ಪ್ರಚಾರತಂತ್ರ ಮತ್ತು ಮಾರುಕಟ್ಟೆ ಬಂಡವಾಳದ ಹರಿವು ಸರ್ಕಾರಗಳ ಸಾಧನೆಗಳನ್ನೂ ನಗಣ್ಯಗೊಳಿಸುತ್ತದೆ
ನಾ ದಿವಾಕರ
(ರಾಜಕೀಯ ವಿರೋಧಾಭಾಸ – ಪ್ರಜಾತಂತ್ರದ ಅಣಕ – ಈ ಲೇಖನದ ಮುಂದುವರೆದ ಭಾಗ)
ಹತ್ತು ವರ್ಷಗಳ ಕಾಲ ಒಂದು ರಾಜ್ಯದ ಸರ್ಕಾರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ರಾಜಕೀಯ ಪಕ್ಷಗಳೂ ಸಹ ಆಡಳಿತ ವಿರೋಧಿ ಅಲೆಯನ್ನು ಎದುರಿಸುವುದು ಪ್ರಜಾಪ್ರಭುತ್ವದಲ್ಲಿ ಸಹಜವಾದ ವಿದ್ಯಮಾನ. ಈ ಅಲೆಯನ್ನು ಎದುರಿಸಿ ಮರು ಆಯ್ಕೆಯಾಗಬೇಕಾದರೆ, ಸರ್ಕಾರದ ಸಾಧನೆಗಳು ಅತ್ಯುತ್ತಮವಾಗಿರಬೇಕು, ಅಂದರೆ ಎಲ್ಲ ಸ್ತರದ ಸಮಾಜಗಳನ್ನೂ ಒಳಗೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು, ಆರ್ಥಿಕ ಯೋಜನೆಗಳು ಹಾಗೂ ಸಾಂವಿಧಾನಿಕ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಬೇಕು. ಇಲ್ಲವಾದರೆ ವಿರೋಧ ಪಕ್ಷಗಳು ಪ್ರಬಲವಾಗಿದ್ದು, ಸರ್ಕಾರವನ್ನು ಪರಾಭವಗೊಳಿಸುವಂತಹ ಪರ್ಯಾಯ ನೀತಿಗಳನ್ನು ಮತದಾರರ ಮುಂದೆ ಪ್ರಸ್ತಾಪಿಸಬೇಕು. ಬಿಹಾರದ ಚುನಾವಣೆಗಳಲ್ಲಿ ಈ ಎರಡೂ ಸಹ ಇಲ್ಲದಿರುವುದು ವಿಚಿತ್ರ ಆದರೂ ವಾಸ್ತವ.

ನೀತಿಶ್ ಕುಮಾರ್ ಅವರ ಸು-ಶಾಸನ್ ಘೋಷಣೆ ಪ್ರಚಾರ ತಂತ್ರವಾಗಿ ಬಹಳ ಪರಿಣಾಮಕಾರಿಯಾಗಿದೆ. ಸಾಮಾನ್ಯ ಮತದಾರರು ಈ ಪದವನ್ನು ಭೇದಿಸಿ ಅರ್ಥ ಹುಡುಕುವುದಿಲ್ಲ. ಆಳ್ವಿಕೆಯಲ್ಲಿ ತಮಗೆ ಒದಗಿರುವ ಸೌಕರ್ಯ, ಸವಲತ್ತು, ಕಲ್ಯಾಣ ಯೋಜನೆಗಳು ಸಮಾಧಾನಕರವಾಗದ್ದರೆ, ಸು-ಶಾಸನ ಸ್ವೀಕೃತವಾಗಿಬಿಡುತ್ತದೆ, ಇದರೊಂದಿಗೆ ಮರು ಆಯ್ಕೆಯಾದರೆ ಆಡಳಿತಾರೂಢ ಪಕ್ಷ-ಮೈತ್ರಿಕೂಟ ಜನತೆಗೆ ಒದಗಿಸುವ ಸೌಲಭ್ಯಗಳ ಆಶ್ವಾಸನೆ ಮತದಾರರಲ್ಲಿ ಒಂದು ಆಶಾಭಾವನೆಯನ್ನು ಉಂಟುಮಾಡುತ್ತದೆ. ಇಂತಹ ಸರ್ಕಾರವನ್ನು ಪರಾಭವಗೊಳಿಸಬೇಕಾದರೆ, ವಿರೋಧ ಪಕ್ಷಗಳು ನೀಡುವ ಆಶ್ವಾಸನೆಗಳು ಮತದಾರರಿಗೆ ಇನ್ನೂ ಆಕರ್ಷಣೀಯವಾಗಿ, ಲಾಭದಾಯಕವಾಗಿ ಕಾಣುವಂತಿರಬೇಕು ಹಾಗೂ ಚಾಲ್ತಿಯಲ್ಲಿರುವ ನೀತಿಗಳಿಂದ ಭಿನ್ನವಾದ ದೂರಗಾಮಿ ಯೋಜನೆಗಳನ್ನು ಒಳಗೊಂಡಿರಬೇಕು. ಈ ದೃಷ್ಟಿಯಿಂದ ನೀತಿಶ್ ಸರ್ಕಾರ ಯಶಸ್ವಿಯಾಗಿದ್ದರೆ, ಮಹಾಘಟ್‌ಬಂಧನ್ ವಿಫಲವಾಗಿರುವುದು ವಾಸ್ತವ.

