ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ(MLA Nayana Motamma) ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ, ಅವಮಾನಕಾರಿ ಹಾಗೂ ಮಹಿಳಾ ವಿರೋಧಿ ಕಾಮೆಂಟ್‌ಗಳನ್ನು ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಮನಗರ ಮೂಲದ ಯಕ್ಷಿತ್ ರಾಜ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಶಾಸಕಿ ನಯನಾ ಮೋಟಮ್ಮ ಅವರು ಇನ್ಸ್ಟಾಗ್ರಾಮ್‌ನಲ್ಲಿ ಎರಡು ಅಧಿಕೃತ ಖಾತೆಗಳನ್ನು ಹೊಂದಿದ್ದು, ಒಂದರಲ್ಲಿ ವೈಯಕ್ತಿಕ ಜೀವನದ ವಿಚಾರಗಳನ್ನು ಹಾಗೂ ಇನ್ನೊಂದರಲ್ಲಿ ರಾಜಕೀಯ ಚಟುವಟಿಕೆಗಳನ್ನು ಹಂಚಿಕೊಳ್ಳುತ್ತಾರೆ. ಖಾಸಗಿ ಪ್ರವಾಸ ಹಾಗೂ ವೈಯಕ್ತಿಕ ಕ್ಷಣಗಳ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ ವೈಯಕ್ತಿಕ ಖಾತೆಯಲ್ಲಿ ಆರೋಪಿಯು ಶಾಸಕಿ ಅವರ ಬಟ್ಟೆ ವಿಚಾರವನ್ನು ಮುಂದಿಟ್ಟುಕೊಂಡು ನಿರಂತರವಾಗಿ ಅಶ್ಲೀಲ ಹಾಗೂ ಅವಮಾನಕಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಶಾಸಕಿ ಅವರ ವೈಯಕ್ತಿಕ ಸಹಾಯಕ ಕಳೆದ ಅಕ್ಟೋಬರ್ ತಿಂಗಳಲ್ಲಿ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆರೋಪಿಯು ಸಾಮಾಜಿಕ ಜಾಲತಾಣದ ಮೂಲಕ ಶಾಸಕಿ ಅವರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಮಹಿಳಾ ವಿರೋಧಿ ಪದಗಳನ್ನು ಬಳಸುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಕಾಮೆಂಟ್ ಮಾಡಿದ ಇನ್ಸ್ಟಾಗ್ರಾಮ್ ಖಾತೆಯ ಐಪಿ ವಿಳಾಸ ಪತ್ತೆಹಚ್ಚಿ ಆರೋಪಿಯನ್ನು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯಕ್ಷಿತ್ ರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ.

ಶಾಸಕಿ ನಯನಾ ಮೋಟಮ್ಮ ಆಕ್ರೋಶ
ಈ ಹಿಂದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಶಾಸಕಿ ನಯನಾ ಮೋಟಮ್ಮ, ಮಹಿಳಾ ವಿರೋಧಿ ಮನೋಭಾವವನ್ನು ನಾನು ಖಂಡಿಸುತ್ತೇನೆ. ಸ್ಲೀವ್‌ಲೆಸ್ ಬಟ್ಟೆ ಹಾಕಿದರೆ ಕೆಲಸ ಮಾಡದ ರಾಜಕಾರಣಿ ಎನ್ನುತ್ತಾರೆ. ಡಿಪಿ ಇಲ್ಲದ ನಕಲಿ ಖಾತೆಗಳ ಮೂಲಕ ಇಂತಹ ಕಾಮೆಂಟ್‌ಗಳು ಬರುತ್ತವೆ. ಬಹುಶಃ ಒಂದು ದಿನ ನಾನವರನ್ನೇ ನೇರವಾಗಿ ಎದುರಿಸುತ್ತೇನೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನೇಕರು ಶಾಸಕಿ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ವಿರುದ್ಧದ ಆನ್‌ಲೈನ್ ದೌರ್ಜನ್ಯಕ್ಕೆ ಕಠಿಣ ಕ್ರಮ ಅಗತ್ಯವಿದೆ ಎಂದು ಅನೇಕರು ಆಗ್ರಹಿಸಿದ್ದರು.











