ಬೆಂಗಳೂರು: ರಾಜ್ಯದಲ್ಲಿನ ಕುರ್ಚಿ ಸರ್ಕಸ್ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ದೆಹಲಿ(Delhi) ಪ್ರಯಾಣ ಬೆಳೆಸುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ನಾಯಕತ್ವ ಬದಲಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್(DCM DK Shivakumar) ಅವರ ಬೇಸರದ ಮಾತುಗಳ ಬಳಿಕ ಸಿಎಂ ದೆಹಲಿ ಭೇಟಿ ಹಲವು ರಾಜಕೀಯ ಸಮೀಕರಣಗಳಿಗೆ ಕಾರಣವಾಗಿದೆ.

ಕಳೆದೆರಡು ದಿನಗಳ ಹಿಂದಷ್ಟೇ ದೆಹಲಿಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್ ಹೈಕಮಾಂಡ್ ಭೇಟಿಗೆ ಯತ್ನಿಸಿದರೂ, ಅದು ಸಾಧ್ಯವಾಗಲಿಲ್ಲ. ಹೀಗಾಗಿಯೇ ಪಕ್ಷದ ನಾಯಕತ್ವದ ಬದಲು ಕಾರ್ಯಕರ್ತನಾಗಿರುವುದೇ ಒಳ್ಳೆಯದು ಎಂಬ ಮನಸ್ಥಿತಿಗೆ ಡಿಸಿಎಂ ಬಂದಿದ್ದಾರೆ. ನಾನು ಜೀವನ ಪೂರ್ತಿ ಕಾಂಗ್ರೆಸ್ ಕಾರ್ಯಕರ್ತ. ನಾನು ಪಕ್ಷದ ಕೆಲಸಗಾರ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಕೆಲಸವನ್ನೂ ಮಾಡಿದ್ದೇನೆ. ಕಾರ್ಯಕರ್ತನಾಗಿ, ಪಕ್ಷದ ಅಧ್ಯಕ್ಷನಾಗಿ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ. ಸಮಯ ಬಂದಾಗ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.

ನನಗೆ ಆಹ್ವಾನವಿಲ್ಲ ಎಂದಿದ್ದ ಸಿಎಂ
ಇನ್ನು ಮುಖ್ಯವಾಗಿ ಈ ಹಿಂದೆ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿಗೆ ಹೋಗುವುದಿಲ್ಲ. ನನಗೆ ಅದರ ಆಹ್ವಾನ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇಂದು ಸಂಜೆ ಬೆಂಗಳೂರಿನಿಂದ ದೆಹಲಿಗೆ ತೆರಳಲಿದ್ದಾರೆ. ಈ ಸಭೆಗೆ ಸಿದ್ದರಾಮಯ್ಯ ಸೇರಿದಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಸೇರಿ ಮೂವರು ಕಾಂಗ್ರೆಸ್ ಸಿಎಂಗಳಿಗೆ ಆಹ್ವಾನ ಬಂದಿದೆ.

ದಿಲ್ಲಿಯಿಂದ ಯಾವ ಸಂದೇಶ ಹೊತ್ತು ಬರ್ತಾರೆ ಸಿದ್ದರಾಮಯ್ಯ..?
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡ ನಂತರ ಹೈಕಮಾಂಡ್ ಮೇಜರ್ ಸರ್ಜರಿ ಮಾಡುವ ಚರ್ಚೆಗಳು ನಡೆಯುತ್ತಿದ್ದವು. ಆದರೆ ಅದಕ್ಕೂ ಮುನ್ನವೇ ಬಿಹಾರದ ಚುನಾವಣಾ ಫಲಿತಾಂಶ ಕೈ ನಾಯಕರ ಲೆಕ್ಕಚಾರ ತಲೆಕೆಳಗಾಗುವಂತೆ ಮಾಡಿತ್ತು. ಹೀಗಾಗಿ ಕಾಂಗ್ರೆಸ್ ದಿಲ್ಲಿ ನಾಯಕರು ಆ ಸಾಹಸಕ್ಕೆ ಕೈ ಹಾಕಲಿಲ್ಲ. ಅದಾದ ಬಳಿಕ ಬ್ರೇಕ್ ಫಾಸ್ಟ್ ಮೀಟಿಂಗ್‌ಗಳ ಮೂಲಕ ಇಬ್ಬರು ನಾಯಕರ ನಡುವಿನ ವೈಮನಸ್ಸು ತಣಿಸುವ ಪ್ರಯತ್ನವನ್ನು ಹೈಕಮಾಂಡ್ ಮಾಡಿತ್ತು. ಅದು ಕೇವಲ ಅಷ್ಟಕ್ಕಷ್ಟೇ ಎನ್ನುವಂತಾಗಿ ಬೆಳಗಾವಿ ಅಧಿವೇಶನದ ಸಮಯದಲ್ಲಿ ಡಿಕೆಶಿ ಬಣದ ಶಾಸಕರು ಮತ್ತೆ ನಾಯಕತ್ವದ ಬಗ್ಗೆ ಡಿಸಿಎಂ ಪರವಾಗಿ ಹೇಳಿಕೆ ನೀಡಿದ್ದರು. ಆದರೆ ಈ ಎಲ್ಲ ಬೆಳವಣಿಗೆಗಳ ಬಳಿಕ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚಿಸುವ ಸಾಧ್ಯತೆಗಳಿವೆ. ಅಂತಿಮವಾಗಿ ವಾಪಸ್ ಬರುವಾಗ ಸಿದ್ದರಾಮಯ್ಯ ಹೈಕಮಾಂಡ್ ನಾಯಕರಿಂದ ಯಾವ ಸಂದೇಶ ಹೊತ್ತು ಬರಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.













