ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಕಮೆಂಟ್ ಹಾಕುವ ವಿಕೃತ ಮನಸ್ಸಿನ ನೆಟ್ಟಿಗರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ(Vijayalakshmi Darshan) ದೂರು ದಾಖಲಿಸುವ ಮೂಲಕ ಸರಿಯಾದ ಪಾಠ ಕಲಿಸಿದ್ದಾರೆ.

ಫ್ಯಾನ್ಸ್ ವಾರ್ ಹೆಸರಿನಲ್ಲಿ ವಿಜಯಲಕ್ಷ್ಮಿ ಅವರ ಫೋಟೋಗಳಿಗೆ ಕೆಟ್ಟದಾಗಿ ಕಮೆಂಟ್ ಹಾಕುತ್ತಿದ್ದ 15 ಇನ್ಸ್ಟಾಗ್ರಾಮ್ ಐಡಿ ಮತ್ತು 150ಕ್ಕೂ ಹೆಚ್ಚು ಕೆಟ್ಟ ಕಮೆಂಟ್ ವಿರುದ್ಧ ದರ್ಶನ್ ಪತ್ನಿ ಫೋಟೋ ಸಮೇತ ದೂರು ನೀಡಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಅಪರಾಧ ವಿಭಾಗ ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ ಕೆಟ್ಟ ಕಮೆಂಟ್ ಹಾಕಿದ ಕಿಡಿಗೇಡಿಗಳಿಗೆ ನಡುಕ ಶುರುವಾಗಿದೆ. ಹೀಗಾಗಿ ಅಶ್ಲೀಲ ಸಂದೇಶ ಕಳುಹಿಸಿದ ಹಾಗೂ ಕೆಟ್ಟ ಕಮೆಂಟ್ ಹಾಕಿದ ಬಹುತೇಕ ಅಕೌಂಟ್‌ಗಳು ಬ್ಲಾಕ್ ಆಗಿದ್ದು, ಅಕೌಂಟ್‌ಗಳು ಡಿಲೀಟ್ ಆಗಿವೆ. ಇನ್ನೂ ಕೆಲ ಇನ್ಸ್ಟಾಗ್ರಾಮ್ ಐಡಿ ಅಡ್ಮಿನ್‌ಗಳು ವಿಡಿಯೋ ಮೂಲಕ ಕ್ಷಮೆಯಾಗಿಸಿದ್ದಾರೆ.

ಇನ್ನು ವಿಜಯಲಕ್ಷ್ಮಿ ದೂರು ದಾಖಲಿಸಿದ ಗಂಟೆಯೊಳಗೆ ಅಕೌಂಟ್‌ಗಳು ಡಿಲೀಟ್ ಆಗಿದ್ದರೂ ಕೂಡ ದೂರು ದಾಖಲಾಗಿರುವ ಇನ್ಸ್ಟಾಗ್ರಾಮ್ ಐಡಿ ಐಪಿ ಅಡ್ರೆಸ್, ಖಾತೆದಾರರ ಮಾಹಿತಿ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಸಿನಿಮಾ ನಟರ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮನಬಂದಂತೆ ಕಮೆಂಟ್ ಹಾಕುತ್ತ ವಿಕೃತಿ ಮರೆಯುತ್ತಿದ್ದ ಕೆಲ ನೆಟ್ಟಿಗರಿಗೆ ಬಿಸಿ ಮುಟ್ಟಿಸಿದಂತಾಗಿದೆ.












