ಬೆಂಗಳೂರು : ನಟ ದರ್ಶನ್(Darshan) ಅಭಿನಯದ ಬಹು ನಿರೀಕ್ಷಿತ ಡೆವಿಲ್(Devil) ಚಿತ್ರ ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನು ತಂದಿದೆ. ರಾಜ್ಯದ ಹಲವು ನಗರಗಳಲ್ಲಿ ಬೆಳಗ್ಗೆ 6.30ರ ಶೋ ವೀಕ್ಷಿಸಿರುವ ಡಿ ಫ್ಯಾನ್ಸ್ ನೆಚ್ಚಿನ ನಟನನ್ನು ಅಪ್ಪಿಕೊಂಡಿದ್ದಾರೆ. ಸಿನಿಮಾದಲ್ಲಿ ದರ್ಶನ್ ಅವರನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.

ಬೆಂಗಳೂರಿನಲ್ಲಿಯೂ ಹಲವಾರು ಪ್ರಮುಖ ಚಿತ್ರಮಂದಿರಗಳನ್ನು ಸೆಲೆಬ್ರಿಟಿಸ್ ರಾತ್ರಿಯಿಂದಲೇ ಹೂಗಳಿಂದ ಅಲಂಕರಿಸಿ, ತಳಿರು ತೋರಣ ಕಟ್ಟಿ ಡೆವಿಲ್ ಗ್ರ್ಯಾಂಡ್ ವೆಲ್‌ಕಮ್‌ಗೆ ಸಿದ್ದವಾಗಿ ನಿಂತಿದ್ದರು. ದರ್ಶನ್ ಜೈಲಿನಿಂದ ನೀಡಿರುವ ಒಂದೇ ಒಂದು ಕರೆಗೆ ಡಿ ಫ್ಯಾನ್ಸ್ ಡೆವಿಲ್ ಹೊತ್ತು ಮೆರೆಸುತ್ತಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಸಸ್ಪೆನ್ಸ್ ಸೀನ್‌ಗಳಿದ್ದು, ಈ ಚಿತ್ರದಲ್ಲಿ ದರ್ಶನ್ ತಮ್ಮ ಮನದಾಸೆಯನ್ನು ಹೊರಹಾಕಿದ್ದಾರೆ.

ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಕುರ್ಚಿ ಕಿತ್ತಾಟದ ವಿಚಾರಗಳಿ ಹೋಲಿಕೆಯಾಗುವಂತೆ ಸಿನಿಮಾದಲ್ಲಿ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಪಟ್ಟದಾಟದಂತೆಯೇ ಅಲ್ಲೂ ಕೂಡ ಸಿಎಂ ಸ್ಥಾನಕ್ಕೆ ಪೈಪೋಟಿಯಿದೆ. ಮುಖ್ಯವಾಗಿ ದರ್ಶನ್ ಚಿತ್ರದಲ್ಲಿ ಸಿಎಂ ಆಗುವ ಮೂಲಕ ತಮ್ಮ ಮುಂದಿನ ರಾಜಕೀಯ ನಡೆಯ ಮುನ್ಸೂಚನೆ ನೀಡಿದ್ರಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇನ್ನು ದರ್ಶನ್ ವಿಚಾರದಲ್ಲಿ ರಾಜಕೀಯ ಹೊಸದಲ್ಲದಿದ್ದರೂ ಅವರಿಗೆ ಪಾಲಿಟಿಕ್ಸ್‌ನಂಟಿದೆ. ಈಗಾಗಲೇ ಹಲವಾರು ಜನಪ್ರತಿನಿಧಿಗಳ ಪರವಾಗಿ ಚುನಾವಣಾ ಪ್ರಚಾರವನ್ನೂ ಮಾಡಿದ್ದಾರೆ. ಅಲ್ಲದೇ ಮೈಸೂರು, ಮಂಡ್ಯ ಭಾಗದಲ್ಲಿ ಇಂದಿಗೂ ದರ್ಶನ್ ಕ್ರೇಜ್ ಜಾಸ್ತಿಯಾಗಿಯೇ ಇದೆ. ಹೀಗಿರುವಾಗ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಕರ್ನಾಟಕ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಎನ್ನುವ ಸುದ್ದಿಗೆ ಈಗ ರೆಕ್ಕ ಪುಕ್ಕಗಳು ಬಂದಂತಾಗಿವೆ.

