• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Children’s Day 2025: ಮಕ್ಕಳು-ದಿನಾಚರಣೆ ಮತ್ತು ಸೂಕ್ಷ್ಮ ಸಂವೇದನೆ

ನಾ ದಿವಾಕರ by ನಾ ದಿವಾಕರ
November 14, 2025
in Top Story, ಜೀವನದ ಶೈಲಿ, ವಿಶೇಷ
0
Children’s Day 2025: ಮಕ್ಕಳು-ದಿನಾಚರಣೆ ಮತ್ತು ಸೂಕ್ಷ್ಮ ಸಂವೇದನೆ
Share on WhatsAppShare on FacebookShare on Telegram
ADVERTISEMENT

ಹಿಂತಿರುಗಿ ನೋಡದೆ, ಅಂದರೆ ಗತ ಹೆಜ್ಜೆ ಗುರುತುಗಳನ್ನು ಮತ್ತೆ ನೆನಪಿಸಿಕೊಳ್ಳದೆ, ಭವಿಷ್ಯದ ಬಗ್ಗೆ ಹೆಚ್ಚು ಆಲೋಚನೆ ಮಾಡದೆ, ವರ್ತಮಾನದ ಸಂಭ್ರಮಗಳ ನಡುವೆ ಹುಟ್ಟುಹಬ್ಬ, ವಾರ್ಷಿಕ ತಿಥಿ, ಶತಮಾನೋತ್ಸವ ಇವೇ ಮುಂದಾದ ದಿನಾಚರಣೆಗಳನ್ನು ಸಂಭ್ರಮದಿಂದ ಆಚರಿಸುವ ಒಂದು ಮಾದರಿಯನ್ನು ಭಾರತ ಸ್ವತಂತ್ರ ಬಂದಾಗಿನಿಂದಲೂ ಅನುಸರಿಸುತ್ತಾ ಬಂದಿದೆ. ಸರ್ಕಾರಗಳು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಇಂತಹ ಮಹತ್ವದ ದಿನಗಳನ್ನು ಸಾರ್ವಜನಿಕರ ನಡುವೆ ಆಚರಿಸಿ, ಸಾಮಾನ್ಯ ಜನತೆಗೆ , ಅವುಗಳ ಹಿಂದಿನ ವ್ಯಕ್ತಿ ವಿಶೇಷ, ಚಾರಿತ್ರಿಕ ಮಹತ್ವ ಮತ್ತು ವರ್ತಮಾನದ ಪ್ರಸ್ತುತತೆಯನ್ನು ತಲುಪಿಸುವಲ್ಲಿ ಯಶಸ್ವಿಯಾಗಿರುವುದು ವಾಸ್ತವ. ಚಾರಿತ್ರಿಕ-ಪೌರಾಣಿಕ ವ್ಯಕ್ತಿಗಳನ್ನು ಜಾತಿ ಸೂಚಕವಾಗಿ ಕಾಣುವ ಮೂಲಕ, ಈ ದಿನಾಚರಣೆಗಳೂ ಸಹ ನಮ್ಮ ಸಮಾಜದಷ್ಟೇ ವಿಘಟಿತವಾಗುತ್ತಾ ಸಾಗಿದೆ.

