ಚಿಕ್ಕಮಗಳೂರು: ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಸಿಎಂ, ಡಿಸಿಎಂ ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ – ಸಚಿವ ಜಾರ್ಜ್

ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನ ಕಾರ್ಯಕ್ರಮದಲ್ಲಿ ಇಂಧನ ಹಾಗೂ ಚಿಕ್ಕಮಗಳೂರು ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ತಮ್ಮ ಭಾಷಣವನ್ನು ಸಚಿವ ರಾಮಲಿಂಗಾರೆಡ್ಡಿ ಅವರ ಗುಣಗಾನದಿಂದ ಆರಂಭಿಸಿದರು. ರಾಮಲಿಂಗಾರೆಡ್ಡಿ ಅವರು ಅಜಾತಶತ್ರು. ಯಾರೊಂದಿಗೂ ದ್ವೇಷವಿಲ್ಲದೆ, ಯಾವುದೇ ವಿಚಾರದಲ್ಲಿ ಸಣ್ಣತನವಿಲ್ಲದೆ ತಮ್ಮ ಕೆಲಸವನ್ನು ನಿರ್ವಹಿಸುತ್ತಾರೆ. ಅವರು ಕ್ಯಾಬಿನೆಟ್‌ಗೆ ತರುವ ವಿಷಯಗಳು ರಚನಾತ್ಮಕವಾಗಿರುವುದರಿಂದ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಅವರ ಪ್ರಸ್ತಾವನೆಗೆ ಇಲ್ಲ ಎನ್ನುವುದೇ ಇಲ್ಲ ಎಂದು ಜಾರ್ಜ್ ಹೇಳಿದ್ರು.

ಚಿಕ್ಕಮಗಳೂರು ಬಸ್ ಸ್ಟ್ಯಾಂಡ್ ಕಾಮಗಾರಿಯ ಪ್ರಸ್ತಾವನೆ ಬಂದಾಗಲೂ ಸಹ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಏಕೆಂದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮಾರ್ಗವನ್ನು ತೋರಿಸಿದ ಚಿಕ್ಕಮಗಳೂರಿನ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಪ್ರೀತಿ ಇದೆ. ಹೀಗಾಗಿ, ಚಿಕ್ಕಮಗಳೂರಿನ ಎಲ್ಲಾ ಕೆಲಸಗಳನ್ನು ಹೆಮ್ಮೆಯಿಂದ ಮಾಡುತ್ತೇವೆ.

ಜಿಲ್ಲೆಯಲ್ಲಿರುವ ಐವರು ಹಿರಿಯ ಶಾಸಕರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಮನವಿ ಮಾಡಿರುವುದಾಗಿ ತಿಳಿಸಿದರು. 1971 ರಿಂದಲೂ ತಮಗೆ ಚಿಕ್ಕಮಗಳೂರಿನ ಮೇಲೆ ವಿಶ್ವಾಸವಿದೆ ಮತ್ತು ಇಲ್ಲಿನ ಜನ ಒಳ್ಳೆಯವರು. ಶಂಕುಸ್ಥಾಪನೆಗೊಂಡಿರುವ ಈ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಯನ್ನು 14 ತಿಂಗಳಲ್ಲಿ ಮುಗಿಸಿ, ಉದ್ಘಾಟನೆಯನ್ನು ಇನ್ನಷ್ಟು ದೊಡ್ಡ ಸಮಾರಂಭವನ್ನಾಗಿ ಆಚರಿಸುವ ಹಕ್ಕು ನಮಗಿದೆ ಎಂದು ಹೇಳಿದರು.






