ಬೆಂಗಳೂರು : ದೇಶದಲ್ಲಿ ಸತತವಾಗಿ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿರುವ ಸಂಸದರ ಆಸ್ತಿಯಲ್ಲಿ ಏರಿಕೆಯಾಗಿದೆ. ಇದರಲ್ಲಿ ಬಿಜೆಪಿಯ ಸಂಸದರ ಆಸ್ತಿಯಲ್ಲಿ ಹೆಚ್ಚಳವಾಗಿದ್ದು ಗಮನಾರ್ಹ ಸಂಗತಿಯಾಗಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಟಿಸಿರುವ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದ್ದು, ರಾಜಕೀಯ ವಲಯದಲ್ಲಿ ವರದಿ ಸಂಚಲನ ಮೂಡಿಸಿದೆ. ಮುಖ್ಯವಾಗಿ ಗುಜರಾತ್‌ನ ಏಳು ಸಂಸದರು ಸತತ ಮೂರು ಬಾರಿ ಗೆಲುವು ಕಂಡಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಅವರ ಆಸ್ತಿಯಲ್ಲಿ ಬದಲಾವಣೆಯಾಗಿದ್ದು, ಹಲವರ ಆಸ್ತಿಯಲ್ಲಿ ಹೆಚ್ಚಳವಾಗಿದೆ ಎಂದು ವರದಿ ವಿಶ್ಲೇಷಿಸಿದೆ.

ಪ್ರಧಾನಿ ಹಾಗೂ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದ ಸಂಸದ ನರೇಂದ್ರ ಮೋದಿ ಅವರ ಆಸ್ತಿಯು 10 ವರ್ಷದಲ್ಲಿ 1.26 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಮೋದಿ ಆಸ್ತಿಯು 82 ರಷ್ಟು ಅಧಿಕವಾಗಿದೆ.
ಇನ್ನೂ ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರ ಆಸ್ತಿಯು 10 ವರ್ಷಗಳಲ್ಲಿ 10.99 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಇದನ್ನು ಶೇಕಡಾವಾರು ಲೆಕ್ಕಾಚಾರದಲ್ಲಿ ನೋಡಿದಾಗ 117ರಷ್ಟು ಜಿಗಿದಿದೆ.

ರಾಜ್ಯದ ಸಂಸದರ ಆಸ್ತಿಯಲ್ಲಿಯೂ ಜಿಗಿತ..
ಅಲ್ಲದೆ ರಾಜ್ಯದ ವಿಚಾರದಲ್ಲಿ ಗಮನಿಸಿದಾಗ ಆರು ಸಂಸದರ ಆಸ್ತಿಯಲ್ಲಿ ಹೆಚ್ಚಳ ಕಂಡಿದೆ. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೇ ಸೇರಿದಂತೆ ಹಲವರ ಆಸ್ತಿಯಲ್ಲಿ ಏರಿಕೆಯಾಗಿದೆ. ಇವರೆಲ್ಲ ಸತತವಾಗಿ ಮೂರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡವರೇ ಆಗಿದ್ದಾರೆ ಎನ್ನುವುದು ಇನ್ನೊಂದು ಗಮನಾರ್ಹ ಸಂಗತಿ. ವಿಜಯಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ರಮೇಶ್ ಜಿಗಜಿಣಗಿ ಅವರ ಆಸ್ತಿಯಲ್ಲಿ 42.68 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಆಸ್ತಿ 33.72 ಕೋಟಿ ರೂಪಾಯಿ ಏರಿಕೆಯಾಗಿದೆ.

ಇನ್ನೂ ಕೇಂದ್ರದ ಪ್ರಭಾವಿ ಸಚಿವ ಪ್ರಲ್ಹಾದ ಜೋಶಿ ಅವರ ಆಸ್ತಿಯಲ್ಲಿ 16.89 ಕೋಟಿ ರೂಪಾಯಿಗಳಷ್ಟು ಅಧಿಕವಾಗಿದೆ. ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ಆಸ್ತಿಯಲ್ಲಿ 14.82 ಕೋಟಿ ರೂಪಾಯಿಗಳು ಇನ್‌ಕ್ರೀಸ್ ಆಗಿದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ ಅವರ ಆಸ್ತಿ 6.67 ಮತ್ತು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ ಅವರ ಆಸ್ತಿ 3.94 ಕೋಟಿ ರೂಪಾಯಿಗಳಷ್ಟು ಹೆಚ್ಚಳವಾಗಿದೆ.
ಅಲ್ಲದೆ ಎಡಿಆರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಬಿಜೆಪಿ ಸಂಸದೆ ಪೂನಂಬೆನ್ ಮೇಡಂ ಅವರ ಘೋಷಿತ ಆಸ್ತಿ 2014 ರಲ್ಲಿ ಸುಮಾರು 17 ಕೋಟಿ ರೂಪಾಯಿಗಳಿಂದ 2024 ರಲ್ಲಿ 147 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕೇವಲ ಹತ್ತು ವರ್ಷಗಳಲ್ಲಿ ಸರಿಸುಮಾರು 130 ಕೋಟಿ ರೂಪಾಯಿ ಅಥವಾ ಶೇ. 747 ರಷ್ಟು ಅಧಿಕವಾಗಿದೆ.

