
ಸಮಾಜದಲ್ಲಿ ಬದಲಾವಣೆ ಬೇಕಾದರೆ ಮೊದಲು ಸರಿಯಾದ ಜನಪ್ರತಿನಧಿಯನ್ನು ಆಯ್ಕೆ ಮಾಡಬೇಕು. ಈ ಆಯ್ಕೆ ಮಾಡುವುದು ಸವಾಲಿನ ಕೆಲಸ. ಇದು ಜವಾಬ್ದಾರಿಯುತವಾದ ಕೆಲಸ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಹೇಳಿದರು. ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಸಂಜೀವಿನಿ ಜೀವ ರಕ್ಷಕ್ ಟ್ರಸ್ಟ್ ವತಿಯಿಂದ ನೀಡಲಾದ ೨೦೨೫ ನೇ ಸಾಲಿನ ಜೀವ ರಕ್ಷಕ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಈ ದೇಶ ಜನರದ್ದು, ಯಾವುದೇ ಪಕ್ಷಕ್ಕೆ ಸೇರಿಲ್ಲ. ದೇಶದ ಭವಿಷ್ಯ ಯುವಜನರ ಹೆಗಲ ಮೇಲಿದೆ. ಆದ್ದರಿಂದ ನಾವು ಉತ್ತಮ ವಿಚಾರಗಳ ಬಗ್ಗೆ ಮಾತನಾಡಬೇಕು, ಕಾರ್ಯಕ್ರಮಗಳ ಬಗ್ಗೆ ಮಾತನಾಡಬೇಕು. ದೇವರು ಹಾಗೂ ಜಾತಿಗಳ ಬಗ್ಗೆ ಮಾತನಾಡುವುದು ಬಿಡಬೇಕು. ಈ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕು. ಬೇರೆ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಯುವಜನರು ಕಳೆದು ಹೋಗಬಾರದು ಎಂದು ಹೇಳಿದರು.

ರಾಜಕೀಯವನ್ನು ಹತ್ತಿರದಿಂದ ವಿಮರ್ಶೆ ಮಾಡಿದರೆ ಹಾಗೂ ತಿಳಿದರೆ ಸಮಾಜ ಬದಲಾಗಲಿದೆ. ರಾಜಕಾರಣಿ ಭ್ರಷ್ಟಾಚಾರ ಮುಕ್ತನಾಗಿರಬೇಕು ಎಂದು ನಾವು ಬಯಸುತ್ತೇವೆ. ಇದೇ ವೇಳೆ ಅವರಿಗೆ ಮತ ನೀಡುವವರೂ ಭ್ರಷ್ಟರಾಗಿರಬಾರದು ಎಂದರು. ಪ್ರೀತಿ ವಿಶ್ವಾಸಕ್ಕೆ ಬಂದು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಸ್ವಾಮೀಜಿಗಳ ಸನ್ನಿಧಾನದಲ್ಲಿ ಪ್ರಶಸ್ತಿ ಸಿಕ್ಕದ್ದು ಖುಷಿಯಾಗಿದೆ ಎಂದ ಸಚಿವರು ತಾವು ಈ ಹಿಂದೆ ಕೇದಾರಾನಾಥದಲ್ಲಿ ಮೇಘಸ್ಫೋಟ ಸಂಭವಿಸಿದಾಗ ಹೋಗಿ ಕನ್ನಡಿಗರ ರಕ್ಷಣಾ ಕಾರ್ಯಾಚರಣೆ ಮಾಡಿದ್ದನ್ನು ಸ್ಮರಿಸಿಕೊಂಡರು.
ಸಿರಿಗೆರೆ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಸಂತೋಷ್ ಲಾಡ್ ಅವರು ತಮ್ಮ ಸಾಧನೆಯನ್ನು ಮಾತಾಗಿ ಪರಿವರ್ತನೆ ಮಾಡಿದವರು. ಸದಾ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡವರು. ಆದರೂ ಅವರಲ್ಲಿ ಅಹಂಕಾರ ಇಲ್ಲ ಎಂದರು.

ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಮಾತನಾಡಿ, ಪುಲ್ವಾಮಾ ದಾಳಿ ಆದಾಗ ಸರ್ಕಾರದ ಹಣಕ್ಕೆ ಕಾಯದೆ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಜನರನ್ನು ಸಂತೋಷ್ ಲಾಡ್ ಅವರು ಜನರನ್ನು ತಾಯಿನಾಡಿಗೆ ಕರೆ ತಂದರು. ಲಾಡ್ ಅವರು ಸಮಾಜಸೇವೆಯ ವಿಭಿನ್ನ ಆಯಾಮದಲ್ಲಿ ತೊಡಗಿಸಿಕೊಂಡಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳನ್ನು ರೂಢಿಸಿಕೊಂಡಿದ್ದಾರೆ. ಅವರು ಭ್ರಷ್ಟಾಚಾರ ರಹಿತ ರಾಜಕಾರಣಿ ಎಂದರು.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಮಾತನಾಡಿ, ಸಂತೋಷ್ ಲಾಡ್ ಅವರು ಈ ಜೀವರಕ್ಷಕ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ದುರಂತ ನಡೆದರೆ ಸಿದ್ದರಾಮಯ್ಯ ಅವರಿಗೆ ಮೊದಲಿಗೆ ನೆನಪಾಗುವ ಹೆಸರು ಸಂತೋಷ್ ಲಾಡ್ ಅವರು. ಕಾರ್ಮಿಕ ಇಲಾಖೆ ಬಗ್ಗೆ ವಿಶೇಷ ಗೌರವ ಮತ್ತು ಕಾಳಜಿ ಇಟ್ಟುಕೊಂಡಿದ್ದಾರೆ. ಲಾಡ್ ಅವರು ಕಾರ್ಮಿಕ ಸಚಿವರಾದ ನಂತರ ರಾಜ್ಯದಲ್ಲಿ ಕಾರ್ಮಿಕ ಇಲಾಖೆ ಇದೆ ಎಂದು ತಿಳಿಯುವಂತಾಗಿದೆ ಎಂದು ಸಚಿವ ಲಾಡ್ ಅವರ ಕಾರ್ಯವೈಖರಿಯನ್ನು ಬಣ್ಣಿಸಿದರು.

ರಾಜ್ಯದ ಮೂರು ಕೋಟಿ ಕಾರ್ಮಿಕರ ಜೀವ ರಕ್ಷಕರಾಗಿ ಸಂತೋಷ್ ಲಾಡ್ ಅವರು ಕೆಲಸ ಮಾಡುತ್ತಾ ಇದ್ದಾರೆ. ಸಚಿವರಾದ ನಂತರ ಋತುಚಕ್ರ ರಜೆ, ಗಿಗ್ ಹಾಗೂ ಪತ್ರಿಕಾ ವಿತರಕರಿಗೆ ಜೀವವಿಮೆ ಕಾಯಿದೆ ಜಾರಿ ಮಾಡಿದರು. ದುಡ್ಡು ಮಾಡಲು ಲಾಡ್ ಅವರು ರಾಜಕೀಯಕ್ಕೆ ಬಂದಿಲ್ಲ. ರಾಜಕೀಯವನ್ನು ಸೇವಾಕ್ಷೇತ್ರ ಎಂದು ಪರಿಗಣಿಸಿದವರು ಎಂದರು.

ಸಮಾರಂಭದಲ್ಲಿ ಸಂಜೀವಿನ ಜೀವ ರಕ್ಷಕ್ ಟ್ರಸ್ಟ್ ಸಂಸ್ಥಾಪಕರಾದ ರಂಗಸ್ವಾಮಿ ಡಿ, ಸಂಜೀವಿನ ಜೀವ ರಕ್ಷಕ್ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಸೌಮ್ಯಾ ಮಂಜುನಾಥ ಸ್ವಾಮಿ, ಮಂಜುನಾಥ ಬಿ, ಭರತ್ ಎಂ.ಮುಬಾರಕ್ ಅಲಿ ಹಾಗೂ ಅಪಾರ ಸಂಖ್ಯೆಯ ಚಿತ್ರದುರ್ಗದ ನಾಗರಿಕರು ಉಪಸ್ಥಿತರಿದ್ದರು.


