ಬೆಂಗಳೂರು: ತುಮಕೂರು ಜನರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಸಂಸ್ಥೆ ಕೊನೆಗೂ ಸಿಹಿ ಸುದ್ದಿ ನೀಡಿದ್ದು, ಬೆಂಗಳೂರು-ತುಮಕೂರು ಮೆಟ್ರೋ ನಿರ್ಮಾಣದ ಬಗ್ಗೆ ಮಹತ್ವದ ಅಪ್ಡೇಟ್‌ವೊಂದನ್ನು ನೀಡಿದೆ.

ನಮ್ಮ ಮೆಟ್ರೋ ರೈಲು ಸಂಪರ್ಕವನ್ನು ಮಾದಾವರದಿಂದ ತುಮಕೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೂ ವಿಸ್ತರಿಸಲು ಬಿಎಂಆರ್‌ಸಿಎಲ್ ವಿಸ್ತ್ರತವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಡರ್ ಕರೆದಿದೆ. ಬೆಂಗಳೂರಿನ ತುಮಕೂರು ರಸ್ತೆಯ ಮಾದಾವರದಿಂದ ನೆಲಮಂಗಲ, ದಾಬಸ್‌ಪೇಟೆ ಮೂಲಕ ತುಮಕೂರು ನಗರದವರೆಗೂ ಮೆಟ್ರೋ ಸಂಪರ್ಕ ವಿಸ್ತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಒಟ್ಟು ಸುಮಾರು 59.6 ಕಿಲೋ ಮೀಟರ್ ಮಾರ್ಗದಲ್ಲಿ ಮೆಟ್ರೋ ವಿಸ್ತರಣೆಯಾಗಲಿದ್ದು, ಈ ಮಾರ್ಗದಲ್ಲಿ 25 ನಿಲ್ದಾಣಗಳನ್ನು ನಿರ್ಮಿಸಬೇಕಾಗುತ್ತದೆ. ಹೀಗಾಗಿ ಈ ಯೋಜನೆಯ ವಿಸ್ತ್ರತವಾದ ಯೋಜನಾ ವರದಿ ಸಿದ್ಧಪಡಿಸಲು ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. ಒಟ್ಟಾರೆಯಾಗಿ ಕಲ್ಪತರು ನಾಡಿನ ಜನರ ಬಹುದಿನದ ಬೇಡಿಕೆಯಾದ ಬೆಂಗಳೂರು-ತುಮಕೂರು ಮೆಟ್ರೋ ನಿರ್ಮಾಣಕ್ಕೆ ವೇಗ ಸಿಕ್ಕಂತಾಗಿದೆ.












