ಉಡುಪಿ: ದೇಶದ ನೌಕಾಪಡೆಯ(Indian Navy)ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ(Pakistan) ರವಾನಿಸುತ್ತಿರುವ ಗಂಭೀರ ಆರೋಪದ ಮೇಲೆ ಉಡುಪಿಯಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಈಗಾಗಲೇ ಈ ಪ್ರಕರಣದಲ್ಲಿ ಮೊದಲು ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎನ್ನುವ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಗುಜರಾತ್ ಮೂಲದ ಹಿರೇಂದ್ರ ಎನ್ನುವಾತನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಮತ್ತು ಸಂತ್ರಿ ಮೇಲೆ ಅನುಮಾನಗೊಂಡ ಶಿಪ್ ಯಾರ್ಡ್ ಅಧಿಕಾರಿಗಳು ಕೂಡಲೇ ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸುಮಾರು ಒಂದೂವರೆ ವರ್ಷಗಳಿಂದ ಹಡಗುಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ವಾಟ್ಸಾಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರ ಎನ್ನಲಾಗಿದೆ.

ಇನ್ನು ಮೊದಲು ಬಂಧಿಸಿದ ಆರೋಪಿಗಳು ವಿಚಾರಣೆಯಲ್ಲಿ ಗುಜರಾತ್ ಮೂಲದ ಹಿರೇಂದ್ರನ ಹೆಸರು ಬಾಯ್ಬಿಟ್ಟಿದ್ದು, ಹಿರೇಂದ್ರ ಹಣ ಪಡೆದು ರೋಹಿತ್ ಹಾಗೂ ಸಂತ್ರಿಗೆ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಒದಗಿಸಿ ಅವರಿಗೆ ನೆರವು ನೀಡುತ್ತಿದ್ದ ಎನ್ನಲಾಗಿದೆ. ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಲ್ಪೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.



