ಕಳೆದೆರಡು ದಿನಗಳ ಹಿಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಭಾರತ ಕ್ರಿಕೆಟ್ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಅವರ ಮದುವೆ ಮುಂದೂಡಿಕೆಯಾಗಿದೆ. ಸ್ಮೃತಿ ತಂದೆಯ ಅನಾರೋಗ್ಯ ಕಾರಣದಿಂದ ಮದುವೆ ಮುಂದೂಡಿಕೆಯಾಗಿದೆ ಎಂದು ಅಧೀಕೃತವಾಗಿ ತಿಳಿಸಲಾಗಿತ್ತು. ಆದರೆ ನಿನ್ನೆಯಿಂದ ಸ್ಮೃತಿ ಮಂದಾನ ಮತ್ತು ಪಲಾಶ್ ಮುಚ್ಚಲ್ ಮದುವೆ ಸಂಬಂಧಿಸಿದ ಕೆಲವು ವದಂತಿಗಳು ಹರಿದಾಡುತ್ತಿವೆ.

ಮದುವೆ ಮುಂದೂಡಿಕೆಯಾಗುತ್ತಿದ್ದಂತೆ ಸ್ಮೃತಿ ಮಂದಾನ ತಮ್ಮ ಸಾಮಾಜಿಕ ಜಾಲತಾಣದಿಂದ ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ಶಾಸ್ತ್ರದ ಎಲ್ಲಾ ವಿಡಿಯೋ ಫೋಟೋಗಳನ್ನು ತೆಗೆದು ಹಾಕಿದ್ದಾರೆ ಅಲ್ಲದೇ ಸ್ಮೃತಿ ಸ್ನೇಹಿತರು ಕೂಡ ಇದೇ ಕೆಲಸ ಮಾಡಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟ ಬೆನ್ನಲ್ಲೇ ಮಾಡೆಲ್ ಜೊತೆಗಿನ ಪಲಾಶ್ ಮುಚ್ಚಲ್‌ದು ಎನ್ನಲಾದ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಎಲ್ಲೆಡೆ ವೈರಲ್ ಆಗುತ್ತಿವೆ.

ಪಲಾಶ್ ಮುಚ್ಚಲ್ ಹುಡುಗಿ ಒಬ್ಬಳೊಂದಿಗೆ ಫ್ಲರ್ಟ್ ಮಾಡಿದ್ದಾರೆ ಎನ್ನಲಾದ ಚಾಟಿಂಗ್ನ ಸ್ಕ್ರೀನ್ ಶಾಟ್ ಕೂಡ ವೈರಲ್ ಆಗಿದ್ದು, ಇದೇ ವಿಚಾರದಿಂದ ದಿಢೀರ್ ಮದುವೆ ರದ್ದಾಗಿದೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ. ಆದರೆ ಎರಡು ಕುಟುಂಬಗಳಿಂದ ಈ ಬಗ್ಗೆ ಯಾವುದೇ ಅಧೀಕೃತ ಮಾಹಿತಿ ಹರಬಿದ್ದಿರಲಿಲ್ಲ. ಇದೀಗ ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಮುಚ್ಚಲ್ ಮದುವೆ ಮುಂದೂಡಿದ ಬಗ್ಗೆ ಮಾತನಾಡಿದ್ದಾರೆ.

ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಮೃತಿಯ ತಂದೆಯ ಅನಾರೋಗ್ಯ ಕಾರಣದಿಂದ ಮದುವೆ ಮುಂದೂಡಲಾಯಿತು. ಪಲಾಶ್ ಅತ್ತು ಅತ್ತು ಅಸ್ವಸ್ಥನಾದ ಕಾರಣ ಅವನನ್ನು ಸಹ ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂತು. ಸದ್ಯ ಪಲಾಶ್ ಚೇತರಿಸಿಕೊಂಡಿದ್ದಾನೆ. ಎಲ್ಲವೂ ಸರಿ ಹೋದ ಮೇಲೆ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ.