ಚಾರಿತ್ರಿಕವಾಗಿ ಆಗಲೀ, ವರ್ತಮಾನದಲ್ಲಾಗಲೀ ಉತ್ತರದಾಯಿತ್ವದ ಕಲ್ಪನೆಯನ್ನೇ ಮರೆತು ಸಾಗುತ್ತಿರುವ ನವ ಭಾರತದಲ್ಲಿ ಈ ಹತ್ತಾರು ಆಚರಣೆಗಳ ನಡುವೆ ಪ್ರಧಾನವಾಗಿ ಕಾಣಬೇಕಿರುವುದು, ನವಂಬರ್‌ 14ರ ಮಕ್ಕಳ ದಿನಾಚರಣೆ. ಭಾರತದ ಪ್ರಥಮ ಪ್ರಧಾನಿ ಜವಹರಲಾಲ್‌ ನೆಹರೂ ಅವರ ಜನ್ಮದಿನ ಈ ಆಚರಣೆಗೆ ನಿಮಿತ್ತವಾದರೂ, ಭಾರತ ಸಾಗುತ್ತಿರುವ ಆರ್ಥಿಕ ಹಾದಿ, ಸಾಮಾಜಿಕ ಪಯಣ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳ ನಡುವೆ ನಿಂತು ನೋಡಿದಾಗ, ಜಾತಿ ಮತ ಧರ್ಮ ಭಾಷೆಗಳ ಅಸ್ಮಿತೆಯ ಸೋಂಕಿಲ್ಲದೆ ಅಚರಿಸಲ್ಪಡುವ ʼಮಕ್ಕಳ ದಿನಾಚರಣೆ ʼ ಮೂಲತಃ ಡಿಜಿಟಲ್‌ ಭಾರತದ ಮಕ್ಕಳನ್ನು ಪ್ರತಿನಿಧಿಸುತ್ತದೆ. ತಾತ್ವಿಕವಾಗಿ ಇದು ದೇಶದ ಸಮಸ್ತ ಮಕ್ಕಳನ್ನು ಒಳಗೊಳ್ಳುವುದಾದರೂ, ಆಚರಣಾತ್ಮಕವಾಗಿ ಇಲ್ಲಿ ನಿರ್ಲಕ್ಷಿತ, ಅವಕಾಶವಂಚಿತ, ಅಂಚಿನಲ್ಲಿರುವ ಹಾಗೂ ಬಾಲ್ಯದ ಸೌಂದರ್ಯದ ಅರ್ಥವನ್ನೇ ಅರಿಯದ ಬೃಹತ್‌ ಸಂಖ್ಯೆಯ ಮಕ್ಕಳ ಅನುಪಸ್ಥಿತಿ ಎದ್ದು ಕಾಣುತ್ತದೆ.

ಅಗೋಚರ ಮಕ್ಕಳ ಸಮಾಜ

ಈ ದೃಷ್ಟಿಯಿಂದ ನೋಡಿದಾಗ, ಇಂದಿನ ಭಾರತದಲ್ಲಿ ತಳಸಮಾಜದ ಕಡೆ ಹೊರಳಿದರೆ, ಮಕ್ಕಳ ದಿನಾಚರಣೆ ಎಂದರೆ ʼ ಯಾವ ಮಕ್ಕಳು ʼ ಎಂಬ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ ನೆಹರೂ ಯುಗದಿಂದ ಆರು ದಶಕಗಳನ್ನು ದಾಟಿ ಬಂದಿರುವ ಭಾರತದ ಮಕ್ಕಳಿಗೆ ಸಮಕಾಲೀನ ಜೀವನಾದರ್ಶ ಮಾದರಿಗಳನ್ನು ಗುರುತಿಸಲಾಗುವುದಿಲ್ಲ. ಶಿಕ್ಷಣ ವ್ಯವಸ್ಥೆಯ ಫಲಾನುಭವಿ ಮಕ್ಕಳಿಗೆ ಕೊಂಚ ಮಟ್ಟಿಗಾದರೂ, ಇತಿಹಾಸ ಮತ್ತು ಸಂಸ್ಕೃತಿಯ ಪರಿಚಯವಾಗಿರಲು ಸಾಧ್ಯ. ಆದರೆ ಮೂಲತಃ ಶಿಕ್ಷಣದಿಂದಲೇ ವಂಚಿತರಾಗುತ್ತಿರುವ, ಕೌಟುಂಬಿಕ ಬಡತನ ಮತ್ತು ಹಸಿವೆಯನ್ನು ನೀಗಿಸಲು ಶಾಲಾ ಶಿಕ್ಷಣವಿಂದ ಬಾಲ್ಯದಲ್ಲೇ ನಿರ್ಗಮಿಸುವ ಹಾಗೂ ಇಂದಿಗೂ ಚಾಲ್ತಿಯಲ್ಲಿರುವ ನಿಷೇಧಿತ ಬಾಲ ಕಾರ್ಮಿಕ ಪದ್ಧತಿಯಲ್ಲಿ ಶೋಷಣೆಗೊಳಗಾಗುತ್ತಿರುವ ಮಕ್ಕಳಿಗೆ ಈ ಅರಿವು ಸಹ ಇರುವುದಿಲ್ಲ.

