ಕುಡಿ ಮೂರರಲ್ಲಿ ರಂಗಾಯಣದ ಹುಟ್ಟು ಮತ್ತು ಬೆಳವಣಿಗೆ ಕುರಿತ ವ್ಯಾಖ್ಯಾನಗಳಿವೆ. ಮೈಸೂರಿನ ವಿದ್ವತ್ ವಲಯದಲ್ಲಿ ಈ ಸುತ್ತ ಇರುವ ವಾಸ್ತವಗಳು ಮತ್ತು ಸೃಷ್ಟಿಸಲಾಗಿರುವ ಕಥನಗಳು ಹೊಸತೇನಲ್ಲ. ಆದರೂ ರಂಗಾಯಣದ ಹಿಂದಿರುವ ಒಂದು ಉದಾತ್ತ ಉದ್ದೇಶವನ್ನು ಮನಗಾಣುತ್ತಲೇ ರಂಗಾಯಣ ಸಮಾಜಮಖಿಯಾಗಿ ಬೆಳೆಯಲಿ ಎಂಬ ಆಶಯವನ್ನೂ ವ್ಯಕ್ತಪಡಿಸುತ್ತಾರೆ. 2001-02ರ ಅಕ್ಕ ಉತ್ಸವ, ನಂತರ ಅದೇ ಬಹುರೂಪಿಯಾದದ್ದನ್ನು ಪ್ರಸ್ತಾಪಿಸುತ್ತಾ, ದೊರೆಸ್ವಾಮಿ ಅವರು ವ್ಯಕ್ತಪಡಿಸುವ ಅನುಮಾನಗಳು, ಜಿಜ್ಞಾಸೆಗಳು ಇವತ್ತಿಗೂ ಚರ್ಚಾರ್ಹವಾದುದು. ನಾಟಕೋತ್ಸವದ ಥೀಮ್ ಕುರಿತ ಚರ್ಚೆಗಳು ಇಂದಿಗೂ ನಡೆಯುತ್ತಿರುವುದರಿಂದ ಇದು ಒಂದು ಉಪಯುಕ್ತ ಲೇಖನವಾಗಿ ಕಾಣುತ್ತದೆ. ಎನ್.ಕೆ . ಮೋಹನ್ ರಾಮ್ ಅವರ ಕೃತಿಯನ್ನೇ ಆಧರಿಸಿ ಹವ್ಯಾಸಿ ರಂಗಭೂಮಿಯ ಒಳಸುಳಿಗಳನ್ನೂ ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

ಸಾಹಿತ್ಯ ರಂಗಭೂಮಿಯ ಹರವು
ಮತ್ತೊಂದು ಸ್ವಾರಸ್ಯಕರ ಲೇಖನ ಏಕವ್ಯಕ್ತಿ ಪ್ರದರ್ಶನದ ಬಗ್ಗೆ ದೊರೆಸ್ವಾಮಿ ಅವರ ತಕರಾರುಗಳು. ಏಕ ವ್ಯಕ್ತಿ ಪ್ರದರ್ಶನ ಎಂದೂ ಪೂರ್ಣ ಪ್ರಮಾಣದ ನಾಟಕವಾಗಲಾರದು ಎಂಬ ಖಚಿತ ಅಭಿಪ್ರಾಯವನ್ನು ವರ್ತಮಾನದ ಸಂದರ್ಭದಲ್ಲಿ ನೋಡುವಾಗ ಇದು ಇನ್ನೂ ಹೆಚ್ಚು ಚರ್ಚೆಗೊಳಗಾಗಬೇಕಾದ ಅಂಶ ಎನಿಸುತ್ತದೆ. ಆದರೆ ಈ ಲೇಖನದಲ್ಲಿ ದೊರೆಸ್ವಾಮಿಯವರು ತಮ್ಮ ಅಭಿಪ್ರಾಯವನ್ನು ಸಮರ್ಥಿಸುವ ನಿಟ್ಟಿನಲ್ಲಿ ಸಾಕಷ್ಟು ಗ್ರಾಂಥಿಕ ಉಲ್ಲೇಖಗಳನ್ನು, ವಿದ್ವತ್‌ಪೂರ್ಣ ಅಭಿಪ್ರಾಯಗಳನ್ನೂ ಮಂಡಿಸುತ್ತಾರೆ. ಇವುಗಳನ್ನು ಪುನರ್ ವಿಮರ್ಶಿಸುವ ಹೊಣೆ ರಂಗ ವಿಮರ್ಶಕರದ್ದು. ಹೊರೆಯಾಲ ಅವರ ಅಭಿಪ್ರಾಯದ ಬಗ್ಗೆ ನನ್ನ ತಕರಾರು ಸಹ ಇದೆ. ಮುಂದೆ ಚರ್ಚಿಸುವ ವಿಷಯ ಇದು.
ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ಮೂಲ ಕೃತಿ ಅಥವಾ ಅನುವಾದವನ್ನು ಓದದಿರುವ ಯಾರಿಗೇ ಆದರೂ ದೊರೆಸ್ವಾಮಿ ಅವರ ಬರಹ, ʼಹ್ಯಾಮ್ಲೆಟ್- ಸಂಕ್ಷಿಪ್ತ ಅನುವಾದʼ ಬಹಳ ಉಪಯುಕ್ತವಾಗುತ್ತದೆ. ಎಲ್ಲರಿಗೂ ತಲುಪುವ ಸರಳ ಭಾಷೆಯಲ್ಲಿ ಇಡೀ ಕಥಾಹಂದರವನ್ನು ಓದುಗರ ಮುಂದಿಟ್ಟಿರುವುದು, ದೊರೆಸ್ವಾಮಿಯವ ವಿದ್ವತ್ ಪ್ರತಿಭೆಗೂ ಸಾಕ್ಷಿ ಎಂದರೆ ಉತ್ಪ್ರೇಕ್ಷೆಯಾಗಲಾರದು. ಮತ್ತೊಂದು ಅಧ್ಯಾಯದಲ್ಲಿ ಕನ್ನಡ ನಾಟಕಕಾರರ ಪೈಕಿ ಅತಿ ವಿಶಿಷ್ಟ ಎಂದೇ ಖ್ಯಾತಿ ಪಡೆದಿರುವ ಶ್ರೀರಂಗರ ಪರಿಚಯವನ್ನೂ ಲೇಖಕರು ಪರಿಣಾಮಕಾರಿಯಾಗಿ ಮಾಡಿದ್ದಾರೆ. ಪುಟ್ಟ ಲೇಖನದಲ್ಲೇ ಶ್ರೀರಂಗರ ಕೃತಿ ವಿಮರ್ಶೆ, ವ್ಯಕ್ತಿಪರಿಚಯ ಮತ್ತು ಅವರ ಲೇಖನಗಳ ಪರಿಚಯವನ್ನು ಮಾಡಿಕೊಟ್ಟಿರುವುದು ಸ್ವಾಗತಾರ್ಹ. ಇದು ಸಾರ್ವಕಾಲಿಕ ಪ್ರಸ್ತುತತೆ ಪಡೆಯುವ ಲೇಖನ.

