ಬೆಂಗಳೂರು: ರಾಮಮೂರ್ತಿನಗರ ಠಾಣಾ ವ್ಯಾಪ್ತಿ ಸುಬ್ರಮಣ್ಯ ಲೇಔಟ್ನಲ್ಲಿ ಸಾಫ್ಟ್ವೇರ್ ಉದ್ಯೋಗಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮೃತಪಟ್ಟ ಯುವತಿಯದ್ದು ಆಕಸ್ಮಿಕ ಸಾವಲ್ಲ, ಕೊಲೆ ಎನ್ನುವುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

34 ವರ್ಷದ ಯುವತಿ ಕೊಲೆ ಸಂಬಂಧ ಆರೋಪಿ ಕರ್ನಲ್ ಕುರೈ ಎಂಬಾತನನ್ನ ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವತಿ ಮನೆಯ ಪಕ್ಕದಲ್ಲೇ ವಾಸ ಮಾಡುತ್ತಿದ್ದ. ಆಗಾಗ ಮನೆಯ ಟೆರೆಸ್ ನಲ್ಲಿ ಯುವತಿಯನ್ನು ನೋಡುತ್ತಿದ್ದವನಿಗೆ ಆಕೆ ಮೇಲೆ ಮೋಹ ಬಂದಿತ್ತು. ಹೀಗಾಗಿ ಆಕೆಯನ್ನು ಒಲಿಸಿಕೊಳ್ಳಲು ಹೋಗಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾನೆ.

ಜ. 3ರ ರಾತ್ರಿ ಮನೆಯಲ್ಲಿ ಯುವತಿ ಒಬ್ಬಳೇ ಇದ್ದಳು. ಈ ವೇಳೆ ಟೆರೆಸ್ ಮೂಲಕ ಮನೆಯ ಸ್ಲೈಡ್ ವಿಂಡೊ ಓಪನ್ ಮಾಡಿ ಒಳನುಗ್ಗಿದ್ದ ಕುರೈ, ಯುವತಿಯನ್ನು ಬಲವಂತವಾಗಿ ಅಪ್ಪಿಕೊಂಡಿದ್ದ. ಆಕೆಯ ಮೇಲೆ ಲೈಂಗಿಕ ಕಿರುಕುಳ ಶುರು ಮಾಡಿದ್ದ. ಆರೋಪಿ ವರ್ತನಗೆ ಯುವತಿ ಪ್ರತಿರೋಧ ತೋರಿದ್ದಳು. ಇದರಿಂದ ಇಬ್ಬರ ನಡುವೆ ತಳ್ಳಾಟ ನೂಕಾಟ ನಡೆದು ಆಕೆ ಕೆಳಗೆ ಬಿದ್ದಾಗ ತಲೆಗೆ ಪೆಟ್ಟಾಗಿತ್ತು. ಈ ವೇಳೆ ಆಕೆ ಪ್ರಜ್ಞೆ ತಪ್ಪಿದ್ದು, ರಕ್ತಸ್ರಾವ ಆಗಿದೆ.

ಯುವತಿ ಸ್ಥಿತಿ ನೋಡಿ ಗಾಬರಿಗೊಂಡ ಕುರೈ ತಕ್ಷಣ ಆಕೆಯನ್ನು ಕಿಚನ್ ಬಳಿ ಎಳೆದೊಯ್ದು ಮಲಗಿಸಿದ್ದ. ಬಳಿಕ ಸಾಕ್ಷ್ಯ ನಾಶ ಉದ್ದೇಶದಿಂದ ರಕ್ತಸಿಕ್ತವಾಗಿದ್ದ ಬಟ್ಟೆಯನ್ನ ಹಾಸಿಗೆ ಮೇಲಿಟ್ಟು ಬೆಂಕಿ ಹಾಕಿ ಮನೆಗೆ ಮರಳಿದ್ದ. ಈ ವೇಳೆ ಮನೆಯಲ್ಲಿದ್ದ ಯವತಿ ಉಸಿರುಗಟ್ಟಿ ಮೃತಳಾಗಿದ್ದಳು.

ಘಟನೆ ನಡೆದ ದಿನ ಅನುಮಾನಾಸ್ಪದ ಸಾವು ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಯುವತಿ ಮೊಬೈಲ್ ಮಿಸ್ ಆಗಿರೋದು ಅನುಮಾನ ಹುಟ್ಟಿಸಿತ್ತು. ಹೀಗಾಗಿ ಸುತ್ತಮುತ್ತಲಿನ ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದರು. ಇದೇ ವೇಳೆ ಯುವತಿ ಮೊಬೈಲ್ ಕುರೈ ಬಳಿ ಪತ್ತೆಯಾಗಿತ್ತು. ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಡೆದ ಘಟನೆ ಬಾಯ್ಬಿಟ್ಟಿದ್ದಾನೆ.

ಸದ್ಯ ಆರೋಪಿ ಕುರೈ ಬಂಧಿಸಿರುವ ಪೊಲೀಸರು ಆತನ ವಿರುದ್ಧ ಅತ್ಯಾಚಾರ ಕೇಸ್ ಕೂಡ ದಾಖಲಿಸಿ, ಅತ್ಯಾಚಾರ ನಡೆದಿದ್ಯಾ ಎಂಬ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ.











