ಬೆಂಗಳೂರು: ನಮ್ಮ ಹೈಕಮಾಂಡ್(High Command) ನಾಯಕರು ಸಿಎಂ ಮತ್ತು ನನಗೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ ಸಮಯದಲ್ಲಿ ಕರೆಸುತ್ತೇವೆ ಎಂದೂ ಇಬ್ಬರಿಗೂ ಹೇಳಿದ್ದಾರೆ. ಆಗ ಇಬ್ಬರೂ ದಿಲ್ಲಿಗೆ ಹೋಗುತ್ತೇವೆ. ನಾನು ಕದ್ದುಮುಚ್ಚಿ ಹೋಗುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್(DCM DK Shivakumar) ಅವರು ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಹಾಕಿದ್ದ ಚಾರ್ಜ್ ಶೀಟ್ ಕೋರ್ಟ್‌ನಲ್ಲಿ ತಿರಸ್ಕೃತಗೊಂಡಿದ್ದು, ಈಗ ಒಂದು ಎಫ್ಐಆರ್ ಬಾಕಿ ಉಳಿದುಕೊಂಡಿದೆ. ನಮ್ಮ ಮೇಲೆ ಯಾವ ರೀತಿ ದಬ್ಬಾಳಿಕೆ ನಡೆಯುತ್ತಿದೆ ಎಂದು ತಿಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಚಾರಣೆಗೆ ಹಾಜರಾಗುವ ಬಗ್ಗೆ ಮಾತನಾಡಿದ ಅವರು, ʼನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ಆಗ ದೆಹಲಿ ಪೊಲೀಸರನ್ನು ಭೇಟಿ ಮಾಡುವೆ. ಅಂದು ಕೇಂದ್ರ ಜಲಶಕ್ತಿ ಸಚಿವರು ನದಿ ಜೋಡಣೆ ವಿಚಾರವಾಗಿ ಸಭೆ ಕರೆದಿದ್ದಾರೆ. ಅಂದು ನಮ್ಮ ರಾಜ್ಯದ ಪ್ರಮುಖ ಯೋಜನೆಗಳಾದ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಚರ್ಚೆ ಮಾಡುವೆ. ಇದೇ ವೇಳೆ ಕೇಂದ್ರ ಅರಣ್ಯ ಸಚಿವರು, ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿರುವೆ. ರಾಜ್ಯದ ಹಿತಾಸಕ್ತಿ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಲು ತೀರ್ಮಾನಿಸಿರುವೆ. ರಾಜ್ಯದ ಸಂಸದರ ಜೊತೆಗೆ ಭೇಟಿಯಾಗುವ ಆಲೋಚನೆ ಇತ್ತು. ಇವೆಲ್ಲಾ ಆದ ನಂತರ ಅವರು ಬಂದರೆ ಪ್ರಧಾನಮಂತ್ರಿಗಳನ್ನೂ ಭೇಟಿ ಮಾಡುವೆʼ ಎಂದು ಹೇಳಿದರು.

ನಾಗಸಾಧುಗಳು ಆಶೀರ್ವಾದ ಪಡೆದ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ʼಅವರು ಮನೆಗೆ ಹುಡುಕಿಕೊಂಡು ಬಂದು ಆಶೀರ್ವಾದ ಮಾಡಿದ್ದಾರೆ. ಮನೆಗೆ ಬಂದವರನ್ನು ಬೇಡ ಎನ್ನಲು ಆಗುವುದಿಲ್ಲ. ರಾಜಕೀಯದಲ್ಲಿರುವ ಕಾರಣ ನಮಗೆ ಸಾಧು ಸಂತರು, ಸ್ವಾಮೀಜಿಗಳು, ಹಿರಿಯರು ಸೇರಿದಂತೆ ಎಲ್ಲಾ ರೀತಿಯ ಜನರೂ ನಮಗೆ ಬೇಕು. ನಮ್ಮ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ನಡೆಸುತ್ತಿದೆ. ವಕ್ಫ್, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಸಹಾಯ ಮಾಡಲಾಗುತ್ತಿದೆʼ ಎಂದರು.



