ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಸುಗ್ಗಿಯಾಗಿದ್ದು, ಒಂದಾದ ಮೇಲೊಂದು ಸೂಪರ್ ಹಿಟ್ ಸಿನಿಮಾಗಳೇ ತೆರೆ ಕಂಡಿದೆ. ಈ ವರ್ಷಾಂತ್ಯಕ್ಕೆ ಮತ್ತಷ್ಟು ಭರ್ಜರಿ ಸಿನಿಮಾ ತೆರೆಕಾಣಲಿದ್ದು, ಈ ಪೈಕಿ ಕಿಚ್ಚ ಸುದೀಪ್ ಅಭಿನಯದ ಮಾರ್ಕ್(Mark) ಸಿನಿಮಾ ಕೂಡ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ನಿನ್ನೆ ಪ್ರೀ-ರಿಲೀಸ್ ಇವೆಂಟ್ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್(kiccha Sudeep) ನೀಡಿರುವ ಹೇಳಿಕೆಯೊಂದು ಚರ್ಚೆಗೆ ಗ್ರಾಸವಾಗಿದೆ.

ಮಾರ್ಕ್ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ಡಿಸೆಂಬರ್ 25ನೇ ತಾರೀಕು ಥಿಯೇಟರ್ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತದೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಾ ಇದೆ. ಈ ವೇದಿಕೆ ಮೇಲಿಂದ ಹೇಳುತ್ತಿದ್ದೇನೆ ನಾವು ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ ಎಂದಿದ್ದಾರೆ.

ಅಲ್ಲದೇ ಕೆಲವೊಮ್ಮೆ ನಾವು ಸೈಲೆಂಟ್ ಆಗಿ ಇರುವುದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮಗೋಸ್ಕರ, ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಒಂದೇ ಕಾರಣಕ್ಕೋಸ್ಕರ, ನಾವೆಲ್ಲರೂ ಒಳ್ಳೆಯ ಹೆಸರಲ್ಲಿ ಇರಬೇಕು ಎಂಬ ಕಾರಣಕ್ಕೋಸ್ಕರ ನಾನು ಬಾಯಿ ಮುಚ್ಚಿಕೊಂಡು ಇದ್ದೆ ಹೊರತು ಬಾಯಿ ಇಲ್ಲ ಅಂತಲ್ಲ. ನನ್ನಿಂದ, ನನ್ನ ಸಹನೆನಿಂದ ಬಹಳಷ್ಟು ಕಲ್ಲಿನ ತೂರಾಟ ನಿಮ್ಮ ಮೇಲೆ ಬೀಳುತ್ತಲೇ ಇರುತ್ತದೆ. ಅದನ್ನು ನೀವು ತಡೆದುಕೊಂಡು ಬರುತ್ತಲೇ ಇದ್ದೀರಿ. ಈಗ ಹೇಳ್ತೀದ್ದೇನೆ, ತಡೆಯೋ ತನಕ ತಡೆಯಿರಿ. ಮಾತಾಡೋ ಸಮಯದಲ್ಲಿ ಮಾತನಾಡಿ ಎಂದು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ನಟ ಕಿಚ್ಚ ಸುದೀಪ್ ಈ ಹೇಳಿಕೆಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಸುದೀಪ್ ಪರೋಕ್ಷವಾಗಿ ಬೇರೆ ನಟರ ಅಭಿಮಾನಿಗಳ ವಿರುದ್ಧ ಯುದ್ಧ ಮಾಡುವಂತೆ ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಫ್ಯಾನ್ಸ್ ವಾರ ಕಿಚ್ಚನ್ನು ಸುದೀಪ್ ಹೆಚ್ಚಿಸಿದ್ದಾರೆ ಎನ್ನುವ ಮಾತುಗಳು ಕೂಡ ಜೋರಾಗಿಯೇ ಕೇಳಿ ಬರುತ್ತಿದ್ದು, ಕನ್ನಡ ಚಿತ್ರರಂಗದ ಒಗ್ಗಟ್ಟನ್ನು ಕಾಪಾಡಬೇಕಾದ ಕೆಲ ಸ್ಟಾರ್ ನಟರೇ ಈ ರೀತಿ ತಮ್ಮ ಫ್ಯಾನ್ಸ್‌ಗಳಿಗೆ ಕರೆ ಕೊಡುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.