ಗ್ಯಾರಂಟಿ ಯೋಜನೆಗಳು, ನೇರ ನಗದು ಪಾವತಿ ಮುಂತಾದ ಸೌಲಭ್ಯಗಳು ಭಾರತದ ಚುನಾವಣಾ ರಾಜಕಾರಣದ ಪ್ರಧಾನ ಭಾಗವಾಗಿದ್ದು, ಇಲ್ಲಿ ಫಲಾನುಭವಿ ಜನತೆ ತಮ್ಮ ಸುಸ್ಥಿರ ಬದುಕಿಗಿಂತಲೂ, ಈ ತಾತ್ಕಾಲಿಕ ಶಮನಕಾರಿ ಸೌಲಭ್ಯಗಳನ್ನು ಅಳೆಯುತ್ತಾರೆ. ಇದು ಜಾತಿ ಸಮೀಕರಣವನ್ನೂ ನಗಣ್ಯಗೊಳಿಸುವುದನ್ನು ಬಿಹಾರ ಚುನಾವಣೆಗಳು ನಿರೂಪಿಸಿವೆ. ಆದರೆ ವಿರೋಧಿ ಒಕ್ಕೂಟವೂ ಇದೇ ʼ ಒದಗಿಸಲಾಗುವ ಸೌಲಭ್ಯಗಳನ್ನೇ ʼ ಪ್ರಧಾನವಾಗಿ ಅವಲಂಬಿಸಿದಾಗ, ಬಹುತೇಕ ಮತದಾರರು, ಹೊಸದಕ್ಕಿಂತಲೂ ಇರುವುದೇ ವಾಸಿ ಎಂಬ ಭಾವನೆ ತಳೆಯುವ ಸಾಧ್ಯತೆಗಳಿರುತ್ತವೆ. ಇದನ್ನು ದಾಟಿ ದೂರಗಾಮಿ ಯೋಜನೆಗಳು ಏನಿವೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವ ಕ್ಷಮತೆಯನ್ನು ಭಾರತೀಯ ಮತದಾರರು ಪಡೆದುಕೊಂಡಿದ್ದಾರೆ ಎನ್ನುವುದನ್ನು ರಾಜಕೀಯ ಪಕ್ಷಗಳು ಮನಗಾಣಬೇಕಿದೆ.
ಅಧಿಕಾರ ಗ್ರಹಣದ ಭಿನ್ನ ಮಾದರಿಗಳು
ಬಿಜೆಪಿ ಈ ಭಾದ್ಯತೆಯ ಅಗತ್ಯವೇ ಇಲ್ಲ ಎನ್ನುವ ರೀತಿಯಲ್ಲಿ ತನ್ನ ಸರ್ಕಾರಗಳನ್ನು, ಮಿತ್ರ ಪಕ್ಷಗಳನ್ನು ರಕ್ಷಿಸುವ ಕಲೆ ಕರಗತ ಮಾಡಿಕೊಂಡಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮೊದಲಾದ ರಾಜ್ಯಗಳಲ್ಲಿ ಬಹುಮತ ಪಡೆದಿರುವ ಪಕ್ಷಗಳನ್ನು ಇಬ್ಭಾಗ ಮಾಡುವ ಅಥವಾ ಚುನಾಯಿತ ಪ್ರತಿನಿಧಿಗಳನ್ನು ಅಕ್ಷರಶಃ ಖರೀದಿಸುವ ಒಂದು ಮಾದರಿಯನ್ನು ಬಿಜೆಪಿ ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಅನುಸರಿಸಿದೆ. ಇದನ್ನು ʼ ಆಪರೇಷನ್ ಕಮಲ ʼ ಎಂಬ ಸುಂದರ ಪದಗಳಿಂದ ಬಣ್ಣಿಸಲಾದರೂ, ಇಡೀ ಪ್ರಕ್ರಿಯೆಯ ಹಿಂದೆ ಇರುವುದು ಬಂಡವಾಳ ಮತ್ತು ಮಾರುಕಟ್ಟೆಯ ಬಲ ಎನ್ನುವುದು ಸ್ಪಷ್ಟ. ಆದರೆ ಬಿಹಾರದ ಸು-ಶಾಸನವನ್ನು ಉಳಿಸಲು ಈ ಬಾರಿ ಕೇಂದ್ರ ಸರ್ಕಾರ ಅನುಸರಿಸಿದ ವಿಧಾನವೇ ಬೇರೆ. ʼ ಡಬಲ್ ಎಂಜಿನ್ ʼ ಸರ್ಕಾರ ಎಂಬ ಆಕರ್ಷಕ ಪದಕ್ಕೆ ಜನಮನ್ನಣೆ ದೊರೆತಿರುವುದರಿಂದ, ಮುಖ್ಯ ಎಂಜಿನ್ ರೂಪದಲ್ಲಿ ಕೇಂದ್ರ ಸರ್ಕಾರ, ಬಿಜೆಪಿ ಅಥವಾ ಮಿತ್ರ ಪಕ್ಷದ ಸರ್ಕಾರಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ಇಂಧನ ಒದಗಿಸುವ ತಂತ್ರಗಾರಿಕೆಯನ್ನು ರೂಢಿಸಿಕೊಂಡಿದೆ.
