ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಇಬ್ಬರು ಕಿಡಿಗೇಡಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ. ತಡರಾತ್ರಿ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದೇವಪುರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಮಾನವೀಯವಾಗಿ ನಡೆದುಕೊಂಡ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ ಜೋರಾಗಿದೆ.

ಘಟನೆ ಹಿನ್ನೆಲೆ ಏನು..?
ಡೆಲಿವರಿ ಬಾಯ್ ತನ್ನ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವೇಳೆ ರಸ್ತೆ ತಿರುವಿನ ಬಳಿ ಆರೋಪಿಗಳಿಬ್ಬರು ಮತ್ತೊಂದು ಸ್ಕೂಟರ್‌ನಲ್ಲಿ ವೇಗವಾಗಿ ಬಂದಿದ್ದಾರೆ. ಅಪಘಾತ ತಪ್ಪಿಸಲು ಡೆಲಿವರಿ ಬಾಯ್ ತಕ್ಷಣ ತನ್ನ ಸ್ಕೂಟರ್ ನಿಲ್ಲಿಸಿದ್ದಾನೆ. ಆದರೆ ನಿಯಂತ್ರಣ ತಪ್ಪಿದ ಆರೋಪಿಗಳ ಸ್ಕೂಟರ್ ರಸ್ತೆ ಮೇಲೆ ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಯಾವುದೇ ಕಾರಣವಿಲ್ಲದೆ ಡೆಲಿವರಿ ಬಾಯ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಆರೋಪಿಗಳು ಹೆಲ್ಮೆಟ್‌ನಿಂದ ಹೊಡೆದು, ರಸ್ತೆಯಲ್ಲೇ ಡೆಲಿವರಿ ಬಾಯ್ ಅನ್ನು ಕೆಳಗೆ ಬೀಳಿಸಿ ಕಾಲಿನಿಂದ ಒದ್ದು ಅಮಾನವೀಯವಾಗಿ ವರ್ತಿಸಿದ್ದಾರೆ. ಗಾಯಗೊಂಡ ಡೆಲಿವರಿ ಬಾಯ್ ಕೈಮುಗಿದು ಮನವಿ ಮಾಡಿದರೂ ಕಿಡಿಗೇಡಿಗಳು ಹಲ್ಲೆ ನಿಲ್ಲಿಸದೇ ಅಟ್ಟಹಾಸ ಮೆರೆಯಿದ್ದಾರೆ ಎನ್ನಲಾಗಿದೆ.

ರಸ್ತೆಯಲ್ಲೇ ನಡೆಯುತ್ತಿದ್ದ ಹಲ್ಲೆ ಗಮನಿಸಿದ ಕೆಲ ಸ್ಥಳೀಯರು ಆರೋಪಿಗಳನ್ನು ಪ್ರಶ್ನಿಸಿದ್ದಾರೆ. ಆದರೆ ಆರೋಪಿಗಳು ಸ್ಥಳೀಯರ ಮೇಲೂ ಎಗರಾಡಿ ದೌರ್ಜನ್ಯ ನಡೆಸಲು ಮುಂದಾದಾಗ, ಆಕ್ರೋಶಗೊಂಡ ಸ್ಥಳೀಯರು ಒಟ್ಟಾಗಿ ಆರೋಪಿಗಳನ್ನು ಹಿಡಿದು ಥಳಿಸಿದ್ದಾರೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಸಂಪೂರ್ಣ ದೃಶ್ಯಗಳು ಹತ್ತಿರದ ಅಂಗಡಿಯೊಂದರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಹಲ್ಲೆಯ ಭೀಕರತೆ ಸ್ಪಷ್ಟವಾಗಿ ಕಾಣುತ್ತಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಘಟನೆಯ ಕುರಿತು ಇದುವರೆಗೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆದರೆ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಹಲ್ಲೆಗೊಳಗಾದ ಡೆಲಿವರಿ ಬಾಯ್ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.