ಮತ್ತೊಂದೆಡೆ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೂ ಆಧುನಿಕ ಭಾರತ ಅಥವಾ ಸ್ವಾತಂತ್ರ್ಯೋತ್ತರ ಭಾರತ ಆದರ್ಶಪ್ರಾಯವಾದ ಮೌಲ್ಯಾಧಾರಿತ ಮಾದರಿ ವ್ಯಕ್ತಿತ್ವಗಳನ್ನು ಸೃಷ್ಟಿಸಿಲ್ಲ. 1980ರವರೆಗಿನ ಅವಧಿಯಲ್ಲಿ ಸಾಮಾಜಿಕ ಚಳುವಳಿಗಳು, ರಂಗಭೂಮಿ-ಸಾಹಿತ್ಯ-ಸಿನೆಮಾ-ಕಲೆಯ ಅಭಿವ್ಯಕ್ತಿಗಳು ಕೆಲವು ಮಾದರಿ ವ್ಯತ್ತಿತ್ವಗಳನ್ನಾದರೂ ಸೃಷ್ಟಿಸಿರುವುದು ವಾಸ್ತವ. ಆದರೆ ತದನಂತರದ ನವ ಉದಾರವಾದಿ-ಕಾರ್ಪೋರೇಟ್‌ ಮಾರುಕಟ್ಟೆ ನಿರ್ದೇಶಿತ ಸಮಾಜದಲ್ಲಿ ಇಂತಹ ವ್ಯಕ್ತಿತ್ವಗಳನ್ನು ಕಾಣುವುದು ಕಷ್ಟ. ಈ ಎರಡೂ ಯುಗಗಳಲ್ಲಿ, ಇದೇ ಸಮಾಜದಿಂದಲೇ ಹುಟ್ಟಿಕೊಂಡ ಮಾದರಿ ವ್ಯಕ್ತಿತ್ವಗಳನ್ನು ಶೋಧಿಸಿದಾಗ, ಅಲ್ಲಿ ನಮಗೆ ರಾಜಕೀಯ ವಲಯದಿಂದ ಯಾವುದೇ ದಾರ್ಶನಿಕ ಅಥವಾ ದೂರದರ್ಶಿತ್ವದ ವ್ಯಕ್ತಿಗಳನ್ನು ಕಾಣಲಾಗುವುದಿಲ್ಲ. ಈ ಕೊರತೆಯನ್ನೇ ವರ್ತಮಾನದ ಡಿಜಿಟಲ್‌ ಯುಗದಲ್ಲಿ ಮಾರುಕಟ್ಟೆ ಅದ್ಭುತವಾಗಿ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ.

