ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy murder Case) ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್(Darshan) ತಮ್ಮ ಸೆಲ್‌ನಲ್ಲಿರುವ ಸಹ ಕೈದಿಗಳಿಗೆ ದೈಹಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

ಜೈಲಿನಲ್ಲಿ ಕೈದಿಗಳ ಮೋಜು ಮಸ್ತಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈಗ ಪರಪ್ಪನ ಅಗ್ರಹಾರದಲ್ಲಿ ನಿಯಮಗಳು ಕಠಿಣವಾಗಿದ್ದು, ಇದರಿಂದ ದರ್ಶನ್ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಅಲ್ಲದೇ ಮಾನಸಿಕ ಒತ್ತಡದಿಂದ ತತ್ತರಿಸಿರುವ ದರ್ಶನ್ ತಮ್ಮ ಸೆಲ್‌ನಲ್ಲಿರುವ ತಮ್ಮದೇ ಕೇಸ್‌ನ ಆರೋಪಿಗಳಾದ ಅನುಕುಮಾರ್, ಜಗ್ಗ ಹಾಗೂ ಲಕ್ಷ್ಮಣ್‌ಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ.

ಮಲಗಿರುವ ಸಹ ಕೈದಿಗಳನ್ನು ಕಾಲಿನಲ್ಲಿ ಒದ್ದು ಎಬ್ಬಿಸುವುದು, ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಾಡುವುದು ಹೀಗೆ ದರ್ಶನ್ ಸಹ ಕೈದಿಗಳಿಗೆ ತೊಂದರೆ ಕೊಡುತ್ತಿದ್ದು, ಇದರಿಂದ ದರ್ಶನ್ ಹಾಗೂ ಜಗ್ಗ ಮಧ್ಯೆ ದೊಡ್ಡ ಜಗಳ ನಡೆದಿದೆ ಎನ್ನಲಾಗದೆ. ಅಲ್ಲದೇ ದರ್ಶನ್ ಇರುವ ಸೆಲ್‌ನಲ್ಲೇ ಇದ್ದರೆ ನಾನು ಸಾಯುತ್ತೇನೆ ಎಂದು ಆರೋಪಿ ಅನುಕುಮಾರ್ ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇರುವ ಸೆಲ್‌ಗೆ ವಿಶೇಷ ಕಾವಲು ವ್ಯವಸ್ಥೆ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.