ಸಂಸದೀಯ ಪ್ರಜಾತಂತ್ರದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯಗಳ ಸಂಬಂಧಗಳನ್ನು ಸಾಂವಿಧಾನಿಕ ಚೌಕಟ್ಟಿನೊಳಗೆ ನೋಡಿದಾಗ, ಇದು ಸಂಪೂರ್ಣ ತದ್ವಿರುದ್ಧ ಮಾರ್ಗವಾಗಿ ಕಾಣುತ್ತದೆ. ಎಲ್ಲ ರಾಜ್ಯಗಳ ಸರ್ವತೋಮುಖ ಅಭಿವೃದ್ಧಿಯ ಗುರಿಯೊಂದಿಗೆ, ದೇಶದ ಪ್ರಗತಿಯನ್ನು ಸಾಧಿಸಬೇಕಾದ ಉದಾತ್ತ ಪ್ರಜಾಸತ್ತಾತ್ಮಕ ಚಿಂತನೆಗೆ ಇದು ವ್ಯತಿರಿಕ್ತವಾಗಿದೆ. ಆದಾಗ್ಯೂ ವಿರೋಧ ಪಕ್ಷಗಳ ಆಳ್ವಿಕೆಯನ್ನೇ ಸಹಿಸಿಕೊಳ್ಳದ ಒಂದು ವಾತಾವರಣವನ್ನು ಡಬಲ್-ಎಂಜಿನ್ ಕಲ್ಪನೆ ಸೃಷ್ಟಿಸಿದೆ. ತತ್ಪರಿಣಾಮವಾಗಿ ತಮ್ಮ ರಾಜ್ಯಗಳ ಹಿತಾಸಕ್ತಿಗಳನ್ನೇ ಪ್ರಧಾನವಾಗಿ ಪರಿಗಣಿಸುವ ಪ್ರಾದೇಶಿಕ ಪಕ್ಷಗಳು , ತತ್ವ ಸಿದ್ಧಾಂತ ಮತ್ತು ಸಾಂವಿಧಾನಿಕ ಬಾಧ್ಯತೆಗಳನ್ನೂ ಬದಿಗೊತ್ತಿ, ಕೇಂದ್ರದಲ್ಲಿರುವ ಬಿಜೆಪಿಯೊಡನೆ ಚುನಾವಣಾ ಮೈತ್ರಿಗಾಗಿ ಹಪಹಪಿಸುತ್ತವೆ. ಹಾಗೆ ಮಾಡದೆ ಹೋದರೆ ಚುನಾಯಿತ ಜನಪ್ರತಿನಿಧಿಗಳನ್ನು ಕಳೆದುಕೊಳ್ಳುವ ಆತಂಕವೂ ಈ ಪಕ್ಷಗಳಲ್ಲಿ ಮಡುಗಟ್ಟಿರುತ್ತದೆ. ತತ್ವಹೀನ ರಾಜಕಾರಣದ ಸಹಜ ಪ್ರಕ್ರಿಯೆಯಾಗಿ ಇದನ್ನು ಕಾಣಬಹುದು.