ಮಕ್ಕಳಿಗಾಗಿ ಒಂದು ದಿನ

ಈ ವ್ಯತ್ಯಯಗಳ ನಡುವೆ ನಾವು ಮತ್ತೊಂದು ದಿನಾಚರಣೆಯನ್ನು ಮಕ್ಕಳ ಹೆಸರಿನಲ್ಲಿ ಆಚರಿಸುತ್ತಿದ್ದೇವೆ. ಈ ಮಕ್ಕಳ ಪೈಕಿ ಲೈಂಗಿಕ ದೌರ್ಜನ್ಯಕ್ಕೊಳಗಾದ, ಅತ್ಯಾಚಾರಕ್ಕೊಳಗಾದ, ತೀವ್ರ ಶೋಷಣೆಗೊಳಗಾಗುತ್ತಿರುವ, ಚಿಗುರುವ ವಯಸ್ಸಿನಲ್ಲಿ ದುಡಿಮೆಯಲ್ಲಿ ತೊಡಗಿ ಬೆವರು ಸುರಿಸುತ್ತಿರುವ ಮಕ್ಕಳನ್ನು ಗುರುತಿಸಲು ಸಾಧ್ಯವೇ ? ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 2022-24ರ ಅವಧಿಯಲ್ಲಿ ನಡೆದಿರುವ 43,052 ದೌರ್ಜನ್ಯ ಪ್ರಕರಣಗಳ ಪೈಕಿ ಅಪ್ರಾಪ್ತರ ಮೇಲೆ ದೌರ್ಜನ್ಯ ನಡೆದ (ಪೋಕ್ಸೋ ಕಾಯ್ದೆಯ) ಸಂಖ್ಯೆ 10,510. ಬಾಲ್ಯ ವಿವಾಹಗಳು 417 , ಬಾಲಕಾರ್ಮಿಕರ ಸಂಖ್ಯೆ 288 ಪತ್ತೆಯಾಗಿವೆ. ರಾಜ್ಯದಲ್ಲಿ 2023-25ರ ಅವಧಿಯಲ್ಲಿ 80,813 ಬಾಲ ಗರ್ಭಿಣಿಯರನ್ನು ಪತ್ತೆ ಹಚ್ಚಲಾಗಿದೆ. ಮಕ್ಕಳ ಅಪಹರಣ ಪ್ರಕರಣಗಳೂ ಏರುಗತಿಯಲ್ಲಿದ್ದು ಕಳೆದ ಐದು ವರ್ಷಗಳಲ್ಲಿ 14,478 ಪ್ರಕರಣಗಳು ದಾಖಲಾಗಿವೆ. 2017-22ರ ಅವಧಿಯಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಶೇಕಡಾ 94ರಷ್ಟು ಹೆಚ್ಚಾಗಿರುವುದನ್ನು ʼ ಇನ್‌ಟು ದ ಲೈಟ್‌ ಇಂಡೆಕ್ಸ್‌ 2025 ʼ ಎಂಬ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸಾಲದೆಂಬಂತೆ ಜೀವ ತಳೆಯುವ ಮುನ್ನವೇ ಹೆಣ್ಣನ್ನು ಭ್ರೂಣಾವಸ್ಥೆಯಲ್ಲೇ ಹೊಸಕಿ ಹಾಕುವ ಕ್ರೂರ ಸಮಾಜವನ್ನೂ ನೋಡುತ್ತಿದ್ದೇವೆ. ಈ ಎಲ್ಲ ಪಾತಕ ಕೃತ್ಯಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುವುದು ಹೆಣ್ಣು ಜೀವಗಳೇ ಎನ್ನುವುದು, ನಮ್ಮ ಸಮಾಜ ಚಲಿಸುತ್ತಿರುವ ದಿಕ್ಕನ್ನು ಸೂಚಿಸುತ್ತದೆ.ಇನ್ನು ಸಾರ್ವತ್ರಿಕ ಶಿಕ್ಷಣದ ಸಾಂವಿಧಾನಿಕ ಕಲ್ಪನೆ ಹಾಳೆಗಳಲ್ಲೇ ಉಳಿದಿರುವುದರಿಂದ, ಶಾಲೆಗೆ ದಾಖಲಾದ ಮಕ್ಕಳು ಮಧ್ಯದಲ್ಲೇ ವಿದ್ಯಾಭ್ಯಾಸವನ್ನು ತೊರೆದು, ದುಡಿಮೆಯ ಕಡೆಗೆ ವಾಲುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. 2023-24ರಲ್ಲಿ ಮಾಧ್ಯಮಿಕ ಹಂತದಲ್ಲಿ ಶಾಲೆಯನ್ನು ತೊರೆದ ಮಕ್ಕಳ ಸಂಖ್ಯೆ ಶೇಕಡಾ 22.2ರಷ್ಟಿದೆ. 2022-23ರ ಅವಧಿಯಲ್ಲಿ ಒಟ್ಟು 18,461 ಮಕ್ಕಳು ಶಾಲೆಯನ್ನು ತೊರೆದಿದ್ದಾರೆ. ವಿದ್ಯಾಭ್ಯಾಸವನ್ನು ತೊರೆದ ಬಹುಪಾಲು ಮಕ್ಕಳು ಗ್ರಾಮೀಣ ಪ್ರದೇಶದಿಂದಲೇ ಬಂದಿರುತ್ತಾರೆ, ತಮ್ಮ ಜೀವನ ನಿರ್ವಹಣೆಗಾಗಿ ದುಡಿಮೆಯನ್ನು ಅವಲಂಬಿಸುವ ಕುಟುಂಬಗಳಿಗೆ ಸೇರಿರುತ್ತಾರೆ. ತಮಿಳುನಾಡಿನ ಶಿವಕಾಶಿಯಲ್ಲಿರುವ ಪಟಾಕಿ ತಯಾರಿಸುವ ಕಾರ್ಖಾನೆಗಳನ್ನು ಒಳಹೊಕ್ಕು ನೋಡಿದಾಗ, ಕಾನೂನಿನ ಕಣ್ಣು ತಪ್ಪಿಸಿ ಮಕ್ಕಳನ್ನು ದುಡಿಮೆಗೆ ಹಚ್ಚುವ ಪ್ರಕರಣಗಳು ಹೇರಳವಾಗಿ ಕಾಣುತ್ತವೆ.

