ಚಿಕ್ಕಮಗಳೂರು: ಕೇಂದ್ರ ಸರ್ಕಾರ ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) (VB GRamG Bill)ಯೋಜನೆಯ ಹೆಸರನ್ನು ಬದಲಾಯಿಸಲು ಮುಂದಾಗಿರುವುದು ಜನರ ಹಕ್ಕನ್ನೇ ಕಿತ್ತುಕೊಳ್ಳುವ ಜನವಿರೋಧಿ ಕ್ರಮ ಎಂದು ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಮಾಡದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನರೇಗಾ ಯೋಜನೆ ಯಶಸ್ವಿಯಾಗಿ ಮಾಡಿದೆ. ಗ್ರಾಮೀಣ ಪ್ರದೇಶದ ಬಡವರು, ಕಾರ್ಮಿಕರು, ರೈತರಿಗೆ ಜೀವನಾಧಾರವಾದ ಈ ಯೋಜನೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದರು.

ಕೇಂದ್ರ ಸರ್ಕಾರ ಹೊಸ ಯೋಜನೆಗಳನ್ನು ಕೊಡದಿದ್ದರೂ ಪರವಾಗಿಲ್ಲ. ಆದರೆ ಜನರಿಗೆ ನೇರವಾಗಿ ಉಪಯೋಗವಾಗುತ್ತಿರುವ ಯೋಜನೆಯನ್ನು ನಿಲ್ಲಿಸುವ ಅಥವಾ ಅದರ ಸ್ವರೂಪ ಬದಲಾಯಿಸುವ ಕೆಲಸ ಮಾಡಬಾರದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿ ಅವರ ಹೆಸರನ್ನೇ ನರೇಗಾ ಯೋಜನೆಯಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಮುಂದಾಗಿರುವುದು ಅತ್ಯಂತ ಖಂಡನೀಯ. ಇದು ಕೇವಲ ಹೆಸರಿನ ಬದಲಾವಣೆ ಅಲ್ಲ, ಗಾಂಧೀಜಿ ಪ್ರತಿನಿಧಿಸುವ ಮೌಲ್ಯಗಳನ್ನೇ ಅಳಿಸುವ ಪ್ರಯತ್ನ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ಕ್ರಮೇಣ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಕೈಬಿಡಲು ಹೊರಟಿದೆ. ಯೋಜನೆಗಳ ಹೆಸರು ಬದಲಾವಣೆ, ಘೋಷಣೆಗಳ ಹೊರತುಪಡಿಸಿ ಜನರಿಗೆ ಲಾಭವಾಗುವಂತಹ ಯಾವುದೇ ಸಾಧನೆ ಇಲ್ಲ. ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೊಸ ಹೆಸರನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ವಿಷಯವನ್ನು ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯರ ಬಳಿಗೆ ಕೊಂಡೊಯ್ಯಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದರು.