ಪ್ರಜಾತಂತ್ರದ ದುರವಸ್ಥೆ
ಪ್ರಜಾಪ್ರಭುತ್ವಕ್ಕೆ ಇದು ಎರಡು ರೀತಿಯಲ್ಲಿ ಹಾನಿ ಮಾಡುತ್ತದೆ. ಮೊದಲನೆಯದಾಗಿ, ರಾಜ್ಯಗಳ ಸಾರ್ವಭೌಮ ಜನತೆ ತಮ್ಮ ಏಳಿಗೆಯ ದೃಷ್ಟಿಯಿಂದ, ವಿಶ್ವಾಸಪೂರ್ವಕವಾಗಿ ಚುನಾಯಿಸುವ ರಾಜಕೀಯ ಪಕ್ಷಗಳು, ಚುನಾವಣಾ ಪೂರ್ವ ಭರವಸೆಗಳೆಲ್ಲವನ್ನೂ ಅಲಕ್ಷಿಸಿ, ತಮ್ಮ ಅಸ್ತಿತ್ವದ ಉಳಿವಿಗಾಗಿ ತತ್ವಾಂತರವಲ್ಲದ ಪಕ್ಷಾಂತರ ಮಾಡಲು ಉತ್ಸುಕವಾಗುತ್ತವೆ. ಪಕ್ಷ ನಿಷ್ಠೆ ಇರುವ ಸಾಮಾನ್ಯ ಜನತೆ, ತಳಸಮಾಜದ ಸಮಾಜಗಳು ಯಾವುದೇ ತಾತ್ವಿಕ ಬಂಧನಗಳಿಗೆ ಒಳಪಡದೆ ಇರುವುದರಿಂದ, ತಮ್ಮ ಬೆಂಬಲವನ್ನೂ ಮುಂದುವರೆಸುತ್ತವೆ. ಇದು ಪ್ರಾದೇಶಿಕತೆಗೆ ಧಕ್ಕೆ ಉಂಟುಮಾಡುವುದಷ್ಟೇ ಅಲ್ಲದೆ, ಒಕ್ಕೂಟ ವ್ಯವಸ್ಥೆಯ ಮೂಲ ತತ್ವಗಳನ್ನೇ ಕಡೆಗಣಿಸಿದಂತಾಗುತ್ತದೆ. ಬಿಜೆಡಿ, ಬಿಎಸ್‌ಪಿ, ಜೆಡಿಎಸ್, ಎಲ್‌ಜೆಪಿ ಮೊದಲಾದ ಪಕ್ಷಗಳು ಈ ಸಿಕ್ಕುಗಳಲ್ಲಿ ಸಿಲುಕಿರುವುದರಿಂದಲೇ ತಮ್ಮ ಸೈದ್ಧಾಂತಿಕ ನೆಲೆಗಳನ್ನು ಕಳೆದುಕೊಳ್ಳುತ್ತಿವೆ.
ಎರಡನೆಯ ಹಾನಿಯಾಗುವುದು ವಿವಿಧ ರಾಜ್ಯಗಳ ಜನತೆಯ ಸ್ವಾವಲಂಬನೆ ಮತ್ತು ಸ್ವಾಭಿಮಾನಕ್ಕೆ. ಜಿಎಸ್‌ಟಿ ಕಾಯ್ದೆ ಜಾರಿಯಾದ ನಂತರ ರಾಜ್ಯಗಳು ತಮ್ಮ ತೆರಿಗೆ ಸಂಗ್ರಹದ ನಿಗದಿತ ಪಾಲನ್ನು ಕೇಂದ್ರದಿಂದ ಪಡೆಯುವುದಕ್ಕೂ ಅಂಗಲಾಚುವ ಪರಿಸ್ಥಿತಿ ಸೃಷ್ಟಿಯಾಗಿದ್ದು, ಕೇಂದ್ರದೊಡಗಿನ ಮೈತ್ರಿ ಇಲ್ಲಿ ನಿರ್ಣಾಯಕವಾಗುತ್ತದೆ. ಕರ್ನಾಟಕ ಮತ್ತು ತಮಿಳುನಾಡು ಈ ನಿಟ್ಟಿನಲ್ಲಿ ಎದುರಿಸುತ್ತಿರುವ ಸವಾಲುಗಳು ಇಲ್ಲಿ ಗಮನಾರ್ಹ. ಭಾರತದ ಬಹುಪಾಲು ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿ ʼ ಆಪರೇಷನ್ ಕಮಲ ʼ ಅಥವಾ ʼ ಡಬಲ್ ಎಂಜಿನ್ ಸರ್ಕಾರ ʼದ ಅನಿವಾರ್ಯತೆಗಳಿಗೆ ಬದ್ಧವಾಗುತ್ತದೆ. ಪಕ್ಷದ ನಾಯಕತ್ವದ ಅಂತಿಮ ತೀರ್ಮಾನವೇ ನಿರ್ಣಾಯಕವಾಗುವುದರಿಂದ, ಪಕ್ಷವನ್ನು ಪ್ರತಿನಿಧಿಸುವ ಚುನಾಯಿತ/ಪರಾಜಿತ ಜನಪ್ರತಿನಿಧಿಗಳು , ವ್ಯಕ್ತಿಗತ ನೆಲೆಯಲ್ಲೂ ತತ್ವ ಸಿದ್ದಾಂತಗಳನ್ನು ಬದಿಗೊತ್ತಿ ಅಧಿಕಾರ ರಾಜಕಾರಣದ ಒಂದು ಭಾಗವಾಗುತ್ತಾರೆ. ಈ ಬೆಳವಣಿಗೆಯ ಪರಿಣಾಮವಾಗಿಯೇ ದೇಶದ ಇಡೀ ರಾಜಕೀಯ ವ್ಯವಸ್ಥೆ ತನ್ನೆಲ್ಲಾ ತಾತ್ವಿಕ ಮಸುಕುಗಳನ್ನು, ಸೈದ್ಧಾಂತಿಕ ದಿರಿಸುಗಳನ್ನು ತ್ಯಜಿಸಿ, ಸಾಂವಿಧಾನಿಕ ನೈತಿಕತೆಯನ್ನೂ (Constitutional Morality) ಕಳೆದುಕೊಂಡಿದೆ.