ಆರ್ಥಿಕ ಚಿಂತನೆಗಳ ಚೌಕಟ್ಟಿನಲ್ಲಿ
ಈ ಕೃತಿಯ ಕೇಂದ್ರ ಬಿಂದು ಇರುವುದು ಕುಡಿ 4ರಲ್ಲಿ. ಸಮಾಜವಾದ ಎಂಬ ಪದ ಭಾರತದಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಮಾಜಶಾಸ್ತ್ರೀಯ ಅರ್ಥಗಳನ್ನು ಪಡೆದುಕೊಂಡು ವಿಪುಲವಾದ ಸಾಹಿತ್ಯವೂ ಸೃಷ್ಟಿಯಾಗಿದೆ. ನಮಗೆ ತಿಳಿದಿರುವಂತೆ ಲೋಹಿಯಾ ಸಮಾಜವಾದ ಇಂದಿಗೂ ಪ್ರಚಲಿತವಾದ ಒಂದು ರಾಜಕೀಯ ತತ್ವ. ಆದರೆ ಅಧಿಕಾರ ರಾಜಕಾರಣದ ರಥ ಚಕ್ರಕ್ಕೆ ಸಿಲುಕಿ ಸಮಾಜವಾದ ಎನ್ನುವುದು ಬಹುತೇಕ ಆಲಂಕಾರಿಕವಾಗಿರುವುದು ಕಟು ವಾಸ್ತವ. ಬೌದ್ಧಿಕ ವಲಯಗಳಲ್ಲಿ ಸಮಾಜವಾದದ ಬಗ್ಗೆ ಇರುವ ವಿದ್ವತ್ ಪೂರ್ಣ ಚರ್ಚೆ, ಸಂವಾದ, ಕೃತಿಗಳಿಗೂ, ರಾಜಕೀಯವಾಗಿ ಸಮಾಜವಾದಿ ಎಂದು ಗುರುತಿಸಿಕೊಂಡಿರುವವರ ಮಾದರಿಗಳಿಗೂ ಅಜಗಜಾಂತರ ವ್ಯತ್ಯಾಸ ಇರುವುದು ಒಪ್ಪಲೇಬೇಕಾದ ವಾಸ್ತವ. ಈ ದೃಷ್ಟಿಯಿಂದ ಸಮಾಜವಾದ ಎಂದರೇನು, ಅದರ ಉಗಮ, ಬೆಳವಣಿಗೆ, ಮೂಲ ಕಲ್ಪನೆ ಇವೆಲ್ಲವನ್ನೂ ಒಂದೇ ಲೇಖನದಲ್ಲಿ ಹೊರೆಯಾಲ ಅವರು ವಿಷದವಾಗಿ ಮಂಡಿಸಿರುವುದು ಪ್ರಶಂಸಾರ್ಹ.
ಮಾರ್ಕ್ಸ್, ಏಂಗೆಲ್ಸ್ ಅವರ ದೃಷ್ಟಿಕೋನದಿಂದ ನೋಡಿದಾಗ ವೈಜ್ಞಾನಿಕ ಸಮಾಜವಾದ ನಮ್ಮೆದುರು ನಿಲ್ಲುತ್ತದೆ. ಆದರೆ ಈ ಇಬ್ಬರು ವಿದ್ವಾಂಸರಿಗೂ ಮುನ್ನ 15ನೆ ಶತಮಾನದಿಂದಲೇ ಸಮಾಜವಾದದ ಮೂಲ ಕಲ್ಪನೆಯ ಬೀಜ ಬಿತ್ತಿದ ಹಲವು ವಿದ್ವಾಂಸರನ್ನು ದೊರೆಸ್ವಾಮಿ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸುತ್ತಾರೆ. ಈ ಪರಿಚಯಗಳನ್ನು ಹೈಪರ್ ಲಿಂಕ್‌ಗಳ ಹಾಗೆ ನೋಡಿದಾಗ ನಮಗೆ, ನಾವು ಮಾರ್ಕ್ಸ್‌ವಾದಿ/ಸಮಾಜವಾದಿಗಳೂ ಸಹ ಅಧ್ಯಯನ ಮಾಡಬೇಕಾದ ಚರಿತ್ರೆ ಇನ್ನೂ ಅಗಾಧವಾಗಿದೆ ಎಂಬ ಭಾವನೆ ಮೂಡುತ್ತದೆ. ಈ ಶತಮಾನದ ಥಾಮಸ್ ಮೂರ್‌ನಿಂದ ಜರ್ಮನಿಯ ಹೆಗೆಲ್‌ವರೆಗೆ ತದನಂತರ ಮಾರ್ಕ್ಸ್ ಮತ್ತು ಏಂಗೆಲ್ಸ್‌ವರೆಗೆ ಪಯಣಿಸುವ ಸಮಾಜವಾದದ ಸಂಕಥನ, ವ್ಯಾಖ್ಯಾನ ಮತ್ತು ವಿಶ್ಲೇಷಣೆಗಳಲ್ಲಿ ಐದಾರು ವಿದ್ವಾಂಸರನ್ನು ದೊರೆಸ್ವಾಮಿ ಉಲ್ಲೇಖಿಸುತ್ತಾರೆ. ಈ ವಿವಿಧ ವಿದ್ವಾಂಸರ ಪ್ರತಿಪಾದನೆಗಳನ್ನೂ ಸಂಕ್ಷಿಪ್ತವಾಗಿ ವಿವರಿಸುತ್ತಾರೆ.