DK Shivakumar: ರಾಜ್ಯ ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ..!

ಈ ಶಿಕ್ಷಣ ವಂಚಿತ ಅಸಹಾಯಕ ಮಕ್ಕಳೇ ಅಪಹರಣ, ದೌರ್ಜನ್ಯ, ಶೋಷಣೆಗೊಳಗಾಗುವುದು ಹೆಚ್ಚು. ಆದರೆ ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಮಕ್ಕಳನ್ನು ಅಧ್ಯಾತ್ಮಿಕ ಮಠಗಳಲ್ಲೂ, ವಿದ್ಯಾರ್ಥಿ ಹಾಸ್ಟೆಲುಗಳಲ್ಲೂ, ಶಾಲೆಗಳ ಕೊಠಡಿಗಳಲ್ಲೂ ಕಾಣಬಹುದು. ಶಿಕ್ಷಕ, ತರಬೇತುದಾರ, ಮಠಾಧಿಪತಿ, ರಾಜಕೀಯ ನಾಯಕರು ಹೀಗೆ ಯಾವುದೇ ವ್ಯತ್ಯಾಸವಿಲ್ಲದೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ. ಇದು ನಾಚಿಕೆಗೇಡಿನ ವಿಚಾರವಾದರೂ, ಯಾವುದೇ ರಾಜಕೀಯ ಪಕ್ಷಗಳಿಗೆ, ಸರ್ಕಾರಗಳಿಗೆ ಅಥವಾ ಚುನಾಯಿತ/ಪರಾಜಿತ ಜನಪ್ರತಿನಿಧಿಗಳಿಗೆ ಇದು ಗಂಭೀರ ಸಮಸ್ಯೆ ಎನಿಸಿಯೇ ಇಲ್ಲ. ಅಥವಾ ಬದುಕುವ ಹಕ್ಕಿನಿಂದಲೇ ವಂಚಿತರಾಗುತ್ತಿರುವ ಇಂತಹ ಅಸಂಖ್ಯಾತ ಮಕ್ಕಳ ನೋವು, ಸಂಕಟಗಳಿಗೆ ದನಿಯಾಗುವ ʼ ಮಹಾ ಅಭಿಯಾನಗಳು ʼ ಯಾವ ರಾಜಕೀಯ ಪಕ್ಷಕ್ಕೂ ಕಾರ್ಯಸೂಚಿಯಾಗುವುದಿಲ್ಲ.

ತೀರಾ ಇತ್ತೀಚಿನ ಘಟನೆಯನ್ನೇ ನೋಡಿದರೆ, ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆಯ ಎದುರಿನಲ್ಲೇ ಇರುವ ವಸ್ತುಪ್ರದರ್ಶನ ಆವರಣದಲ್ಲಿ, 9 ವರ್ಷದ, ಬಲೂನು ಮಾರುವ, ಅಲೆಮಾರಿ ಸಮುದಾಯದ ಬಾಲೆ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿತ್ತು. ಇದರ ವಿರುದ್ಧ ದನಿ ಎತ್ತಿದವರೆಂದರೆ ಮಹಿಳಾ ಸಂಘಟನೆಗಳು, ಪ್ರಗತಿಪರ ವ್ಯಕ್ತಿಗಳು. ಇದನ್ನು ದಾಟಿ ನೋಡಿದಾಗ ಮೈಸೂರಿನ ಸಂಸದರಾಗಲೀ, ಶಾಸಕರಾಗಲೀ ಅಥವಾ ಪರಾಜಿತ ಜನಪ್ರತಿನಿಧಿಗಳಾಗಲೀ, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಅಪರಾಧಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಸ್ಪಂದಿಸಿಲ್ಲ. ಈ ಹೃದಯವಿದ್ರಾವಕ ಘಟನೆ ಸಾಂಸ್ಕೃತಿಕ ನಗರಿಯ ಸಾರ್ವಜನಿಕ ಪ್ರಜ್ಞೆಯನ್ನು ಕದಡಿಯೂ ಇಲ್ಲ. ಎರಡು ತಿಂಗಳ ಹಿಂದೆ ಸಂಭವಿಸಿದ ಈ ಕ್ರೌರ್ಯ ಬಹುಶಃ ಈಗ ಚರಿತ್ರೆಯ ಪುಟಗಳಿಗೆ ಸೇರಲು ಸಿದ್ಧವಾಗಿರುತ್ತದೆ.