ಬಿಹಾರದ ನಿಗೂಢ ಫಲಿತಾಂಶಗಳು
ಈ ಹಿನ್ನೆಲೆಯಲ್ಲಿ ಬಿಹಾರದ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಎನ್‌ಡಿಎ ಗೆಲುವು ಅಧಿಕಾರ ರಾಜಕಾರಣ, ಮಾರುಕಟ್ಟೆ ಬಂಡವಾಳ ಹಾಗೂ ತತ್ವರಹಿತ ರಾಜಕೀಯ ಸಮ್ಮಿಲನವಾಗಿ ಕಾಣುತ್ತದೆ. ಒಂದು ರೀತಿಯಲ್ಲಿ ಚುನಾವಣಾ ರಾಜಕಾರಣವನ್ನು ಮಾರುಕಟ್ಟೆ ಪ್ರಕ್ರಿಯೆಯಂತೆ ಬಳಸಿಕೊಳ್ಳುವ ಹೊಸ ಮಾದರಿಯನ್ನು ಇಲ್ಲಿ ಗುರುತಿಸಬಹುದು. ಈ Marketisation of Election Process , ರಾಜ್‌ದೀಪ್ ಸರ್ದೇಸಾಯಿ ಅವರ ಮಾತುಗಳಲ್ಲಿ ಮತಗಳ ಖರೀದಿ ಎಂದು ನಿರ್ವಚನೆಗೊಳಗಾಗುತ್ತದೆ. ಚುನಾವಣಾ ನೀತಿ ಸಂಹಿತೆಗಳನ್ನು ಘೋಷಿಸುವ ಮುನ್ನಾದಿನ ಮಹಿಳೆಯರಿಗೆ ವರ್ಷಕ್ಕೆ 10 ಸಾವಿರ ರೂ ನೀಡುವ ಹೊಸ ಯೋಜನೆಯನ್ನು ಘೋಷಿಸುವುದು, ಚುನಾವಣೆಯ ಮುನ್ನಾದಿನ ಮತದಾರರ ಖಾತೆಗಳಿಗೇ ನೇರವಾಗಿ ಹಣಸಂದಾಯ ಮಾಡುವುದು, ವಿಶೇಷ ತೀವ್ರ ಪರಿಷ್ಕರಣೆಯ (SIR) ಮೂಲಕ 40 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆಯುವುದು ಇವೆಲ್ಲವೂ, ಭಾರತದ ಪ್ರಜಾಪ್ರಭುತ್ವ ಸಾಗುತ್ತಿರುವ ದಾರಿಯ ಸೂಚನೆಯಾಗಿದೆ.
ಬಿಹಾರ ಚುನಾವಣೆಗಳಿಗೆ ಕೆಲವು ತಿಂಗಳುಗಳ ಮುನ್ನ ಕೇಂದ್ರ ಚುನಾವಣಾ ಆಯೋಗ ಜಾರಿಗೊಳಿಸಿದ SIR ಸಾಂವಿಧಾನಿಕವಾಗಿ ನಿಯಮಬದ್ಧವಾಗಿಲ್ಲ ಎಂದು ಹಲವು ಸಂವಿಧಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದ್ದೇಶಿತ ಜನಸಮುದಾಯಗಳನ್ನು ಮತದಾರರ ಪಟ್ಟಿಯಿಂದ ಹೊರಗುಳಿಸುವ ಒಂದು ರಾಜಕೀಯ ತಂತ್ರ ಎಂದೂ ತಜ್ಞರು ಆರೋಪಿಸಿದ್ದಾರೆ. ಆದಾಗ್ಯೂ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಕೆಲವು ತಿದ್ದುಪಡಿಗಳನ್ನು ಮಾಡಿ ಜಾರಿಗೊಳಿಸಲಾಗಿದೆ. ಸತೀಶ್ ಝಾ ಎಂಬ ಲೇಖಕರು ಚೌಥಾ ದುನಿಯಾ ಎಂಬ ಡಿಜಿಟಲ್ ಮಾಧ್ಯಮದ ಲೇಖನದಲ್ಲಿ ಈ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವದ ನರಮಂಡಲದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದು ಬಣ್ಣಿಸುತ್ತಾರೆ. SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೊರಹಾಕಲ್ಪಟ್ಟವರಲ್ಲಿ ಬಹುಪಾಲು ಜನ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು, ಗುತ್ತಿಗೆ ಶಿಕ್ಷಕರು , ವಲಸೆಗಾರರು. ಗ್ರಾಮೀಣ ಬಡವರಾಗಲೀ, ನಗರದ ಮೆಲ್ಪದರದ (Elite) ವ್ಯಕ್ತಿಗಳಾಗಲೀ ಬಾಧಿತರಾಗಿಲ್ಲ. ಚುನಾವಣೆಗೆ ಮುನ್ನಾದಿನ ಮಹಿಳೆಯರ ಖಾತೆಗಳಿಗೆ 1200 ರೂ ನಗದು ಪಾವತಿಯಾಗಿರುವುದೂ ಸಹ ನಿಗೂಢವಾಗಿದೆ ಎಂದು ಸತೀಶ್ ಝಾ ವಾದಿಸುತ್ತಾರೆ.

