ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋ ವೈರಲ್ ಸಂಬಂಧ ಅಮಾನತು ಆಗಿದ್ದ ಮುಖ್ಯ ಜೈಲು ಅಧೀಕ್ಷಕರ ಜಾಗಕ್ಕೆ ತಾತ್ಕಾಲಿಕವಾಗಿ IPS ಅಧಿಕಾರಿ ಅಂಶುಕುಮಾರ್ (IPS Officer Amshukumar) ನೇಮಕ ಮಾಡಲಾಗಿದೆ̤

ಅಂಶುಕುಮಾರ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಜೈಲಿನಲ್ಲಿ ಕೆಲ ಬದಲಾವಣೆ ತಂದಿದ್ದಾರೆ. ಈಗಾಗಲೇ ಜೈಲಿನ ಬಗ್ಗೆ ಅನೇಕ ಆರೋಪಗಳಿದ್ದು, ಮುಂದೆ ಜೈಲಿನಲ್ಲಿ ಅಕ್ರಮ ಎಸಗಿದ್ರ ಅಮಾನತು ಮಾಡುವುದಾಗಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಜೈಲಿನಲ್ಲಿ ಬೀಡಿ, ಸಿಗರೇಟ್ ಬಂದ್ ಮಾಡಲಾಗಿದ್ದು, ಜೈಲು ಕೊಠಡಿಗಳಲ್ಲಿ ಸೊಳ್ಳೆ ಬರುತ್ತೆ ಅಂತಾ ಹಾಕಲಾಗಿದ್ದ ಕರ್ಟನ್ ತೆಗೆಯಲಾಗಿದೆ. ಯಾಕೆಂದ್ರೆ ಅದೇ ಕರ್ಟನ್ ಮರೆಯಲ್ಲಿ ಮೊಬೈಲ್ ಚಾರ್ಜ್, ಬೀಡಿ, ಸಿಗರೇಟ್ ಇಡುತ್ತಿದ್ದರು. ಹಾಗಾಗಿ ಪ್ರತಿ ಆರೋಪಿ ಹೊರಗಿನಿಂದ ಜೈಲು ಸಿಬ್ಬಂದಿಗೆ ಕಾಣುವಂತೆ ಕರ್ಟನ್ ತೆರವು ಮಾಡಲಾಗಿದೆ.

ಇದರ ಜೊತೆಗೆ ಕೊಠಡಿಗಳಲ್ಲಿ ಅನಧಿಕೃತವಾಗಿ ಇಡಲಾಗಿದ್ದ ಎಲೆಕ್ಟ್ರಿಕ್ ಸ್ಟೌ ಗಳನ್ನ ತೆರವು ಮಾಡಲು ಅಂಶು ಕುಮಾರ್ ಸೂಚನೆ ಕೊಟ್ಟಿದ್ದಾರೆ. ಹಾಗೆ ಕೊಠಡಿಗಳಲ್ಲಿ ನೀಡಲಾಗಿರುವ ಟಿವಿಗಳಲ್ಲಿ ನಿಯಮಾನುಸಾರ ನೀಡಬರಬಹುದಾದ ಚಾನಲ್ ಗಳು ಮಾತ್ರ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಜೈಲು ಮುಖ್ಯ ಅಧೀಕ್ಷಕ ಅಂಶು ಕುಮಾರ್ ಜೈಲು ಸುಧಾರಣೆಗೆ ಮುಂದಾಗಿದ್ದಾರೆ.













