ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ನಡೆದಿರುವ ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಪ್ರಕರಣವು ಭಾರೀ ವಿವಾದಕ್ಕೆ ಕಾರಣವಾಗಿದ್ದು, ರಾಜ್ಯದ ಇತಿಹಾಸದಲ್ಲೇ ಪ್ರಾಣಿ ಹಿಂಸೆಯ ವಿರುದ್ಧ ಕೈಗೊಳ್ಳಲಾದ ಅತಿದೊಡ್ಡ ಕಾನೂನು ಕ್ರಮಗಳಲ್ಲಿ ಒಂದಾಗಿದೆ.

ಪೊಲೀಸರು ಹನಮಕೊಂಡ ಮತ್ತು ಕಾಮರೆಡ್ಡಿ ಜಿಲ್ಲೆಗಳಾದ್ಯಂತ ಏಳು ಗ್ರಾಮ ಮುಖ್ಯಸ್ಥರು ಸೇರಿದಂತೆ 15 ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ. ಹೊಸ ವರ್ಷದ ಮೊದಲ ಎರಡು ವಾರಗಳಲ್ಲಿ ಕನಿಷ್ಠ 500 ನಾಯಿಗಳನ್ನು ವಿಷಪೂರಿತವಾಗಿ ಕೊಂದಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲಿ ಪ್ರಾಣಿ ಹಿಂಸೆಯ ವಿರುದ್ಧದ ಅತಿದೊಡ್ಡ ಕ್ರಮಗಳಲ್ಲಿ ಒಂದಾಗಿದೆ.

ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ, ಬೀದಿ ನಾಯಿಗಳ ದಾಳಿಯಿಂದ ತತ್ತರಿಸಿದ್ದ ಗ್ರಾಮಸ್ಥರನ್ನು ಸೆಳೆಯುವ ಉದ್ದೇಶದಿಂದ ಕೆಲ ಅಭ್ಯರ್ಥಿಗಳು ನಾಯಿ-ಮುಕ್ತ ಗ್ರಾಮ ಮಾಡುವ ಭರವಸೆ ನೀಡಿದ್ದರು ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಆದರೆ ಈ ಭರವಸೆಯನ್ನು ಈಡೇರಿಸುವ ಹೆಸರಿನಲ್ಲಿ, ಕಾನೂನನ್ನು ಕೈಗೆತ್ತಿಕೊಂಡು ಬೀದಿ ನಾಯಿಗಳನ್ನು ಗುಂಪು ಗುಂಪಾಗಿ ಹತ್ಯೆ ಮಾಡಿರುವುದು ಈಗ ಬಹಿರಂಗವಾಗಿದೆ.

ಪೊಲೀಸರ ಪ್ರಕಾರ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸರಪಂಚ್‌ಗಳ ಸೂಚನೆಯಂತೆ ಈ ಕ್ರೂರ ಕೃತ್ಯ ನಡೆದಿದ್ದು, ಇದು ಸಂಪೂರ್ಣವಾಗಿ ಯೋಜಿತ ಮತ್ತು ವ್ಯವಸ್ಥಿತ ಹತ್ಯಾಕಾಂಡವಾಗಿತ್ತು. ಜಗ್ತಿಯಾಲ್ ಜಿಲ್ಲೆಯ ಧರ್ಮಪುರಿ ಪುರಸಭೆಯಿಂದ ಹೊರಬಂದಿರುವ ಒಂದು ಭಯಾನಕ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಬೀದಿ ನಾಯಿಗೆ ಮಾರಕ ಇಂಜೆಕ್ಷನ್ ಚುಚ್ಚುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಕೇವಲ ಒಂದು ನಿಮಿಷದೊಳಗೆ ನಾಯಿ ಕುಸಿದು ಸಾವನ್ನಪ್ಪುತ್ತದೆ. ಅದೇ ಸ್ಥಳದಲ್ಲಿ ಇನ್ನೂ ಎರಡು ನಾಯಿಗಳ ಶವಗಳು ಬಿದ್ದಿರುವುದು ಕಂಡುಬಂದಿದೆ. ಈ ಪುರಸಭಾ ವ್ಯಾಪ್ತಿಯಲ್ಲಿ ಮಾತ್ರವೇ ಕಳೆದ ಎರಡು ವಾರಗಳಲ್ಲಿ ಕನಿಷ್ಠ 50 ನಾಯಿಗಳನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ.

ಇತ್ತ ಹನಮಕೊಂಡ ಜಿಲ್ಲೆಯ ಶಾಯಂಪೇಟೆ ಪ್ರದೇಶದಲ್ಲಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 110ಕ್ಕೂ ಹೆಚ್ಚು ನಾಯಿಗಳ ಮೃತದೇಹಗಳನ್ನು ಹೊರತೆಗೆದಿರುವುದನ್ನು ದೃಢಪಡಿಸಿದ್ದಾರೆ. ಸಾವಿನ ನಿಖರ ಕಾರಣ ಪತ್ತೆಹಚ್ಚಲು ಕೆಲ ನಾಯಿಗಳ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಿಷಪೂರಿತ ಇಂಜೆಕ್ಷನ್ ಮೂಲಕ ಹತ್ಯೆ ಮಾಡಿರುವ ಶಂಕೆ ಬಲವಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಹತ್ಯಾಕಾಂಡದ ಹಿಂದೆ ಇದ್ದಂತೆ ಶಂಕಿಸಲಾಗಿರುವ 15 ಪ್ರಮುಖ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಸದ್ಯ ಈ ಪ್ರಕರಣದ ತನಿಖೆ ಮುಂದುವರಿದಿದೆ.