ಎರಡನೇ ಸ್ಥಾನದಲ್ಲಿ ಕಛ್ ಬಿಜೆಪಿ ಸಂಸದ ವಿನೋದ್ ಲಖಂಶಿ ಚಾವ್ಡಾ ಅವರ ಹೆಸರಿದ್ದು, ಚಾವ್ಡಾ ಆಸ್ತಿ 2014 ರಲ್ಲಿ ಕೇವಲ 56 ಲಕ್ಷ ರೂಪಾಯಿ ಅಂತ ಘೋಷಿಸಿಕೊಂಡಿದ್ದರು. ಅದು 2024 ರ ವೇಳೆಗೆ 6.5 ಕೋಟಿ ರೂಪಾಯಿಗೆ ಅಧಿಕವಾಗಿ ಶೇ. 1,100 ಕ್ಕಿಂತಲೂ ಹೆಚ್ಚಳವಾಗಿದೆ.
ಹಿರಿಯ ಸಂಸದರಾಗಿರುವ ಖೇಡಾದ ದೇವುಸಿನ್ಹ್ ಚೌಹಾಣ್ ಹಾಗೂ ಜುನಾಗಢ್ ರಾಜೇಶ್ ನರನ್‌ಭಾಯಿ ಅವರುಗಳು ಶ್ರೀಮಂತರಾಗಿದ್ದಾರೆ. ಕಳೆದ ಒಂದು ದಶಕದಲ್ಲಿ ಪ್ರತಿಯೊಬ್ಬ ಸಂಸದರೂ ತಾವು ಘೋಷಿಸಿಕೊಂಡಿದ್ದ ಆಸ್ತಿಗಿಂತ 2 ಕೋಟಿಗಿಂತಲೂ ಅಧಿಕ ಎಂದು ಹೇಳಿಕೊಂಡಿದ್ದಾರೆ.

ಬಾರ್ಡೋಲಿಯ ಪರಿಶಿಷ್ಟ ಜಾತಿಯ ಮತ್ತೊಬ್ಬ ಬಿಜೆಪಿ ಸಂಸದ ಪರಭುಭಾಯಿ ನಾಗರ್‌ಭಾಯಿ ವಾಸವ ಅವರ ಆಸ್ತಿ ಸುಮಾರು 1.6 ಕೋಟಿ ರೂಪಾಯಿಗಳಿಂದ 4.7 ಕೋಟಿ ರೂಪಾಯಿಗಳಿಗೆ ಜಿಗಿದಿದೆ. ಇದು ಅವರ ಆಸ್ತಿಯಲ್ಲಿ ಸುಮಾರು ಶೇ. 195 ರಷ್ಟರ ಹೆಚ್ಚಳವನ್ನು ಸೂಚಿಸುತ್ತದೆ.
ಈ ಎಲ್ಲ ಸಂಸದರು ತಮ್ಮ ಆಸ್ತಿಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಗಮನ ಹರಿಸಿದ್ದರೆ, ಕೇಂದ್ರ ಸಚಿವ ಹಾಗೂ ನವಸಾರಿ ಸಂಸದರಾಗಿರುವ ಸಿ.ಆರ್. ಪಾಟೀಲ್ ತಾವು ಘೋಷಿಸಿಕೊಂಡಿದ್ದ ಆಸ್ತಿಯಲ್ಲಿ ಶೇ. 47ರಷ್ಟು ಕಳೆದುಕೊಂಡಿದ್ದಾರೆ. ಹ್ಯಾಟ್ರಿಕ್ ಗೆಲುವು ಕಂಡ ಸಂಸದರು ಅಚ್ಚರಿ ರೀತಿಯಲ್ಲಿ ಆಸ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ಸಿ.ಆರ್. ಪಾಟೀಲ್ ಮಾತ್ರ ಆಸ್ತಿಯಲ್ಲಿ ಕುಸಿತ ಕಂಡಿರುವುದನ್ನು ಎಡಿಆರ್ ವರದಿಯು ತಿಳಿಸಿದೆ.

ದೇಶದಲ್ಲಿ ಹಲವಾರು ಸಮಸ್ಯೆಗಳು ಇದ್ದರೂ ಅವುಗಳ ಪರಿಹಾರಕ್ಕೆ ಸಂಸದರು ಮುಂದಾಗದೆ, ತಮ್ಮ ಆಸ್ತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲಿಯೇ ಬ್ಯುಸಿ ಆಗಿದ್ದಾರಾ ಎನ್ನುವ ಪ್ರಶ್ನೆಯು ಮೂಡುತ್ತಿದೆ. ರಾಜ್ಯದ ವಿಚಾರದಲ್ಲಿಯೂ ಅಷ್ಟೇ ಪ್ರಮುಖ ನೀರಾವರಿ ಯೋಜನೆಗಳು ಜಾರಿಯಾಗಬೇಕಿದೆ. ರಾಜ್ಯದ ಹಿತಾಸಕ್ತಿಗಳ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಬದಲು ತಮ್ಮದೇ ಏಳಿಗೆಯಲ್ಲಿ ಇವರು ಮಗ್ನರಾಗಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.







