ಮುಂಬೈ: ಮಹಾರಾಷ್ಟ್ರ ಪಾಲಿಕೆ ಚುನಾವಣೆ(BMC Election 2026) ದೇಶದಾದ್ಯಂತ ಕುತೂಹಲ ಮೂಡಿಸಿದ್ದು, ಬಿಜೆಪಿ(BJP) ಮೈತ್ರಿಕೂಟ ಗೆಲುವಿನತ್ತ ಹೆಜ್ಜೆ ಹಾಕುತಿದೆ. ಈ ನಡುವೆ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್(Gauri Lankesh) ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶ್ರೀಕಾಂತ್ ಪಂಗಾರ್ಕರ್(Shrikant Pangarkar) ಭರ್ಜರಿ ಗೆಲುವು ಸಾಧಿಸಿದ್ದಾರೆ.

ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರದ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಾರ್ಡ್ ಸಂಖ್ಯೆ 13ರಿಂದ ಸ್ಪರ್ಧಿಸಿದ್ದ ಪಂಗಾರ್ಕರ್, ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬೆಂಬಲಿಗರೊಂದಿಗೆ ಸಂಭ್ರಮಾಚರಣೆ ನಡೆಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನೆಲೆ ಏನು..?
ಗೌರಿ ಲಂಕೇಶ್ ಅವರು 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ತಮ್ಮ ನಿವಾಸದ ಹೊರಗೆ ಗುಂಡೇಟಿನಿಂದ ಹತ್ಯೆಯಾಗಿದ್ದರು. ಈ ಪ್ರಕರಣ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಶ್ರೀಕಾಂತ್ ಪಂಗಾರ್ಕರ್ ಕೂಡ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದರು. ಪಂಗಾರ್ಕರ್ ಅವರಿಗೆ 2024ರ ಸೆಪ್ಟೆಂಬರ್ 4ರಂದು ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನಿನ ಮೇಲೆ ಹೊರಬಂದ ಬಳಿಕ ಅವರು ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಇದೀಗ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.