ಸಾಂಸ್ಥಿಕ ದೌರ್ಬಲ್ಯದ ಪರಿಣಾಮಗಳು
ಚುನಾಯಿತ ಜನಪ್ರತಿನಿಧಿಗಳನ್ನು ಹಣದ ಆಮಿಷದ ಮೂಲಕ, ಸ್ಥಾನ ಹುದ್ದೆಗಳ ಆಶ್ವಾಸನೆಗಳ ಮೂಲಕ ಖರೀದಿಸುವ ಪ್ರಕ್ರಿಯೆಯಿಂದ ಬಹಳ ಮುಂದೆ ಕ್ರಮಿಸಿರುವ ಭಾರತದ ಪ್ರಜಾಪ್ರಭುತ್ವ ಈಗ ಪಕ್ಷಾಂತರ ಅಥವಾ ಆಯಾ ರಾಮ್-ಗಯಾ ರಾಮ್ ಎಂಬ ಪಾರಂಪರಿಕ ಮಾರ್ಗಗಳಿಂದ ದೂರ ಸಾಗಿ ಬಂದಿದೆ. ಕೆಲವು ಶಾಸಕರನ್ನು ಖರೀದಿಸುವ ಬದಲು ಪಕ್ಷಗಳನ್ನೇ ಹೋಳು ಮಾಡಿ ಒಂದು ಬಣವನ್ನು ಸೆಳೆದುಕೊಳ್ಳುವ ಹೊಸ ಮಾದರಿಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಈ ಹೊಸ ತಂತ್ರಗಾರಿಕೆಗಳ ನಡುವೆ ಆಡಳಿತ ನಡೆಸುವ ಸರ್ಕಾರಗಳ ಸಾಧನೆ ಗಣನೆಗೇ ಬರದಂತಾಗಿದೆ. ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ಸಂಸ್ಥೆಗಳು ದುರ್ಬಲವಾದಾಗ ಅಥವಾ ಕೇಂದ್ರ ಸರ್ಕಾರದ ಕೈಗೊಂಬೆಗಳಾದಾಗ ಇಂತಹ ವ್ಯತ್ಯಯಗಳು ಸಂಭವಿಸುತ್ತವೆ. ಇದನ್ನು 1970ರ ದಶಕದ ಇಂದಿರಾಗಾಂಧಿ ಆಳ್ವಿಕೆಯ ಕಾಲದಿಂದಲೂ ಭಾರತ ಗಮನಿಸುತ್ತಾ ಬಂದಿದೆ.
ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಈ ಬದಲಾವಣೆಯ ಮುಖ್ಯ ಫಲಾನುಭವಿಗಳಾಗಿರುವುದರಿಂದ, ಸಾಂಸ್ಥಿಕ ಸಬಲೀಕರಣ ಎನ್ನುವ ಉದಾತ್ತ ಕಲ್ಪನೆಯನ್ನು ಯಾವ ಪಕ್ಷಗಳಲ್ಲೂ ಕಾಣಲಾಗುವುದಿಲ್ಲ. ಎಲ್ಲ ಪಕ್ಷಗಳೂ ಪರಸ್ಪರ ದೋಷಾರೋಪ ಮಾಡುವ ಮೂಲಕ, ಎಲ್ಲ ಸರ್ಕಾರಗಳೂ ಈ ತಪ್ಪುಹೆಜ್ಜೆಗಳನ್ನೇ ಅಧಿಕೃತಗೊಳಿಸಿವೆ ಎನ್ನುವ ವಾಸ್ತವವನ್ನು ಜನಸಾಮಾನ್ಯರಿಗೆ ಮನದಟ್ಟುಮಾಡಿವೆ. ಆಡಳಿತ ಭ್ರಷ್ಟಾಚಾರ ಹಗರಣಗಳ ಹಾಗೆಯೇ ಸಾಂಸ್ಥಿಕ ದುರ್ಬಳಕೆಯೂ ಒಂದು ಹೊಸ ರಾಜಕೀಯ ಸಂಸ್ಕೃತಿಯಾಗಿ ನವ ಭಾರತವನ್ನು ನಿರ್ದೇಶಿಸುತ್ತಿದೆ. ದೇಶದ ಅಮೂಲ್ಯ ನೈಸರ್ಗಿಕ ಸಂಪನ್ಮೂಲಗಳನ್ನು ಔದ್ಯಮಿಕ ಸಾಮ್ರಾಜ್ಯದ ಪ್ರಗತಿಗೆ ಬಳಸಿಕೊಳ್ಳಲು ಮುಕ್ತ ಸ್ವಾತಂತ್ರ್ಯ ಪಡೆಯಲು ನೆರವಾಗುವ ನವ ಉದಾರವಾದಿ ಆರ್ಥಿಕ ನೀತಿ ಕಾರ್ಪೋರೇಟ್ ಬಂಡವಾಳಿಗರನ್ನು ಮೂಲ ಫಲಾನುಭವಿಗಳನ್ನಾಗಿಸಿದೆ. . ಇಲ್ಲಿ ಹೆಚ್ಚು ಅಥವಾ ಕಡಿಮೆ, ಹಿಂದು ಅಥವಾ ಮುಂದು ಎನ್ನುವ Binary ಆಯ್ಕೆಗಳನ್ನಷ್ಟೇ ಕಾಣುವಷ್ಟು ಮಟ್ಟಿಗೆ ಇಡೀ ರಾಜಕೀಯ ವ್ಯವಸ್ಥೆ ಪರಿವರ್ತನೆಯಾಗಿದೆ.