ಡಿಜಿಟಲ್‌ ಯುಗದ ಮತ್ತೊಂದು ಮುಖ

ಈ ಅಸೂಕ್ಷ್ಮತೆಗಳ ನಡುವೆಯೇ ನವ ಭಾರತದ, ಆಧುನಿಕ ಸಮಾಜದ, ಡಿಜಿಟಲ್‌ ಯುಗದ ಮಕ್ಕಳು ಭಯಭೀತಿಯಿಂದ ಜೀವನ ಸಾಗಿಸುವಂತಾಗಿವೆ. ಹನ್ನೆರಡು ವರ್ಷಗಳು ಕಳೆದರೂ ಭೀಕರ ಅತ್ಯಾಚಾರ-ಹತ್ಯೆಗೀಡಾದ ಸೌಜನ್ಯ ಎಂಬ ಬಾಲೆಗೆ ನ್ಯಾಯ ದೊರಕಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಅಂತಿಮ ನ್ಯಾಯಕ್ಕಾಗಿ ವರ್ಷಗಟ್ಟಳೆ ಕಾಯುತ್ತಿರುವ ಇಂತಹ ಅಮಾಯಕ ಮಕ್ಕಳು ಮತ್ತು ಈ ಮಕ್ಕಳನ್ನು ಕಳೆದುಕೊಂಡ ಪೋಷಕರು, ʼ ನೀವು ಆಚರಿಸುವ ಮಕ್ಕಳ ದಿನಾಚರಣೆ ಯಾವ ಮಕ್ಕಳ ಸಲುವಾಗಿ ? ʼ ಎಂದು ಪ್ರಶ್ನಿಸಿದರೆ, ನಾಗರಿಕತೆಯ ಪ್ರತಿನಿಧಿಗಳಾದ ಕಲಿತ ಸಮಾಜಗಳು ಏನು ಉತ್ತರ ಕೊಡಲು ಸಾಧ್ಯ ? ನಾಚಿ ತಲೆ ತಗ್ಗಿಸಬೇಕಲ್ಲವೇ ?