ಮೈಸೂರು ಭಾಗದಲ್ಲಿ ಮುಂದಿನ ಚುನಾವಣಾ ಅಖಾಡಕ್ಕೆ ದರ್ಶನ್ ಇಳಿಯುತ್ತಾರಾ ಎನ್ನುವ ಟಾಕ್‌ಗಳು ನಡೆಯುತ್ತಿವೆ. ರಾಜಕೀಯದಲ್ಲಿನ ವಾಸ್ತವತೆಯನ್ನು ದಾಸ ತೆರೆಯ ಮೇಲೆ ತರುವ ಪ್ರಯತ್ನ ಮಾಡಿರೋದನ್ನು ಸಿನಿಮಾನೇ ಹೇಳುತ್ತಿದೆ. ಆದರೆ ರಾಜಕೀಯದಲ್ಲಿ ಸಿನಿಮಾ ಸ್ಟಾರ್‌ಗಳಿಗೆ ನೆಲೆ ಸಿಕ್ಕಿರೋದು ಬೆರಳೆಣಿಕೆ ಜನರಿಗಷ್ಟೇ ಎನ್ನುವುದು ಗಮನಾರ್ಹ. ತಮಿಳುನಾಡಿನಲ್ಲಿ ತಮಿಳು ವೆಟ್ರಿ ಕಳಗಂ ಪಕ್ಷದ ಅಧಿಕೃತವಾಗಿ ರಾಜಕೀಯಕ್ಕೆ ಇಳಿದಿರುವ ನಟ ವಿಜಯ್ ಹಾದಿಯಂತೆಯೇ ದರ್ಶನ್ ದಿಢೀರ್ ರಾಜಕೀಯ ಆಯ್ಕೆ ಮಾಡಿಕೊಳ್ಳುತ್ತಾರಾ ಎಂಬ ಮಾತೂ ಇದೆ. ಅಲ್ಲದೆ ಇದೇ ವಿಚಾರಕ್ಕೆ, ಅಭಿಮಾನಿಗಳು ಹೇಳಿದ್ರೆ ದರ್ಶನ್ ನಿರಾಕರಿಸುವುದಿಲ್ಲ ಎಂಬ ಮಾತನ್ನೂ ಸಹ ದರ್ಶನ್ ಸಹೋದರ ದಿನಕರ್ ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸದ್ಯಕ್ಕೆ ದರ್ಶನ್ ಚಿತ್ರ ವೀಕ್ಷಿಸಿ ಅಭಿಮಾನಿಗಳು ಹೆಚ್ಚಿನ ಉತ್ಸಾದಲ್ಲಿದ್ದಾರೆ. ಏನೇ ಆಗಲಿ ನೆಮ್ದಿಯಾಗಿರ್‌ಬೇಕು ಅಂತ ಡೆವಿಲ್ ಜಾತ್ರೆ ಮಾಡುತ್ತಿದ್ದಾರೆ. ಆದರೆ ಚಿತ್ರದಲ್ಲಿ ಸಿಎಂ ಆಗಿರುವ ದರ್ಶನ್ ಎಲ್ಲ ವಿವಾದಗಳಿಂದ ಮುಕ್ತರಾಗಿ ನಿಜ ಜೀವನದಲ್ಲಿಯೂ ಜನಪ್ರತಿನಿಧಿಯಾಗಿ ರಾಜ್ಯ ಆಳ್ತರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೆಕಿದೆ.












