ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ( Siddaramaiah) ಅವರು ನಾಳೆ (ಜನವರಿ 13) ಕಾಂಗ್ರೆಸ್ ವರಿಷ್ಠ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅವರನ್ನು ದಿಢೀರ್ ಭೇಟಿಯಾಗಲಿದ್ದಾರೆ. ನಾಳೆ ಕರ್ನಾಟಕಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ಸಿಎಂ ತವರು ಜಿಲ್ಲೆ ಮೈಸೂರಿನಲ್ಲೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ.

ರಾಹುಲ್ ಗಾಂಧಿ ನಾಳೆ ದೆಹಲಿಯಿಂದ ಮೈಸೂರಿಗೆ ಆಗಮಿಸಲಿದ್ದು, ಬಳಿಕ ತಮಿಳುನಾಡಿನ ಗುಡಲೂರಿಗೆ ತೆರಳಲಿದ್ದಾರೆ. ಈ ಪ್ರಯಾಣದ ಭಾಗವಾಗಿ ಅವರು ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕೆಲ ಸಮಯ ತಂಗಲಿದ್ದು, ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಕಂಡುಬರುತ್ತಿರುವ ಸಿಎಂ ಕುರ್ಚಿ ಬದಲಾವಣೆ ಬೆಳವಣಿಗೆಗಳು, ನಾಯಕತ್ವ ಹಸ್ತಾಂತರ ಚರ್ಚೆಗಳು, ಹಾಗೂ ಕೇಂದ್ರ ನಾಯಕರ ಜೊತೆ ರಾಜ್ಯ ನಾಯಕರ ಸಂವಹನದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ನಡುವಿನ ಈ ಭೇಟಿಯಲ್ಲಿ ರಾಜ್ಯದ ಪ್ರಸ್ತುತ ರಾಜಕೀಯ ಸ್ಥಿತಿಗತಿ, ಮುಂಬರುವ ಲೋಕಸಭಾ ಚುನಾವಣೆಗಳ ತಯಾರಿ, ಪಕ್ಷ ಸಂಘಟನೆ, ಹಾಗೂ ಆಡಳಿತ ಸಂಬಂಧಿತ ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೈಸೂರಿನಲ್ಲಿ ನಡೆಯಲಿರುವ ಸಿಎಂ ಸಿದ್ದರಾಮಯ್ಯ–ರಾಹುಲ್ ಗಾಂಧಿ ಭೇಟಿ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲಿದೆಯಾ ಎನ್ನುವ ಕುತೂಹಲ ಹೆಚ್ಚಾಗಿದೆ.











