ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ, ಮನೆಯಲ್ಲಿ ಸ್ಪರ್ಧಿಗಳ ನಡುವಿನ ಸಂಬಂಧಗಳು ಮತ್ತಷ್ಟು ಚರ್ಚೆಗೆ ಗ್ರಾಸವಾಗಿವೆ. ಅದರಲ್ಲೂ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರು ರಘು ಹಾಗೂ ಗಿಲ್ಲಿ ಜೊತೆ ತೋರಿಸುತ್ತಿರುವ ಆಪ್ತತೆ ಇದೀಗ ವಾರಾಂತ್ಯದ ಚರ್ಚೆಯ ಕಾವು ಹೆಚ್ಚಿಸಿದೆ.

ಮನೆಯಲ್ಲಿ ರಕ್ಷಿತಾ–ರಘು–ಗಿಲ್ಲಿ ನಡುವಿನ ಸ್ನೇಹ ಸಂಬಂಧದ ಬಗ್ಗೆ ಹಲವು ಬಾರಿ ಇತರ ಸ್ಪರ್ಧಿಗಳಿಂದಲೇ ಪ್ರಶ್ನೆಗಳು ಕೇಳಿಬಂದಿವೆ. ವಿಶೇಷವಾಗಿ, ಈ ಇಬ್ಬರೊಂದಿಗೆ ಬೇರೆ ಯಾರಾದರೂ ಹೆಚ್ಚು ಹತ್ತಿರವಾದರೆ ರಕ್ಷಿತಾ ಅದನ್ನು ಸಹಿಸೋದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆ, ವಾರಾಂತ್ಯದ ಕಿಚ್ಚನ ಪಂಚಾಯ್ತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಈ ವಿಷಯವನ್ನು ನೇರವಾಗಿ ಪ್ರಸ್ತಾಪಿಸಿದ್ದಾರೆ.
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡುತ್ತಿದ್ದೀರಾ..? ಎಂದು ತೀಕ್ಷ್ಣವಾಗಿ ಪ್ರಶ್ನಿಸಿ, ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ರಕ್ಷಿತಾ ಮೌನವಾಗಿದ್ದರೆ, ಇತರ ಸ್ಪರ್ಧಿಗಳ ಮುಖದಲ್ಲಿ ಗಂಭೀರತೆ ಕಂಡುಬಂತು. ಈ ಎಪಿಸೋಡ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವೀಕ್ಷಕರು ಈ ವಿಚಾರದಲ್ಲಿ ರಕ್ಷಿತಾ ರಘು ಗಿಲ್ಲಿ ಪರ ನಿಂತಿದ್ದಾರೆ.

ಪ್ರತಿ ಬಾರಿಯೂ ಕಿಚ್ಚ ಸುದೀಪ್ ರಕ್ಷಿತಾ ವಿಚಾರದಲ್ಲಿ ಅತೀ ಗಂಭೀರತೆ ತೋರಿಸಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಈವರೆಗೂ ಎಲ್ಲಾ ಸ್ಪರ್ಧಿಗಳು ಅವರವರ ಇಷ್ಟದ ವ್ಯಕ್ತಿಗಳ ಜೊತೆಯಿದ್ದು, ಅವರು ಎಲಿಮಿನೇಟ್ ಆದ ಬಳಿಕ ಬೇರೆಯವರೊಂದಿಗೆ ಬೆರೆಯುತ್ತಿದ್ದಾರೆ. ಆದರೆ ರಕ್ಷಿತಾ ರಘು ಗಿಲ್ಲಿ ಮೊದಲಿನಿಂದಲೂ ತಮ್ಮ ಮಧ್ಯೆ ಉತ್ತಮ ಸ್ನೇಹ ಹೊಂದಿದ್ದಾರೆ. ಪ್ರತಿ ಬಾರಿಯೂ ಇದನ್ನು ತಪ್ಪು ಎನ್ನುವ ಕಿಚ್ಚ ಸುದೀಪ್ ನಡೆ ಸರಿಯಲ್ಲ ಎಂದಿರುವ ಪ್ರೇಕ್ಷಕರು ರಕ್ಷಿತಾ ಶೆಟ್ಟಿ ಎಲ್ಲರ ಸುಲಭದ ಟಾರ್ಗೆಟ್ ಎಂದು ವಾಹಿನಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

ಇನ್ನು ಈ ವಾರದ ಕಿಚ್ಚನ ಪಂಚಾಯತಿ ಈ ಸೀಸನ್‌ನ ಕೊನೆಯ ಪಂಚಾಯ್ತಿ ಆಗಲಿದೆ. ಕಾರಣ, ಮುಂದಿನ ವಾರ ಬಹು ನಿರೀಕ್ಷಿತ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಇದರಿಂದಾಗಿ ಬಿಗ್ ಬಾಸ್ ಅಭಿಮಾನಿಗಳು ಫೈನಲ್ ಕ್ಷಣಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಧನುಷ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸ್ಪರ್ಧಿಗಳು ಅಂದರೆ ಕಾವ್ಯಾ, ಗಿಲ್ಲಿ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ರಘು, ರಾಶಿಕಾ, ಅಶ್ವಿನಿ, ಧ್ರುವಂತ್ ನಾಮಿನೇಷನ್‌ನಲ್ಲಿದ್ದಾರೆ.

ಈ ಪೈಕಿ ಒಬ್ಬರು ಈ ವಾರವೇ ಬಿಗ್ ಬಾಸ್ ಮನೆಯಿಂದ ಹೊರಬೀಳುವ ಸಾಧ್ಯತೆ ಇದೆ. ಫಿನಾಲೆಗೂ ಮುನ್ನ ನಡೆಯುವ ಈ ಎಲಿಮಿನೇಷನ್, ಆಟದ ದಿಕ್ಕನ್ನೇ ಬದಲಾಯಿಸುವ ನಿರೀಕ್ಷೆಯಿದೆ. ಎಲಿಮಿನೇಷನ್ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವುದರಿಂದ, ಮುಂದಿನ ದಿನಗಳಲ್ಲಿ ಮನೆಯಲ್ಲಿ ಭಾವುಕ ಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.











