ಬೆಂಗಳೂರು: ಬಿಎಂಟಿಸಿ ಚಾಲಕರ ಅಜಾಗರೂಕತೆಗೆ ಅಮಾಯಕ ಪಾದಾಚಾರಿಗಳು ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜಾಜಿನಗರದಲ್ಲಿ ಬಿಎಂಟಿಸಿ ಬಸ್‌ಗೆ 9 ವರ್ಷದ ಬಾಲಕಿ ಬಲಿಯಾದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ.

ಬಿಎಂಟಿಸಿ ಬಸ್ ಡಿಕ್ಕಿಯಾಗಿ ತರಕಾರಿ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಡಿವಾಳ ಬಸ್ ನಿಲ್ದಾಣದ ಬಳಿ ನಡೆದಿದೆ. ವೆಂಕಟರಾಮಪ್ಪ (65 ) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ವೆಂಕಟರಾಮಪ್ಪ ತರಕಾರಿ ವ್ಯಾಪಾರಿಯಾಗಿದ್ದು, ಎಂದಿನಂತೆ ಇಂದು ಸಹ ಮಡಿವಾಳದ ಮಾರುಕಟ್ಟೆಗೆ ತರಕಾರಿ ತರಲು ಹೋಗಿದ್ದರು. ಈ ವೇಳೆ ಬಿಎಂಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಎರಡು ವಾಹಗಳಿಗೆ ಗುದ್ದಿ ಬಳಿಕ ವೃದ್ಧರಿಗೆ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ವೆಂಕಟರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಘಟನಾ ಸಂಬಂಧ ದಕ್ಷಿಣ ವಿಭಾಗದ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.











