ಹಾಸನ: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದು ನನಗೆ ಬೇಕಾಗಿಲ್ಲ. ರಾಜ್ಯದ ಜನ ಅವರಿಗೆ 140 ಸೀಟು ನೀಡಿದ್ದಾರೆ. ಇಂತಹ ಬಹುಮತದ ಸರ್ಕಾರ ಇಟ್ಟುಕೊಂಡು ಜನರ ಕೆಲಸ ಮಾಡುವುದು ಬಿಟ್ಟು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ರಾಜ್ಯದ ಜನರ ಗಮನ ಬೇರೆಡೆಗೆ ಹೊರಳಿಸಲು ಈ ಸ್ಟಂಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಉತ್ತರ ಕರ್ನಾಟಕದ ನೆರೆ ಹಾವಳಿ ವೈಫಲ್ಯತೆ ಬಗ್ಗೆ ಪತ್ರಿಕೆಯಲ್ಲಿ ಎರಡು ಪುಟ ಬರೆದಿದ್ದಾರೆ. ಬೆಂಗಳೂರು ವಿಷಯದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಈ ಸರ್ಕಾರದ ಕಾರ್ಮಿಕ ಸಚಿವರೇ ಹೇಳಿದ್ದಾರೆ. ಉತ್ತರದ ರೈತರು ಬೆಳೆದ ಮುಂಗಾರು ಬೆಳೆ ಸರ್ವನಾಶ ಆಗಿದೆ. ನೆರೆ ಬಂದಾಗ ಒಬ್ಬ ಸಚಿವರು ಭೇಟಿ ನೀಡಿ ಜನರ ಕಷ್ಟ ವಿಚಾರಿಸಲಿಲ್ಲ. ಜೆಡಿಎಸ್ ನಿಂದ ನಾವು ನೈತಿಕವಾಗಿ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ.

ತೊಗರಿ ಬೆಳೆಗಾರರು ಬೀದಿಗೆ ಬಂದಿದ್ದಾರೆ. ಮೆಕ್ಕೆಜೋಳ ಬೆಳೆಗಾರರು ಕೂಡ ಕಷ್ಟದಲ್ಲಿದ್ದಾರೆ. ಹಾಸನದಲ್ಲಿ ಜೋಳ ಖರೀದಿ ಮಾಡುವಂತೆ ಒತ್ತಾಯಿಸಿ ಹತ್ತು ಹದಿನೈದು ದಿನ ರಸ್ತೆಯಲ್ಲಿ ಧರಣಿ ಮಾಡಿದರು. ಕೇಂದ್ರ ಸರ್ಕಾರ ಎಂಎಸ್ಪಿ ದರ ನಿಗದಿ ಮಾಡಿದೆ. ಆದರೆ, ರಾಜ್ಯ ಸರ್ಕಾರ ತಾನು ನಿಗದಿ ಮಾಡಿದ ದರದಲ್ಲಿ ಮೊದಲು ಖರೀದಿ ಮಾಡಬೇಕು. ಅದನ್ನು ಮಾಡಿಲ್ಲ ಎಂದು ಸಚಿವ ಕುಮಾರಸ್ವಾಮಿ ಹರಿಹಾಯ್ದರು.

ರಾಜ್ಯದಲ್ಲಿ ರೈತರ ಪರಿಸ್ಥಿತಿ ದಾರುಣವಾಗಿದೆ. ರಾಜ್ಯದಲ್ಲಿ ಈ ಸರ್ಕಾರ ಬಂದಮೇಲೆ 2800ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮೂಲಭೂತ ಸೌಕರ್ಯಕ್ಕೆ ₹300 ಕೋಟಿ ಕೊಡುತ್ತೇವೆ ಎನ್ನುತ್ತಾರೆ. ಇಷ್ಟು ಹಣ ಸಾಕಾ? ಪ್ರವಾಹದಿಂದ ಆಗಿರುವ ಆಗಿರುವ ಹಾನಿಯ ಬಗ್ಗೆ ಇವರು ಹೇಳಿದ್ದು ಎಷ್ಟು? ಅದಕ್ಕೆ ರಾಜ್ಯ ಸರ್ಕಾರ ಕೊಡುತ್ತೇವೆ ಎಂದಿದ್ದು ಎಷ್ಟು? ವೇದಿಕೆ ಮೇಲೆ ಪೊಳ್ಳು ಹೇಳಿಕೆ ಕೊಟ್ಟುಕೊಂಡು ಎಷ್ಟು ದಿನ ಕೊಡ್ತೀರಿ ಎಂದು ಟೀಕಿಸಿದರು.

ಇನ್ನು ಕೆ.ಎನ್ ರಾಜಣ್ಣ ಅವರು ಸಹಕಾರ ಸಚಿವರಾಗಿದ್ದಾಗ ಇದ್ದಾಗ ರೈತರಿಗೆ 24 ಸಾವಿರ ಕೋಟಿ ಸಾಲ ಕೊಡ್ತೇವೆ ಎಂದು ಹೇಳಿದ್ದರು. ಈಗ 12 ಸಾವಿರ ಕೋಟಿ ಕೊಟ್ಟಿದ್ದೇವೆ ಎನ್ನುತ್ತಾರೆ. ಆ ಹಣವನ್ನು ಕೂಡ ರೈತರಿಗೆ ನೀಡಿಲ್ಲ. ಅದೆಲ್ಲಾ ಒಳ ವ್ಯವಹಾರ ಎಂಬುದು ಗೊತ್ತಿದೆ. ನಾನು ಮುಖ್ಯಮಂತ್ರಿ ಆಗಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಅದರಿಂದಾಗಿ 12 ಬ್ಯಾಂಕ್ಗಳು ಉಳಿದುಕೊಂಡವು. ಈ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.