ಈ ಹೀನಾಯ ಪರಿಸ್ಥಿತಿಗೆ ನೆಹರೂ ಅವರನ್ನೇ ದೋಷಿಯನ್ನಾಗಿ ಮಾಡುವ ಅಪ್ರಬುದ್ಧ ರಾಜಕೀಯ ನಿರೂಪಣೆಗಳನ್ನು ಬದಿಗಿಟ್ಟು ನೋಡಿದಾಗ, ನೆಹರೂ ಪರಂಪರೆಯನ್ನು ಅಕ್ಷರಶಃ ಅನುಸರಿಸುವ ಕಾಂಗ್ರೆಸ್‌ ಪಕ್ಷದ ಸರ್ಕಾರಗಳೂ ಸಹ ಇಲ್ಲಿ ಅಪರಾಧಿಯಾಗಿಯೇ ಕಾಣುತ್ತವೆ. ಹಿಂದುತ್ವ ರಾಜಕಾರಣದಲ್ಲಿ ಈ ಮಕ್ಕಳು ಅಸ್ಮಿತೆಯಿಲ್ಲದೆಯೇ ಬಲಿಯಾಗುತ್ತಾರೆ. ಅಲ್ಪಸಂಖ್ಯಾತರ ಸಾಂಸ್ಕೃತಿಕ ವಲಯದಲ್ಲಿ ಈ ಮಕ್ಕಳು ಗಣನೆಗೇ ಬರುವುದಿಲ್ಲ. ಕಾಂಗ್ರೆಸ್‌-ಬಿಜೆಪಿ ಮತ್ತಿತರ ಪಕ್ಷಗಳ ರಾಜಕೀಯದಲ್ಲಿ ಇವೆಲ್ಲವೂ ಕೇವಲ ಹಾಳೆಗಳಲ್ಲಿ ದಾಖಲಾಗುವ ಅಂಕಿ ಅಂಶಗಳು, ದತ್ತಾಂಶಗಳಾಗಿಬಿಡುತ್ತವೆ. ಇವೆಲ್ಲವನ್ನೂ ಹಿತ್ತಲಿನಲ್ಲಿರಿಸಿ, ಮುಂಬಾಗಿಲಿಗೆ ಸುಂದರ ತೋರಣಗಳನ್ನು ಕಟ್ಟುತ್ತಿದ್ದೇವೆ. ಹೌದಲ್ಲವೇ ?

ನಾಗರಿಕತೆಯ ನೈತಿಕತೆ

ಬಲೂನು ಮಾಡುವ ಬಾಲೆಗಾಗಿ ಒಂದೆರಡು ಹನಿ ಕಂಬನಿ ಮಿಡಿಯದ ಸ್ಥಳೀಯ, ರಾಜ್ಯದ ಜನಪ್ರತಿನಿಧಿಗಳಿಗೆ ʼ ಮಕ್ಕಳ ದಿನಾಚರಣೆ ʼ ಆಚರಿಸಲು ಯಾವ ನೈತಿಕ ಹಕ್ಕು ಇರಲು ಸಾಧ್ಯ ? ಅದು ಕೇವಲ ಒಬ್ಬ ಬಾಲಕಿಯ ಮೇಲೆ ನಡೆದ ಕ್ರೂರ ದೌರ್ಜನ್ಯವಲ್ಲ ಅಥವಾ ಈ ಕೃತ್ಯವನ್ನು ಎಸಗಿದವರು ಯಾರು ಎನ್ನುವುದೂ ಪ್ರಶ್ನೆಯಲ್ಲ, ಇಲ್ಲಿ ನಾಗರಿಕತೆಯ ಪ್ರತಿನಿಧಿಗಳಾಗಿ ನಾವು ಯೋಚಿಸಬೇಕಿರುವುದು, ಹೀಗೆ ಅತ್ಯಾಚಾರಕ್ಕೊಳಗಾಗುವ ಎಳೆ ಜೀವಗಳು, ʼಬಲೂನು ಮಾರುವ ಬಾಲೆಯರು ʼ ರಾಜ್ಯದಲ್ಲಿ ಎಷ್ಟು ಸಂಖ್ಯೆಯಲ್ಲಿರಬಹುದು ಎಂದು. ಈ ಪ್ರಶ್ನೆ ಸಮಾಜದಲ್ಲಿ ಮೂಡಿದ್ದರೆ, ಈ ಘಟನೆ ಮೈಸೂರಿನ ಇತಿಹಾಸದ ಕಪ್ಪು ಚುಕ್ಕೆಯಾಗಿ, ಇಲ್ಲಿನ ಸಾಹಿತಿ ಕಲಾವಿದರ, ಬೌದ್ಧಿಕ ವಲಯದ ವಿದ್ವಾಂಸರ, ಜನಪ್ರತಿನಿಧಿಗಳ ಅಂತರ್‌ ಪ್ರಜ್ಞೆಯನ್ನು ಕದಡಿಬಿಡಬೇಕಿತ್ತು. ಹಾಗೊಮ್ಮೆ ಆಗಿದ್ದರೆ ಆ ಅಮಾಯಕ ಕೂಸು ವಿಸ್ಮೃತಿಗೆ ಜಾರುತ್ತಿರಲಿಲ್ಲ.