ವರ್ತಮಾನದ ಸನ್ನಿವೇಶದಲ್ಲಿ Welfare Economics ಕಲ್ಯಾಣ ಆರ್ಥಿಕತೆಯನ್ನೇ ಸಮಾಜವಾದ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿರುವುದರಿಂದ, ಈ ಉದಾತ್ತ ತತ್ವದ ಮೂಲ ಆಶಯಗಳನ್ನು ಪರಿಚಯಿಸಿಕೊಳ್ಳಬೇಕಾದ್ದು ಯುವ ತಲೆಮಾರಿನ ಆದ್ಯತೆಯಾಗಬೇಕು. ಸಂಪತ್ತಿನ ಸಮಾನ ವಿತರಣೆ, ಖಾಸಗಿ ಆಸ್ತಿಯ ನಿರಾಕರಣೆ ಮತ್ತು ಉತ್ಪಾದನಾ ಸಂಬಂಧಗಳು ಸಮಾಜವಾದದ ಬಹುಮುಖ್ಯ ಆಕರಗಳಾಗುತ್ತವೆ. ಭಾರತದ ಪ್ರಸ್ತುತ ರಾಜಕಾರಣದಲ್ಲಿ ಈ ಮೂರೂ ಅಂಶಗಳನ್ನು ಬಿಟ್ಟು, ಸಾಂವಿಧಾನಿಕ ಸವಲತ್ತು, ಸೌಕರ್ಯಗಳ ವಿತರಣೆಯನ್ನೇ ಸಮಾಜವಾದ ಎಂದು ಬಿಂಬಿಸುತ್ತಿರುವುದನ್ನು ಗಮನಿಸಬಹುದು. ಇದನ್ನು ದೊರೆಸ್ವಾಮಿ ಸಮಾಜವಾದದ ಅಪಭ್ರಂಶ (Aberation)ಎಂದು ಕರೆಯುವುದು ಸಮರ್ಥನೀಯವಾಗಿ ಕಾಣುತ್ತದೆ. ಸಮಾಜವಾದ ಶೀರ್ಷಿಕೆಯ ಲೇಖನ ಎಲ್ಲರೂ ಓದಿ ಜೀರ್ಣಿಸಿಕೊಳ್ಳಬೇಕಾದ ಮಾಹಿತಿಗಳನ್ನು ಒಳಗೊಂಡಿರುವುದು ಯುವ ತಲೆಮಾರಿನ ಭವಿಷ್ಯದ ಅಧ್ಯಯನಕ್ಕೆ ಪೂರಕವಾಗಿದೆ.

