ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ(State Police Department) ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್‌ನಿಂದ(Constable) ಎಎಸ್‌ಐ(ASI) ದರ್ಜೆವರೆಗಿನ ಸಿಬ್ಬಂದಿಗಳ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕಡ್ಡಾಯ ರಜೆ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿರುವುದೇನು..?
ರಾಜ್ಯ ಪೊಲೀಸ್ ಇಲಾಖೆಯು ತುರ್ತುಸೇವೆಯ ಇಲಾಖೆಯಾಗಿದ್ದು ಇಲಾಖೆಯಲ್ಲಿನ ಸಿಬ್ಬಂದಿ ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಬಂದೋಬಸ್ತ್, ಗಸ್ತು, ಭದ್ರತೆ, ಸಂಚಾರ ನಿಯಂತ್ರಣ, ನ್ಯಾಯಾಲಯದ ಕರ್ತವ್ಯ ಸೇರಿದಂತೆ ಹಲವಾರು ಕರ್ತವ್ಯಗಳನ್ನು ದಿನದ 24 ಗಂಟೆಗಳ ಕಾಲ ಹಗಲಿರುಳು ಕಾರ್ಯನಿರ್ವಹಿಸಬೇಕಾಗಿದ್ದು ಕುಟುಂಬದಿಂದ ದೂರ ಉಳಿದು ಸದಾ ಒತ್ತಡದ ದಿನ ಜೀವನವನ್ನು ಅನುಭವಿಸುತ್ತಾ ಮಾನಸಿಕ ಖಿನ್ನತೆ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ.

ಸಾರ್ವಜನಿಕ ಜೀವನದಲ್ಲಿ ಪೊಲೀಸ್ ಸಿಬ್ಬಂದಿ ಹೊರತು ಪಡಿಸಿ ಉಳಿದೆಲ್ಲಾ ನಾಗರಿಕರು ತಮ್ಮ ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವವನ್ನು ಯಾವುದೇ ಪರಿಮಿತಿ ಇಲ್ಲದೇ ಕುಟುಂಬದೊಂದಿಗೆ ಆಚರಿಸಿಕೊಳ್ಳುತ್ತಿದ್ದು ಆದರೆ ಸಮಾಜದ ಭದ್ರತೆಗೆ ಶ್ರಮಿಸುವ ಪೊಲೀಸ್ ಸಿಬ್ಬಂದಿ ತಮ್ಮ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ, ಹಬ್ಬ ಹರಿದಿನಗಳು ಸೇರಿದಂತೆ ಕುಟುಂಬದ ಯಾವುದೇ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಕಷ್ಟಸಾಧ್ಯವಿದೆ.

ಆ ಸಂದರ್ಭಗಳನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲದೇ ಪೂರ್ಣಮನಸ್ಸಿನಿಂದ ಕೆಲಸವನ್ನು ಮಾಡಲಾಗದೆ ಒತ್ತಡದಲ್ಲಿಯೇ ಸೇವೆ ಸಲ್ಲಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಅಂತಹ ಸಂದರ್ಭದಲ್ಲಿ ವಾರದ ರಜೆಯನ್ನು ಹಿರಿಯ ಅಧಿಕಾರಿಗಳಿಂದ ಪಡೆಯುವುದು ಸಹ ಹರಸಾಹಸದ ಕೆಲಸವೆಂಬುವುದು ಸಿಬ್ಬಂದಿಗಳ ಅಳಲಾಗಿದೆ. ವಿಶೇಷ ಸಂದರ್ಭದ ದಿನ ಕುಟುಂಬದೊಂದಿಗೆ ಸಮಯ ಕಳೆಯಲು ಒಂದು ದಿನದ ರಜೆಯನ್ನು ನೀಡುವುದರಿಂದ ಸಿಬ್ಬಂದಿಗಳ ಒತ್ತಡ ಮತ್ತು ಸಾರ್ವಜನಿಕರೊಂದಿಗೆ ತೋರುವ ದುರ್ನಡತೆಯನ್ನು ಕಡಿಮೆ ಮಾಡಬಹುದಾಗಿದ್ದು ಇಲಾಖೆ ಹಾಗೂ ಹಿರಿಯ ಅಧಿಕಾರಿಗಳ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗಲಿದ್ದು ಒತ್ತಡರಹಿತ ಕೆಲಸನಿರ್ವಹಿಸಲು ಸಾಧ್ಯವಾಗುತ್ತದೆ.
ದೆಹಲಿ ಪೊಲೀಸ್ ಇಲಾಖೆಯು ತಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ ಹಾಗೂ ಸಿಬ್ಬಂದಿಗಳ ಪತಿ,ಪತ್ನಿ ಮಕ್ಕಳ ಜನ್ಮದಿನದಂದು ರಜೆ ದಿನವನ್ನಾಗಿ ಆದೇಶಿಸಿದೆ. ಅಲ್ಲದೇ ತಮಿಳುನಾಡಿನ ಕೊಯಮತ್ತೂರು ನಗರ ಮತ್ತು ಕೇರಳದ ಕೊಚ್ಚಿ ನಗರ ಪೊಲೀಸ್ ಇಲಾಖೆಯು ಈ ಕ್ರಮವನ್ನು ಅನುಸರಿಸಿದೆ. ಈ ಹಿಂದೆ ಬೆಂಗಳೂರು ಆಯುಕ್ತರ ಕಛೇರಿಯಿಂದ ಮತ್ತು ಹೆಚ್.ಎಸ್.ಆರ್ ಪೊಲೀಸ್ ಠಾಣೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿತ್ತಾದರೂ ಅಧಿಕಾರಿಗಳು ವರ್ಗಾವಣೆಯಾದ ನಂತರ ಈ ಕ್ರಮ ಮರಿಚೀಕೆಯಾಗಿರುತ್ತವೆ.
ಆದರೆ ಪ್ರಸ್ತುತ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕುರಿತು ತೆಗೆದುಕೊಂಡ ಕ್ರಮ ಎಲ್ಲಡೆ ಪ್ರಶಂಸೆಗೊಳಪಟ್ಟಿರುತ್ತದಲ್ಲದೇ ಸಿಬ್ಬಂದಿ ಸಂತೋಷಕ್ಕೆ ಎಡೆಮಾಡಿಕೊಟ್ಟಿರುತ್ತದೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಎಲ್ಲಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಸಿಯಿಂದ ಎಎಸ್‌ಐ ದರ್ಜೆವರೆಗಿನ ಸಿಬ್ಬಂದಿಗಳ ಸೇವಾಪುಸ್ತಕದಲ್ಲಿ ನಮೂದಾದ ಜನ್ಮದಿನಾಂಕದಂದು ಹಾಗೂ ಅವರ ವಿವಾಹ ವಾರ್ಷಿಕೋತ್ಸವ ದಿನದಂದು ಕಡ್ಡಾಯ ರಜೆ ನೀಡಿ ಮತ್ತು ಆಯಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಂದ ಶುಭಾಷಯ ಪತ್ರ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಡಿಜಿಪಿರವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.