ಕಳೆದ ಐದು ದಶಕಗಳಿಂದಲೂ ಆಡಳಿತಾರೂಢ ಪಕ್ಷಗಳು ಕೇಂದ್ರದ ಸಾಂವಿಧಾನಿಕ ಸಂಸ್ಥೆಗಳನ್ನು ಬಳಕೆಯ ಕೇಂದ್ರಗಳನ್ನಾಗಿ ಮಾಡುವ ಅಥವಾ ಅಧೀನ ಸಂಸ್ಥೆಗಳಾಗಿ ಪರಿಗಣಿಸುವ ರಾಜಕೀಯ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿವೆ. ಈಗ ಚುನಾವಣಾ ಆಯೋಗವೂ ಇದೇ ಸಾಲಿಗೆ ಸೇರಿರುವುದು ವರ್ತಮಾನದ ದುರಂತ. ಆಯೋಗದ ಮುಖ್ಯಸ್ಥರ ನೇಮಕಾತಿ ಪ್ರಕ್ರಿಯೆಯೇ ವಿವಾದಾಸ್ಪದವಾಗಿದ್ದು, ದೇಶದ ಜನರು ಅತ್ಯಂತ ವಿಶ್ವಾಸಾರ್ಹತೆಯಿಂದ ಕಾಣುತ್ತಿದ್ದ ಚುನಾವಣಾ ಆಯೋಗ ಇಂದು ತನ್ನ ಪ್ರಶ್ನಾತೀತ ಸ್ಥಾನವನ್ನು ಕಳೆದುಕೊಂಡಿದೆ. ಇದರ ನೇರ ಪ್ರಾತ್ಯಕ್ಷಿಕೆಯನ್ನು ಬಿಹಾರದ ಚುನಾವಣೆಗಳಲ್ಲಿ ಗುರುತಿಸಬಹುದು. ವಿರೋಧ ಪಕ್ಷಗಳು ತಮ್ಮ ತಾತ್ವಿಕ ಭಿನ್ನಮತಗಳನ್ನು ಬದಿಗಿಟ್ಟು, ಈ ಪ್ರಕ್ರಿಯೆಯ ವಿರುದ್ಧ, ಪ್ರಜಾಪ್ರಭುತ್ವವನ್ನು ಉಳಿಸುವ ದೃಷ್ಟಿಯಿಂದ ಯಾವ ರೂಪದ ದೇಶವ್ಯಾಪಿ ಹೋರಾಟವನ್ನು ರೂಪಿಸುತ್ತವೆ ಎನ್ನುವುದು ಮೂರ್ತ ಪ್ರಶ್ನೆಯಾಗಿದೆ.