ಸಮಾಜಶಾಸ್ತ್ರೀಯ ಅಧ್ಯಯನದ ಕಡೆಗೆ
ಮೈಸೂರು ಸಂಸ್ಥಾನದ ಒಡೆಯರ ಆಳ್ವಿಕೆಯಲ್ಲಿ ಕಾಣಬಹುದಾದ ಕೆಲವು ಜನಪರ ಆಡಳಿತ ನೀತಿಗಳನ್ನು ಕೆಲವು ಲೇಖನಗಳು ಪರಿಚಯಿಸುತ್ತವೆ. 1881ರಲ್ಲೇ ಮೈಸೂರು ಸಂಸ್ಥಾನದ ದಿವಾನರಾಗಿದ್ದ ರಂಗಾಚಾರ್ಲು ಅವರ ಕಲ್ಪನೆ, ಪ್ರಜಾಪ್ರತಿನಿಧಿ ಸಭೆ ಚಾಲ್ತಿಗೆ ಬಂದಿದ್ದರ ಚಾರಿತ್ರಿಕ ಮಹತ್ವದ ಬಗ್ಗೆ ಹೊರೆಯಾಲ ಅವರು ತಮ್ಮ ಲೇಖನದಲ್ಲಿ ವಿಶ್ಲೇಷಿಸುತ್ತಾರೆ. ಪ್ರಜಾ ಪ್ರತಿನಿಧಿ ಸಭೆಯ ಬೆಳವಣಿಗೆಯ ಹಂತಗಳನ್ನೂ ಮನಮುಟ್ಟುವಂತೆ ವ್ಯಾಖ್ಯಾನಿಸಿರುವುದು ಮೆಚ್ಚುವಂತಹುದು. ಇದರ ಮುಂದುವರಿಕೆಯಾಗಿಯೇ ಮಿಲ್ಲರ್ ಆಯೋಗದ ಶಿಫಾರಸುಗಳು, ತದನಂತರದ ಭಾರತೀಯ ಸಂವಿಧಾನ ರಚನೆ ಇವೆಲ್ಲವನ್ನೂ ನಾವು ಗುರುತಿಸಬೇಕಿದೆ. ಇದೇ ಕುಡಿಯಲ್ಲಿರುವ ಟಿಪ್ಪುವಿನ ಗುಣದೋಷಗಳು ಲೇಖನ ಟಿಪ್ಪು ಕುರಿತಂತೆ ಮತ್ತೊಂದು ಆಯಾಮವನ್ನೂ ತೆರೆದಿಡುತ್ತದೆ. ಚಾರಿತ್ರಿಕ ದಾಖಲೆಗಳು, ಲಾವಣಿಗಳು ಮತ್ತು ಸ್ವೀಕೃತ ಸಂಶೋಧನಾ ಗ್ರಂಥಗಳೊಡನೆ ಮುಖಾಮುಖಿಯಾದಾಗ, ಮೈಸೂರು ಸಂಸ್ಥಾನದ ದಾಖಲೆಗಳನ್ನಾಧರಿಸಿದ ಇಲ್ಲಿನ ಅಭಿಪ್ರಾಯಗಳನ್ನು ಮುಕ್ತವಾಗಿ ಚರ್ಚಿಸಬೇಕಿದೆ.
ಈ ಭಾಗದ ಮತ್ತೊಂದು ಮುಖ್ಯ ಲೇಖನ ಎಂದರೆ ಪಿರಿಯಾಪಟ್ಟಣದ ಸುತ್ತಮುತ್ತ ದೊರೆಸ್ವಾಮಿ ಮತ್ತು ಅವರ ಗೆಳೆಯ, ನಮ್ಮೆಲ್ಲರ ಮೆಚ್ಚಿನ ವ್ಯಕ್ತಿ ಮುಳ್ಳೂರು ನಾಗರಾಜ್ ಅವರು ಕೈಗೊಂಡ ಪ್ರಯಾಸಕರ ಪ್ರಯಾಣ ಮತ್ತು ತನ್ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಗತವಾಗಿರುವ ಸಾಮಾಜಿಕ ಅರಿವು, ಜಾತಿ ಮನಸ್ಥಿತಿ, ಶೈಕ್ಷಣಿಕ ಹಿನ್ನಡೆ ಇವೆಲ್ಲವನ್ನೂ ಶೋಧಿಸಿದ ಮಾಹಿತಿಗಳು ಉಪಯಕ್ತವೆನಿಸುತ್ತವೆ. 35 ವರ್ಷಗಳ ಹಿಂದಿನ ಈ ಅನುಭವ ಕಥನ ವರ್ತಮಾನದ ಸಮಾಜದಲ್ಲಿ ಅಸ್ಪೃಶ್ಯತೆಯ ನಿವಾರಣೆಗಾಗಿ, ಅಥವ ಅಸ್ಪೃಶ್ಯತೆ ಆಚರಣೆಯ ವಿರುದ್ದ ನಡೆಯುತ್ತಿರುವ ಹೋರಾಟಗಳಿಗೆ ಒಂದು ದಿಕ್ಸೂಚಿಯಾಗಿ ಕಾಣುತ್ತದೆ.

