ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಹತ್ವದ ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಇಂದಿನಿಂದ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಕ್ಯೂಆರ್ (QR) ಕೋಡ್ ಆಧಾರಿತ 1 ದಿನ, 3 ದಿನ ಹಾಗೂ 5 ದಿನಗಳ ಅನಿಯಮಿತ(Unlimited) ಪ್ರಯಾಣ ಪಾಸ್‌ಗಳನ್ನು ಬಿಎಂಆರ್‌ಸಿಎಲ್ ನೀಡುತ್ತಿದೆ.

ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದುವರೆಗೆ ಅನಿಯಮಿತ ಪ್ರಯಾಣಕ್ಕಾಗಿ ಕಾಂಟ್ಯಾಕ್ಟ್ ಲೆಸ್ ಸ್ಮಾರ್ಟ್ ಕಾರ್ಡ್ ಅವಶ್ಯಕವಾಗಿದ್ದು, ಅದಕ್ಕಾಗಿ ಪ್ರಯಾಣಿಕರು 50 ರೂಪಾಯಿ ಭದ್ರತಾ ಠೇವಣಿ ಪಾವತಿಸಬೇಕಾಗಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಈ ಠೇವಣಿ ಅಗತ್ಯವಿಲ್ಲ.

ಇನ್ನುಮುಂದೆ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾಸ್ ಪಡೆದು ನೇರವಾಗಿ ಮೆಟ್ರೋ ಪ್ರವೇಶಿಸಬಹುದು. ಇದರಿಂದ ಟಿಕೆಟ್ ಕೌಂಟರ್‌ಗಳಲ್ಲಿ ಸಾಲಿನಲ್ಲಿ ನಿಲ್ಲುವ ಅಗತ್ಯ ಕಡಿಮೆಯಾಗುವುದರ ಜೊತೆಗೆ, ಪ್ರಯಾಣವೂ ಇನ್ನಷ್ಟು ಸುಲಭ ಹಾಗೂ ವೇಗವಾಗಲಿದೆ.

1 ದಿನದ ಅನಿಯಮಿತ ಮೆಟ್ರೋ ಪಾಸ್‌ಗೆ 250 ರೂಪಾಯಿ, 3 ದಿನಗಳ ಅನಿಯಮಿತ ಮೆಟ್ರೋ ಪಾಸ್ 550 ರೂಪಾಯಿ, 5 ದಿನಗಳ ಅನಿಯಮಿತ ಮೆಟ್ರೋ ಪಾಸ್‌ಗೆ 850 ರೂಪಾಯಿ ನಿಗದಿ ಮಾಡಲಾಗಿದೆ. ಈ ಪಾಸ್‌ಗಳನ್ನು ಪಡೆದು ಎಲ್ಲಾ ಮೆಟ್ರೋ ಮಾರ್ಗಗಳಲ್ಲೂ ಪ್ರಯಾಣಿಸಬಹುದಾಗಿದೆ. ವಿಶೇಷವಾಗಿ ಬೆಂಗಳೂರು ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು, ದಿನನಿತ್ಯ ಹೆಚ್ಚಿನ ಪ್ರಯಾಣ ಮಾಡುವ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಈ ಪಾಸ್‌ಗಳು ಹೆಚ್ಚು ಅನುಕೂಲವಾಗಲಿದೆ.












