ಬೆಂಗಳೂರು: ಕೇಂದ್ರ ಸರ್ಕಾರವು ನರೇಗಾ, ಜಲ ಜೀವನ್ ಮಿಷನ್ ಸೇರಿದಂತೆ ಇತರೆ ಯೋಜನೆಗಳ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೋಮವಾರ ನಡೆದ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದ ಡಿಕೆಶಿ, ನರೇಗಾ ಯೋಜನೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ, ಇದರಿಂದ ನಮ್ಮ ಸರ್ಕಾರಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ. ನಾವು ಜನರ ಹೃದಯಕ್ಕೆ ಹತ್ತಿರವಾಗುತ್ತೇವೆ ಎಂದು ಇದಕ್ಕೆ ಅನುದಾನ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನರೇಗಾ ಯೋಜನೆಯಡಿ 2021ರಲ್ಲಿ 14.65 ಕೋಟಿ ಮಾನವ ಕೂಲಿ ದಿನಗಳಿಗೆ ಅವಕಾಶವಿತ್ತು. ಈ ವರ್ಷ ಅದನ್ನು 9 ಕೋಟಿಗೆ ಇಳಿಸಿದ್ದಾರೆ. ಸುಮಾರು 40% ಕಡಿಮೆ ಮಾಡಿದ್ದಾರೆ. ನರೇಗಾ ಯೋಜನೆಯಡಿ 2021ರಲ್ಲಿ 5,910 ರೂ. ಕೋಟಿ ಅನುದಾನ ಬಂದಿತ್ತು. ಈ ವರ್ಷ 2,691 ಕೋಟಿ ರೂ. ಅನುದಾನ ಬಂದಿದೆ. ಈ ಯೋಜನೆಯಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂದು ನೀವೆಲ್ಲರೂ ಗಮನಿಸಬೇಕು ಎಂದು ತಿಳಿಸಿದರು.

ಜಲಜೀವನ್ ಮಿಷನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತಲಾ 45% ಅನುದಾನ ನೀಡಬೇಕು. 10% ಹಣವನ್ನು ಜನರಿಂದ ಪಡೆಯುವುದಾಗಿದೆ. ಕಳೆದ ವರ್ಷ ಈ ಯೋಜನೆಗೆ ರಾಜ್ಯ ಸರ್ಕಾರ 3700 ಕೋಟಿ ರೂ. ಅನ್ನು ನೀಡಿದರೆ, ಕೇಂದ್ರ ಸರ್ಕಾರ ನೀಡಿರುವ ಅನುದಾನ ಈವರೆಗೂ ಶೂನ್ಯ ಎಂದು ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ 25 ಸಾವಿರ ಕೋಟಿ ಅನುದಾನದಲ್ಲಿ ಜಲಜೀವನ್ ಮಿಷನ್ ಗೆ 12 ಸಾವಿರ ಕೋಟಿ, ನರೇಗಾ ಯೋಜನೆಗೆ 2,400 ಕೋಟಿ, ಗ್ರಾಮಗಳ ರಸ್ತೆಗೆ 1,000 ಕೋಟಿ, ಸಿಎಂ ಮೂಲಭೂತ ಸೌಕರ್ಯಕ್ಕೆ 900 ಕೋಟಿ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲ್ಯಾಣ ಪಥ ಯೋಜನೆ ಜಾರಿ ಮಾಡಿದ್ದಾರೆ ಎಂದರು.

ಇನ್ನು ಇದೊಂದು ಐತಿಹಾಸಿಕ ಕಾರ್ಯಕ್ರಮ. ಶುಭ ಗಳಿಗೆಯಲ್ಲಿ ನಾವು ಸೇರಿದ್ದೇವೆ. ನಮ್ಮ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡಿದ್ದು, ನಾವು ಭೂಮಿ ಮೇಲೆ ಹುಟ್ಟಿ, ಸತ್ತ ನಂತರ ಭೂಮಿಯ ಒಳಗೆ ಸೇರುತ್ತೇವೆ. ಆದರೆ ಬದುಕಿದ್ದಾಗ ನಾವು ಮಾಡಿದ ಸಾಧನೆ ಮಾತ್ರ ಭೂಮಿಯ ಮೇಲೆ ಉಳಿದುಕೊಳ್ಳುತ್ತದೆ. ಈ ಹಸ್ತ ನಿಮ್ಮ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಗಾಂಧೀಜಿ ದೇಶದ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿ ನೂರು ವರ್ಷಗಳು ತುಂಬಿದೆ. ಅಂದು ಗಾಂಧೀಜಿ ಅವರು ವಹಿಸಿಕೊಂಡ ಜವಾಬ್ದಾರಿ ಸ್ಥಾನದಲ್ಲಿ ಇಂದು ನಮ್ಮದೇ ರಾಜ್ಯದವರಾದ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ ಎಂದರು.












