ಆಸ್ಟ್ರೇಲಿಯಾದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ನ್ಯೂಸೌತ್ ವೇಲ್ಸ್ ವಿವಿ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ತನ್ನ ಕ್ಯಾಂಪಸ್ ಆರಂಭಿಸಲಿದೆ. ಈ ಸಂಬಂಧದ ಒಪ್ಪಂದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಸಮ್ಮುಖದಲ್ಲಿ ಸಹಿ ಮಾಡಲಾಯಿತು.

ವಿಧಾನಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಟಿಲಾ ಬ್ರಂಗ್ಸ್ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಒಪ್ಪಂದ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಈ ವಿಶ್ವವಿದ್ಯಾಲಯವು ಸದ್ಯಕ್ಕೆ ವಾಣಿಜ್ಯ, ಮಾಧ್ಯಮ, ಕಂಪ್ಯೂಟರ್ ಮತ್ತು ಡೇಟಾ ವಿಜ್ಞಾನ ಕೋರ್ಸುಗಳಲ್ಲಿ ಪದವಿ ಹಾಗೂ ಸೈಬರ್ ಸೆಕ್ಯುರಿಟಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ನೀಡಲಿದೆ ಎಂದು ಸಚಿವರಾದ ಎಂ ಬಿ ಪಾಟೀಲ ಮತ್ತು ಸುಧಾಕರ ಅವರು ತಿಳಿಸಿದ್ದಾರೆ.

ನಿಯೋಗದೊಂದಿಗೆ ವಿಚಾರ ವಿನಿಮಯ ನಡೆಸಿದ ನಂತರ ಮಾತನಾಡಿದ ಪಾಟೀಲ ಅವರು, ನ್ಯೂಸೌತ್ ವೇಲ್ಸ್ ವಿ.ವಿ.ದ ಶೈಕ್ಷಣಿಕ ಮಂಡಲಿಯೇ ಬೆಂಗಳೂರು ಕ್ಯಾಂಪಸ್ಸಿನಲ್ಲಿ ಓದುವ ವಿದ್ಯಾರ್ಥಿಗಳ ಮೇಲೆ ನಿಗಾ ಇಡಲಿದೆ. ಅಲ್ಲಿ ತಾನು ಹೊಂದಿರುವ ಪಠ್ಯಕ್ರಮವನ್ನೇ ಇಲ್ಲೂ ಬೋಧಿಸಲಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಹಲವು ಅಗ್ರಮಾನ್ಯ ಕಂಪನಿಗಳೂ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆ, ಕೌಶಲ್ಯಾಭ್ಯಾಸಕ್ಕೆ ನೆರವು ಸುಗಮವಾಗಿ ಸಿಗಲಿದೆ. ಮುಂಬರುವ ದಿನಗಳಲ್ಲಿ ಕ್ವಿನ್ ಸಿಟಿಯಲ್ಲಿ ಇವರ ಕ್ಯಾಂಪಸ್ ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 2025-30ರ ಅವಧಿಯ ಶೈಕ್ಷಣಿಕ, ಸಂಶೋಧನಾತ್ಮಕ ಸಹಭಾಗಿತ್ವ ಕಾರ್ಯಕ್ರಮ ಈಗ ಚಾಲ್ತಿಯಲ್ಲಿದೆ. ನ್ಯೂಸೌತ್ ವೇಲ್ಸ್ ವಿ.ವಿ. ಬೆಂಗಳೂರಿನಲ್ಲಿರುವ ಐಐಎಂ, ಭಾರತೀಯ ವಿಜ್ಞಾನ ಮಂದಿರ, ರಾಷ್ಟ್ರೀಯ ಕಾನೂನು ವಿವಿ, ಕೇಂದ್ರ ಸರಕಾರದ ಹೆದ್ದಾರಿ ಮತ್ತು ಉಕ್ಕು ಸಚಿವಾಲಯ, ಹಾಗೂ ರಾಜ್ಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಅವರು ವಿವರಿಸಿದ್ದಾರೆ.

ಸಚಿವ ಸುಧಾಕರ ಮಾತನಾಡಿ, ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯವು ಏಷ್ಯಾ-ಪೆಸಿಫಿಕ್ ವಲಯದಲ್ಲೇ ಅತ್ಯುತ್ತಮ ಉದ್ಯೋಗಾವಕಾಶನ್ನು ಸೃಷ್ಟಿಸುತ್ತಿರುವ ಶಿಕ್ಷಣ ಸಂಸ್ಥೆ ಎಂದು ಹೆಸರಾಗಿದೆ. ಇಲ್ಲಿಂದ ಪದವಿ/ ಸ್ನಾತಕೋತ್ತರ ಪದವಿ ಪಡೆದು ಹೊರಬರುವವರನ್ನು ಉದ್ಯೋಗದಾತರು ತಮ್ಮ ಕಂಪನಿಗಳಿಗೆ ಅರಸುತ್ತಿರುತ್ತಾರೆ. ಇಂತಹ ವಿ.ವಿ.ಯು ಬೆಂಗಳೂರಿನಲ್ಲಿ ಕ್ಯಾಂಪಸ್ ತೆರೆಯುತ್ತಿರುವುದರಿಂದ ಇಲ್ಲಿನ ನಾವೀನ್ಯತಾ ಕಾರ್ಯ ಪರಿಸರಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಜೊತೆಗೆ ಇಂತಹ ಇನ್ನಷ್ಟು ವಿದೇಶಿ ವಿ.ವಿ.ಗಳು ನಮ್ಮಲ್ಲಿಗೆ ಬರಲು ಉತ್ತೇಜನ ನೀಡಲಿದೆ ಎಂದು ಎಂದಿದ್ದಾರೆ.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಇನ್ವೆಸ್ಟ್ ಕರ್ನಾಟಕ ಫೋರಂ ಸಿಇಒ ಜ್ಯೋತ್ಸ್ನಾ ಮತ್ತಿತರ ಹಿರಿಯ ಅಧಿಕಾರಿಗಳು ಇದ್ದರು.











