ಅಹಮದಾಬಾದ್: ಮಹಿಳೆಯೊಬ್ಬರಿಗೆ ಟ್ರಾಫಿಕ್ ಪೊಲೀಸ್(Traffic Police) ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ ಘಟನೆ ಅಹಮದಾಬಾದ್‌ನ(Ahmedabad) ಪಾಲ್ಡಿ ಪ್ರದೇಶದಲ್ಲಿ ನಡೆದಿದ್ದು, ಪೊಲೀಸರ ದುರ್ವರ್ತನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಪಾಲ್ಡಿಯಲ್ಲಿ ಡಿಸೆಂಬರ್ 19ರಂದು ಟ್ರಾಫಿಕ್ ತಪಾಸಣೆಯ ವೇಳೆ ಬೈಕ್‌ನಲ್ಲಿ ಬಂದ ಮಹಿಳೆಯನ್ನು ಪೊಲೀಸ್ ಸಿಬ್ಬಂದಿ, ತಡೆದು ನಿಲ್ಲಿಸಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಮೇಲೆ ಅನುಮಾನಗೊಂಡ ಮಹಿಳೆ ಏಕಾಏಕಿ ಐಡಿ ಕಾರ್ಡ್ ಕೊಡುವಂತೆ ಪೊಲೀಸರ ಬಳಿ ಕೇಳಿದ್ದಾಳೆ. ಈ ಪೊಲೀಸ್ ಐಡಿ ಕಾರ್ಡ್ ತೋರಿಸುವ ವೇಳೆ ಅದು ಕೆಳಕ್ಕೆ ಬಿದ್ದಿದೆ. ಅಷ್ಟಕ್ಕೆ ಕೋಪಗೊಂಡ ಪೊಲೀಸ್ ಸಾರ್ವಜನಿಕವಾಗಿ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಘಟನೆಯ ನಂತರ ಮಹಿಳೆ 112ಕ್ಕೆ ಕರೆ ಮಾಡಿ ದೂರು ನೀಡಿದ್ದು, ಬಳಿಕ ಪಾಲ್ಡಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಪ್ರಯತ್ನಿಸಿದಾಗ ಅಲ್ಲಿಯೂ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಕಣ್ಣಿಗೆ ಹಾಗೂ ಮುಖಕ್ಕೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸ್ ಸಿಬ್ಬದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಹಮದಾಬಾದ್ ಪೊಲೀಸ್ ಇಲಾಖೆ ತಿಳಿಸಿದೆ. ಇನ್ನೊಂದೆಡೆ, ಮಹಿಳೆಯ ಮೇಲೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಎರಡೂ ಕಡೆಯಿಂದ ದೂರುಗಳ ಪರಿಶೀಲನೆ ನಡೆಯುತ್ತಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿದೆ. ಇನ್ನು ಪೊಲೀಸ್ ಮಹಿಳೆಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.



