ಬೆಂಗಳೂರು: ಕರ್ನಾಟಕ ಸರ್ಕಾರ ಮಹತ್ವದ ಆಡಳಿತಾತ್ಮಕ ಆದೇಶ ಹೊರಡಿಸಿದ್ದು, ಹಿರಿಯ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್(IPS M. Chandrashekhar), ಐಪಿಎಸ್, ಎಡಿಜಿಪಿ (ಐಎಸ್ಡಿ) (Cyber Command Center) ಅವರನ್ನು ಕರ್ನಾಟಕ ಸೈಬರ್ ಕಮಾಂಡ್ನ ಹೆಚ್ಚುವರಿ ಪೊಲೀಸ್ ನಿರ್ದೇಶಕರು (ಸೆಕೆಂಡ್-ಇನ್-ಕಮಾಂಡ್) ಆಗಿ ಹೆಚ್ಚುವರಿ ಪ್ರಭಾರದಲ್ಲಿ ನೇಮಕ ಮಾಡಿದೆ.

ಪೊಲೀಸ್ ಮಹಾನಿರ್ದೇಶಕರು, ಸೈಬರ್ ಕಮಾಂಡ್, ಬೆಂಗಳೂರು ಅವರು ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಗಣಿಸಿದ ಸರ್ಕಾರ ಈ ಆದೇಶ ಹೊರಡಿಸಿದೆ.
Pranab Mohanty ಸೈಬರ್ ಕಮಾಂಡ್ ಸೆಂಟರ್ ಡಿಜಿಪಿ ಪ್ರಣಬ್ ಮೊಹಂತಿ
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು, ಡಿಜಿಟಲ್ ಬೆದರಿಕೆಗಳು ಹಾಗೂ ತಂತ್ರಜ್ಞಾನ ಆಧಾರಿತ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತಾಂತ್ರಿಕ ಪರಿಣತಿ ಹೊಂದಿದ ಹಿರಿಯ ಅಧಿಕಾರಿಯನ್ನು ಸೈಬರ್ ಕಮಾಂಡ್ನ ಎರಡನೇ ಹಂತದ ನಾಯಕತ್ವಕ್ಕೆ ನೇಮಿಸುವ ಅಗತ್ಯವಿತ್ತು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿತ್ತು.

ಎಂ. ಚಂದ್ರಶೇಖರ್ ಅವರು ಐಐಟಿ ಖರಗಪುರದ ಏರೋಸ್ಪೇಸ್ ಎಂಜಿನಿಯರಿಂಗ್ ಪದವೀಧರರು ಆಗಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ಅವರ ಅನುಭವ ಹಾಗೂ ತಾಂತ್ರಿಕ ಜ್ಞಾನವು ಸೈಬರ್ ಅಪರಾಧ ನಿಯಂತ್ರಣ ಹಾಗೂ ಡಿಜಿಟಲ್ ಸುರಕ್ಷತೆ ಬಲಪಡಿಸಲು ಸಹಕಾರಿಯಾಗಲಿದೆ ಎಂದು ಪೊಲೀಸ್ ಇಲಾಖೆ ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಅವರು ನಿರ್ವಹಿಸುತ್ತಿರುವ ಎಡಿಜಿಪಿ (ಐಎಸ್ಡಿ) ಕರ್ತವ್ಯಗಳ ಜೊತೆಗೆ, ಕರ್ನಾಟಕ ಸೈಬರ್ ಕಮಾಂಡ್ ಸೆಕೆಂಡ್-ಇನ್-ಕಮಾಂಡ್ ಆಗಿಯೂ ಹೆಚ್ಚುವರಿ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ. ರಾಜ್ಯದ ಸೈಬರ್ ಸುರಕ್ಷತೆ ದೃಷ್ಟಿಯಿಂದ ಈ ನೇಮಕವು ಮಹತ್ವದ ಹೆಜ್ಜೆಯಾಗಿದ್ದು, ಸೈಬರ್ ಅಪರಾಧಗಳ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಇನ್ನು ಈಗಾಗಲೇ ಖಡಕ್ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ಅವರ ನೇತೃತ್ವದಲ್ಲಿ ಕರ್ನಾಟಕ ಸೈಬರ್ ಕಮಾಂಡ್ ಬಲಿಷ್ಠವಾಗಿದೆ. ಇದೀಗ ಹಿರಿಯ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಕೂಡ ಸೆಕೆಂಡ್-ಇನ್-ಕಮಾಂಡ್ ಆಗಿ ನೇಮಕಗೊಂಡಿದ್ದು, ಕರ್ನಾಟಕದಲ್ಲಿ ಸೈಬರ್ ವಂಚನೆಗೆ ಸಂಪೂರ್ಣ ಬ್ರೇಕ್ ಬೀಳುವ ಭರವಸೆ ಹೆಚ್ಚಾಗಿದೆ.







