ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್(Yash) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ (Toxic) ಟೀಸರ್ ಬಿಡುಗಡೆಯಾದ ಬಳಿಕ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟೀಸರ್ನಲ್ಲಿ ಕಾಣಿಸಿಕೊಂಡಿರುವ ಕೆಲ ಅಸಭ್ಯ ದೃಶ್ಯಗಳು ಅಪ್ರಾಪ್ತರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಟಾಕ್ಸಿಕ್ ಸಿನಿಮಾವನ್ನು ಪಕ್ಕಾ ಹಾಲಿವುಡ್ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಿರುವುದು ಟೀಸರ್ನಿಂದಲೇ ತಿಳಿಯುತ್ತಿದೆ. ಈಗ ಬಿಡುಗಡೆ ಆಗಿರುವ ಟಾಕ್ಸಿಕ್ ಸಿನಿಮಾದ ಟೀಸರ್ನಲ್ಲಿ ಹಸಿ ಬಿಸಿ ದೃಶ್ಯವೇ ಹೆಚ್ಚಿದೆ. ಟಾಕ್ಸಿಕ್ ಸಿನಿಮಾ ದೊಡ್ಡವರ ಸಿನಿಮಾ, ಈ ಸಿನಿಮಾ ಕಿರಿಯರಿಗಲ್ಲ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.

ಈ ಹಿನ್ನೆಲೆಯಲ್ಲಿ ವಕೀಲ ಲೋಹಿತ್ ಕುಮಾರ್ ಅವರು ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ (Sensor Board)ಗೆ ದೂರು ಸಲ್ಲಿಸಿದ್ದಾರೆ. ಟೀಸರ್ನಲ್ಲಿ ಕಾಣಿಸಿಕೊಂಡಿರುವ ದೃಶ್ಯಗಳನ್ನು ಗಮನಿಸಿದರೆ ಈ ಸಿನಿಮಾ ಕುಟುಂಬ ಸಮೇತರಾಗಿ ವೀಕ್ಷಿಸಲು ಯೋಗ್ಯವಾಗಿಲ್ಲ. ಸಾಮಾನ್ಯವಾಗಿ ಚಿತ್ರಮಂದಿರಗಳಲ್ಲಿ ‘ಎ’ ಪ್ರಮಾಣಪತ್ರ ಪಡೆದ ಚಿತ್ರಗಳಿಗೆ ಮಕ್ಕಳ ಪ್ರವೇಶ ನಿರ್ಬಂಧಿಸಲಾಗುತ್ತದೆ.

ಆದರೆ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗುವ ಟೀಸರ್ಗಳಿಗೆ ಯಾವುದೇ ಸ್ಪಷ್ಟ ಮಾರ್ಗಸೂಚಿಗಳಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಆದ್ದರಿಂದ, ಸೆನ್ಸಾರ್ ಮಂಡಳಿ ಚಿತ್ರಗಳಷ್ಟೇ ಅಲ್ಲದೇ ಟೀಸರ್ಗಳಿಗೂ ಸ್ಪಷ್ಟ ಹಾಗೂ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಲೋಹಿತ್ ಕುಮಾರ್ ಒತ್ತಾಯಿಸಿದ್ದಾರೆ. ‘ಟಾಕ್ಸಿಕ್’ ಟೀಸರ್ ವಿಚಾರ ಇದೀಗ ಸಿನಿ ವಲಯದಲ್ಲೂ ಹಾಗೂ ಸಾರ್ವಜನಿಕ ಚರ್ಚೆಯಲ್ಲೂ ಗಮನ ಸೆಳೆಯುತ್ತಿದೆ.











