ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಎದುರಾಗಿದ್ದ ಸಿಎಂ ಬದಲಾವಣೆಗೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಮಾಜಿ ಸಂಸದ ಡಿ.ಕೆ. ಸುರೇಶ್ ಪ್ರತಿಕ್ರಿಸಿದ್ದು, ʼಸಿಎಂ, ಡಿಸಿಎಂ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ, ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆʼ ಎಂದಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಹೆಚ್ಚಿನ ವಿಚಾರ ಏನಾದರೂ ಇದ್ದರೇ ಅದನ್ನು ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ. ಈ ಬಗ್ಗೆ ಇಬ್ಬರು ನಾಯಕರು ಈಗಾಗಲೇ ಸ್ಪಷ್ಟನೆ ನೀಡಿರುವಾಗ ಹೆಚ್ಚಿನ ವ್ಯಾಖ್ಯಾನಗಳು ಬೇಡ. ಶಿವಕುಮಾರ್ ಅವರ ಮಾತು ಒಂದೇ, 140 ಶಾಸಕರು ನಮ್ಮವರೇ. ಅವರು ಪಕ್ಷದ ರಾಜ್ಯ ಅಧ್ಯಕ್ಷ ಎಂದು ಈ ಹಿಂದೆ ಹೇಳಿದ್ದಾರೆ, ಇಂದು, ನಾಳೆಯೂ ಹೇಳುತ್ತಾರೆ ಎಂದರು.

ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎನ್ನುವ ಈ ಹಿಂದೆ ನೀಡಿದ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಾನು ಆ ರೀತಿಯ ಹೇಳಿಕೆ ನೀಡಿಲ್ಲ. ನಾನು ಹೇಳಿದ್ದು ಬೇರೆ, ರೀತಿ ಅದನ್ನು ನೀವು ತಿರುಚಿದ್ದೀರಿ. ಆದರೂ ಸಿಎಂ ಮತ್ತು ಡಿಸಿಎಂ ಇಬ್ಬರೂ ಇಂದು ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕಾರಣಕ್ಕೆ ಇದನ್ನು ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಇಬ್ಬರು ನಾಯಕರು ಖುದ್ದಾಗಿ ಮಾಧ್ಯಮಗಳ ಮುಂದೆಯೇ ಮಾತನಾಡಿದ್ದಾರೆ. ಈಗ ಮತ್ತೊಬ್ಬರು ಮಾತನಾಡುವುದರಿಂದ ಹೆಚ್ಚಿನ ಅರ್ಥ ಬರುವುದಿಲ್ಲ ಎಂದು ಹೇಳಿದರು.












