ಮಹಾರಾಷ್ಟ್ರ: ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ವಿವಾಹ ಕಾರ್ಯಕ್ರಮ ಅನಿರ್ದಿಷ್ಟಾವಧಿಯವರೆಗೆ ಮುಂದೂಡಿಕೆ ಆಗಿದೆ.
ವಧು ಸ್ಮೃತಿ ಮಂಧಾನ ತಂದೆ ಶ್ರೀನಿವಾಸ್ ಮಂಧಾನ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮದುವೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸ್ಮೃತಿ ಅವರ ಮ್ಯಾನೇಜರ್ ತುಹಿನ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಮದೋಲ್ನಲ್ಲಿರುವ ಮಂಧಾನ ಫಾರ್ಮ್ ಹೌಸ್ನಲ್ಲಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ವಿವಾಹ ಮಹೋತ್ಸವಕ್ಕಾಗಿ ತಯಾರಿ ನಡೆದಿತ್ತು. ಆದರೆ ಬೆಳಗ್ಗೆ ಶ್ರೀನಿವಾಸ್ ಮಂಧಾನ ತಿಂಡಿ ತಿನ್ನುತ್ತಿರುವಾಗ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವೇಳೆ ಅವರು ಚೇತರಿಸಿಕೊಳ್ಳಬಹುದು ಎಂದು ಸ್ವಲ್ಪ ಹೊತ್ತು ಕಾದೆವು. ಆದರೆ, ಆರೋಗ್ಯ ಮತ್ತಷ್ಟು ಬಿಗಡಾಯಿಸಲು ತೊಡಗಿತು. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಕೂಡಲೇ ಆಂಬುಲೆನ್ಸ್ ಕರೆದು ಅವರನ್ನು ಆಸ್ಪತ್ರೆಗೆ ಸಾಗಿಸಿದೆವು ಎಂದು ಸ್ಮೃತಿ ಮಂಧಾನ ಮ್ಯಾನೇಜರ್ ತುಹಿನ್ ಮಿಶ್ರಾ ತಿಳಿಸಿದ್ದಾರೆ.
ಇನ್ನು ಇಂಥ ಸಂದರ್ಭದಲ್ಲಿ ಮದುವೆಯಾಗುವುದು ಸ್ಮೃತಿ ಮಂಧಾನಗೆ ಇಷ್ಟ ಇರಲಿಲ್ಲ. ಹೀಗಾಗಿ, ಮದುವೆ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲು ನಿರ್ಧರಿಸಿದ್ದಾರೆ ಎಂದು ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.