ಕುಡಿ ಐದರಲ್ಲಿ ದೊರೆಸ್ವಾಮಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾರಂಭ ಮತ್ತು ಬೆಳವಣಿಗೆಗಳನ್ನು ವಿವಿಧ ಆಯಾಮಗಳಲ್ಲಿ ಚರ್ಚಿಸುತ್ತಾರೆ. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಅದರ ಸುತ್ತಲಿನ ಸಂವಾದಗಳ ಬಗ್ಗೆ ಮಾಹಿತಿ ಪೂರ್ಣ ಲೇಖನಗಳು ಇಲ್ಲಿವೆ. ಕುಡಿ 6 ರಲ್ಲಿ ಅಸ್ಪೃಶ್ಯತೆ ಆಚರಣೆಯ ನಿರ್ಮೂಲನೆ ಕುರಿತ ಅಧ್ಯಾಯ ಯುವ ತಲೆಮಾರಿಗೆ ಅರಿವು ವಿಕಸಿಸಲು ನೆರವಾಗುವ ಒಂದು ಬರಹ. ಈ ಭಾಗದಲ್ಲಿ ಹೊರೆಯಾಲ ಅವರ ವಿದ್ವತ್ ವೈವಿಧ್ಯದ ದರ್ಶನವಿದೆ. ಮಕ್ಕಳ ಸಾಮರ್ಥ್ಯ ಹಿಗ್ಗಿಸುವ ಬಗ್ಗೆ, ಮಾನವ ಧರ್ಮದ ಲಕ್ಷಣಗಳನ್ನು ಕುರಿತು, ಉದ್ಯಮ ರೂಪ ಪಡೆದಿರುವ ಪ್ರವಾಸಗಳ ಬಗ್ಗೆ, ಇಂದು ಅಗತ್ಯವಾಗಿರುವ ಪ್ರತಿರೋಧ, ಪ್ರತಿಭಟನೆಯ ಬಗ್ಗೆ, ಕ್ರಿಕೆಟ್ ಕ್ರೀಡೆಯ ಕಾರ್ಪೋರೇಟೀಕರಣವನ್ನು ಕುರಿತು, ಮಡಿ ಆಚರಣೆ ಕುರಿತು, ಭಾಷಾ ಮಾಧ್ಯಮದ ಬಗ್ಗೆ ವಿಭಿನ್ನ ನೆಲೆಗಳಲ್ಲಿ ದೊರೆಸ್ವಾಮಿ ತಮ್ಮ ಬರಹಗಳನ್ನು ದಾಖಲಿಸಿದ್ದಾರೆ.
