ಬೆಂಗಳೂರು: ವಿಧಾನಸೌಧ ಮುಂದೆ ನಡೆದಿದ್ದ ಗುಂಪು ಗಲಾಟೆ ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿದಂತೆ 13 ಜನರನ್ನ ಪೊಲೀಸರು ಬಂಧಿಸಿದ್ದಾರೆ.
ಕಳೆದ ಭಾನುವಾರ ರಾತ್ರಿ ವಿಧಾನಸೌಧದ ಮುಂದೆ ನೇಪಾಳಿ ಮೂಲದ ಯುವಕರ ಗುಂಪು ಪರಸ್ಪರ ಹೊಡೆದಾಡಿಕೊಂಡಿದ್ದರು ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 13 ಮಂದಿ ನೇಪಾಳಿ ಮೂಲದ ಯುವಕರನ್ನ ಬಂಧಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳಿಗೆ ರೀಲ್ಸ್ ಮಾಡಿ ಅಪ್ ಲೋಡ್ ಮಾಡುವ ಹವ್ಯಾಸವಿದ್ದು, ಬೆಂಗಳೂರಿನ ಅನೇಕ ಕಡೆ ಇದೇ ರೀತಿ ವಿಡಿಯೋ ಮಾಡ್ತಿದ್ದರು. ಆ ವಿಡಿಯೋಗಳು ನೇಪಾಳದಲ್ಲಿ ಹೆಚ್ಚು ವೈರಲ್ ಆಗ್ತಿತ್ತು. ಆದರೆ ಒಂದು ತಿಂಗಳ ಹಿಂದೆ ಎರಡು ಗುಂಪುಗಳ ಮಧ್ಯೆ ಮೊಬೈಲ್ ಮತ್ತು ಹುಡುಗಿ ವಿಚಾರಕ್ಕೆ ಗಲಾಟೆಯಾಗಿತ್ತು. ಈ ಸಂಬಂಧ ಒಂದು ಗುಂಪಿನ ನಾಲ್ವರನ್ನ ಪೊಲೀಸರು ಬಂಧಿಸಿದ್ದರು. ಭಾನುವಾರ ಒಂದು ಗುಂಪು ವಿಧಾನಸೌಧ ಮೆಟ್ರೋ ನಿಲ್ದಾಣ ಬಳಿ ಸೇರಿತ್ತು. ಇದೇ ವೇಳೆ ಬಂದ ಮತ್ತೊಂದು ಗುಂಪು ಹಳೇ ದ್ವೇಷಕ್ಕೆ ಗಲಾಟೆ ಮಾಡಿದೆ. ಈ ವೇಳೆ ಗುಂಪು ಗುಂಪಾಗಿ ಹೊಡೆದಾಡಿದ್ದಾರೆ. ಗಲಾಟೆ ಮಧ್ಯೆ ಪೊಲೀಸರು ಮಧ್ಯಪ್ರವೇಶ ಮಾಡಿ ಲಾಠಿ ಚಾರ್ಜ್ ಮಾಡಿದ್ದರು.
ಘಟನೆ ಬಳಿಕ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಕೇಸ್ ದಾಖಲಿಸಿ ತನಿಖೆ ನಡೆಸಿದ ಪೊಲೀಸರು, ನಗರದ ವಿವಿಧ ಭಾಗದಲ್ಲಿ ವಾಸ ಮಾಡ್ತಿದ್ದ 13 ಜನರನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.