ತಂತ್ರಗಾರಿಕೆಯ ವಿನೂತನ ರೂಪ
ಬಿಹಾರದ ಚುನಾವಣೆಗಳಲ್ಲಿ ಬಿಜೆಪಿ ಹಿಂದುತ್ವವನ್ನು ಪ್ರಧಾನವಾಗಿ ಬಳಸದೆಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಈ ಮನ್ವಂತರದ ಸೂಚಕವಾಗಿ ಕಾಣುತ್ತದೆ. ಮತ್ತೊಂದೆಡೆ ತಳಮಟ್ಟದ ಸಮಾಜದಲ್ಲಿ ಅವಕಾಶವಂಚಿತರಾಗಿ ಬದುಕು ಸವೆಸುತ್ತಿರುವ ಜನಸಮುದಾಯಗಳ ಪ್ರಗತಿಯನ್ನೇ ಪ್ರಧಾನ ಗುರಿಯಾಗಿಸಿಕೊಂಡಿರುವ ಎಡಪಕ್ಷಗಳು ಹೀನಾಯ ಸೋಲು ಕಂಡಿರುವುದು ಈ ವಿದ್ಯಮಾನದ ಮತ್ತೊಂದು ಮಗ್ಗುಲು. ಈ ದೃಷ್ಟಿಯಿಂದ ನೋಡಿದಾಗ, ಪ್ರಜಾಸತ್ತಾತ್ಮಕ ಆಳ್ವಿಕೆಗಳಲ್ಲಿ ʼ ಸಾಧನೆ ʼಯನ್ನು ಅಳೆಯುವ ಮಾನದಂಡಗಳೇ ರೂಪಾಂತರಗೊಂಡಿರುವುದು ಕಾಣುತ್ತದೆ. ಸಮಾಜದ ಸರ್ವತೋಮುಖ ಬೆಳವಣಿಗೆ, ಸರ್ವಾಂಗೀಣ ಅಭಿವೃದ್ಧಿ, ಎಲ್ಲರನ್ನೂ ಒಳಗೊಳ್ಳುವ ಆಳ್ವಿಕೆ (Inclusive Governance), ಇಂತಹ ಉನ್ನತ ಮಾರ್ಗಗಳಿಂದ ದೂರ ಸಾಗಿ ಬಂದಿರುವ ನವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಈಗ ಬಹುಮಟ್ಟಿಗೆ ಮಾರುಕಟ್ಟೆ ಶಕ್ತಿಗಳ ಹಿತಾಸಕ್ತಿಗಾಗಿ ಶ್ರಮಿಸುವ ಪರಂಪರೆಗೆ ಸಾಕ್ಷಿಯಾಗುತ್ತಿದೆ. ಸಾಮಾನ್ಯ ಜನರೂ ಸಹ ಇದರ ಒಳಹೊರಗು ಅರ್ಥವಾಗದೆ, ತಾತ್ಕಾಲಿಕ ಅನುಕೂಲತೆಗಳಿಗೆ ಮರುಳಾಗುತ್ತಿದ್ದಾರೆ. ಸುಸ್ಥಿರ ಬದುಕು, ಸುಭದ್ರ ಭವಿಷ್ಯದ ಕನಸುಗಳಿಂದ
ದೂರವಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ನೀತಿಶ್ ಕುಮಾರ್ ಸರ್ಕಾರದ ಮರು ಆಯ್ಕೆ, ಹಿಂದಿನ ಆಳ್ವಿಕೆ ಅಥವಾ ಸಾಧನೆಗಳಿಗಿಂತಲೂ ಚುನಾವಣಾ ತಂತ್ರಗಾರಿಕೆಯನ್ನೇ ಅವಲಂಬಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆಡಳಿತಾರೂಢ ಪಕ್ಷಗಳಿಗೆ ಲಭ್ಯವಾಗುವ ಎಲ್ಲ ಸದಾವಕಾಶಗಳನ್ನೂ ಸಮರ್ಥವಾಗಿ ಬಳಸಿಕೊಂಡಿರುವ ಬಿಜಪಿ-ಜೆಡಿಯು ಮೈತ್ರಿಕೂಟ ಸಾಧಿಸಿರುವ ಗೆಲುವು, ನವ ಭಾರತದ ಪ್ರಜಾಸತ್ತಾತ್ಮಕ ಚುನಾವಣೆಗಳು ಮುಂದಿನ ದಿನಗಳಲ್ಲಿ ಸಾಗಬಹುದಾದ ಹಾದಿಯ ದಿಕ್ಸೂಚಿಯಾಗಿ ಕಾಣುತ್ತಿದೆ. ಈ ದಿಕ್ಸೂಚಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ತಳಸಮಾಜದ ಜನತೆಗೆ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು, ಸಾಂವಿಧಾನಿಕ ಬಾಧ್ಯತೆಗಳನ್ನು ಹಾಗೂ ಉದಾತ್ತ ಗುರಿಯನ್ನು ಮನದಟ್ಟು ಮಾಡುವುದು ವಿರೋಧ ಪಕ್ಷಗಳ ಹಾಗೂ ನಾಗರಿಕ ಸಂಘಟನೆಗಳ ಜವಾಬ್ದಾರಿಯಾಗಿದೆ. ಈ ತಾತ್ವಿಕ ಐಕ್ಯತೆಯನ್ನು ಸಾಧಿಸಲು ಎಡಪಕ್ಷಗಳು ಮುಂಚೂಣಿ ನಾಯಕತ್ವ ವಹಿಸಬೇಕಿದೆ, ಒಂದು ಪೂರ್ವ ಎಚ್ಚರಿಕೆ ಎಂದರೆ ಎಡಪಕ್ಷಗಳು ಒಂದಾಗಬೇಕಿದೆ !!!!!
(ನೀತಿಶ್ ಸರ್ಕಾರದ ಸಾಧನೆ, ವೈಫಲ್ಯಗಳ ಒಳನೋಟ – ಮುಂದಿನ ಭಾಗದಲ್ಲಿ)
-೦-೦-೦-೦-
!