ಇವುಗಳಲ್ಲಿ ಬಹುಮುಖ್ಯವಾಗಿ ಕಾಣುವುದು ಮುಂಬಯಿ ಬಳಿ ಇರುವ ಎಲಿಫೆಂಟಾ ಗುಹೆಗಳನ್ನು ಕುರಿತ ಮಾಹಿತಿಪೂರ್ಣ ಲೇಖನ. ಈ ಗುಹಾಂತರ ಶಿಲ್ಪಗಳ ಮೂಲವನ್ನು ಕನ್ನಡ ಅಸ್ಮಿತೆಯಲ್ಲಿ ದೊರೆಸ್ವಾಮಿಯವರು ಗುರುತಿಸಿರುವುದು ಸ್ವಾರಸ್ಯಕರ. ಇದೇ ಕುಡಿಯಲ್ಲಿ ಕೃಷ್ಣ ಆಲನಹಳ್ಳಿ ಅವರೊಡನೆ ತಮ್ಮ ಒಡನಾಟವನ್ನು ಸ್ಮರಿಸುವ ದೊರೆಸ್ವಾಮಿಯವರ ಭಾವುಕ ಲೇಖನ ಓದುಗರಲ್ಲೂ ಭಾವನೆಗಳನ್ನು ಸೃಷ್ಟಿಸುವಂತಿದೆ. ಹಾಗೆಯೇ ನಮ್ಮೆಲ್ಲರ ಒಡನಾಡಿ ಡಾ ವಿ ಲಕ್ಷ್ಮೀನಾರಾಯಣ್ ಅವರನ್ನು ಕುರಿತ ಲೇಖನವೂ ಸಹ ಹೃದಯಸ್ಪರ್ಶಿಯಾಗಿದೆ. ಅವರ ಪರಿಚಯ ಮತ್ತು ಒಡನಾಟವನ್ನು ಕುರಿತು ದೊರೆಸ್ವಾಮಿ ಅವರ ಲೇಖನ ಸಹಜವಾಗಿ ನನ್ನನ್ನು ಭಾವುಕನಾಗಿಸಿತ್ತು. ಲಕ್ಷ್ಮಿಯ ವ್ಯಕ್ತಿತ್ವವೇ ಅಂತಹುದು.
ವಿರಮಿಸುವ ಮುನ್ನ
ಹೊರೆಯಾಲ ಅವರ ʼಗೊನೆʼಯಲ್ಲಿರುವ ಎಲ್ಲ ಬರಹಗಳನ್ನೂ ಓದಿ ಸವಿದ ಮೇಲೆ ಸಹಜವಾಗಿ ಅನ್ನಿಸುವುದು, “ ಈ ವ್ಯಕ್ತಿಯ ಮಿದುಳಿನಲ್ಲಿ ಎಷ್ಟೊಂದು ಮಾಹಿತಿ, ಚರಿತ್ರೆಯ ಅರಿವು, ವರ್ತಮಾನದ ಕಾಳಜಿ ಮತ್ತು ವಿದ್ವತ್ತಿನ ಆಳ ಇದೆ ” ಎಂದು. ಇದು ಉತ್ಪ್ರೇಕ್ಷೆಗೆ ಹೇಳುತ್ತಿರುವುದಲ್ಲ. ಅವರಲ್ಲಿ ಸಂಶೋಧಕನಿದ್ದಾನೆ, ಕವಿ, ನಾಟಕಕಾರ, ಕಾದಂಬರಿಕಾರ, ಅಂಕಣಕಾರ, ವಿಮರ್ಶಕ, ರಾಜಕೀಯ ವಿಶ್ಲೇಷಕ ಮತ್ತು ಸಮಾಜಶಾಸ್ತ್ರೀಯ ಪ್ರಜ್ಞೆ ಎಲ್ಲವೂ ಅಡಗಿರುವುದು ವಾಸ್ತವ. ಗೊನೆ ಕೃತಿಯ ವಿಷಯ ವೈವಿಧ್ಯತೆ, ವಿಚಾರ ವೈವಿಧ್ಯತೆ ಮತ್ತು ಚರಿತ್ರೆಯಿಂದ ವರ್ತಮಾನದವರೆಗೆ ಸಮಾಜವನ್ನು ನೋಡುವ ಅವರ ವಿಶಾಲ ದೃಷ್ಟಿಕೋನ ಅಪ್ಯಾಯಮಾನವಾಗುತ್ತದೆ. ನನ್ನಂತಹ ಸಾಧಾರಣ ಬರಹಗಾರನಿಗೂ, ಸಂಶೋಧನಾ ವಿದ್ಯಾರ್ಥಿಗಳಿಗೂ, ಸಾಹಿತ್ಯ-ರಂಗಭೂಮಿಯ ಆಸಕ್ತರಿಗೂ ಸಮಾನವಾಗಿ ಉಪಯುಕ್ತವಾಗುವ ಒಂದು ಕೃತಿ ʼ ಗೊನೆ ʼ ,