ಧರ್ಮಶಾಸ್ತ್ರಗಳ ನೆರಳಿನಲ್ಲೇ ಬದುಕಿ, ಸಮಾಜದಲ್ಲಿ ಗೌರವಯುತ ಸ್ಥಾನ ಗಳಿಸಿರುವ ಧಾರ್ಮಿಕ ನೇತಾರರು, ಅಧ್ಯಾತ್ಮ ಗುರುಗಳು ಈ ಘಟನೆಯ ಬಗ್ಗೆ ವಹಿಸಿರುವ ಮೌನವೇ ನಮ್ಮ ಸಮಾಜವನ್ನು ಕಾಡುತ್ತಿರುವ ಆಳವಾದ ವ್ಯಾಧಿಯ ಸಂಕೇತವಾಗಿ ಕಾಣುತ್ತದೆ. ಈ ಸಾಮಾಜಿಕ ವ್ಯಾಧಿಯನ್ನು (Social Malaise) ಹೋಗಲಾಡಿಸುವುದು ಹೇಗೆ ? ಜನಜಾಗೃತಿಯೊಂದೇ ಆಯ್ಕೆಯಾಗಿರಲು ಸಾಧ್ಯವಿಲ್ಲ. ಇದನ್ನೂ ಮೀರಿದ ಪ್ರಯತ್ನಗಳು ನಮಗೆ ಕಾಣಬೇಕಿದೆ. ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಅಪಹರಣ, ಪೋಕ್ಸೋ ಕಾಯ್ದೆಯ ಪ್ರಕರಣಗಳು ಹೆಣ್ಣು ಜೀವವನ್ನು ನಿಕೃಷ್ಟವಾಗಿ, ಅಧೀನರನ್ನಾಗಿ, ಬಳಸಬಹುದಾದ ಸರಕಿನಂತೆ ಕಾಣುವ ಪಿತೃಪ್ರಧಾನ ಮೌಲ್ಯಗಳ ಬುನಾದಿಯ ಮೇಲೆ ಸಂಭವಿಸುತ್ತವೆ.

ಈ ತಳಪಾಯವನ್ನು ಅಲುಗಾಡಿಸಿದರೆ ಸಾಲದು ಸಂಪೂರ್ಣವಾಗಿ ಕೆಡವಿ ಹಾಕಬೇಕು. ಇದು ಸಾಧ್ಯವಾಗಬೇಕಾದರೆ, ವಿಶಾಲ ಸಮಾಜವನ್ನು ರಾಜಕೀಯವಾಗಿ-ಸಾಮಾಜಿಕವಾಗಿ-ಸಾಂಸ್ಕೃತಿಕವಾಗಿ-ಆಧ್ಯಾತ್ಮಿಕವಾಗಿ-ಶೈಕ್ಷಣಿಕವಾಗಿ-ಸಾಹಿತ್ಯಿಕವಾಗಿ- ಸಂಘಟನಾತ್ಮಕವಾಗಿ ಪ್ರತಿನಿಧಿಸುತ್ತಿರುವ ಪುರುಷ ಪ್ರಧಾನ ವ್ಯವಸ್ಥೆಯ ವಾರಸುದಾರರು ಬದಲಾಗಬೇಕು. ಈ ಪ್ರಾಚೀನ ಮೌಲ್ಯಗಳ ಮೇಲೆ ನಿಂತಿರುವ ಸಮಾಜ ಎಂಬ ಕಟ್ಟಡ ಎಷ್ಟೇ ಸದೃಢವಾಗಿದ್ದರೂ, ಅಲ್ಲಿ ಹದಿಹರೆಯದ ಬಾಲೆಯರನ್ನೂ ಒಳಗೊಂಡಂತೆ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಲೇ ಹೋಗುತ್ತದೆ. ಈ ಸೂಕ್ಷ್ಮತೆಯನ್ನು ನಮ್ಮ ಸರ್ಕಾರಗಳು ಹಾಗೂ ಸಾಂಸ್ಕೃತಿಕ-ಸಾಮಾಜಿಕ ಸಂಸ್ಥೆಗಳು ಅರ್ಥಮಾಡಿಕೊಳ್ಳಬೇಕಿದೆ. ಪ್ರತಿಕ್ರಿಯಾತ್ಮಕವಾಗಿ ಈ ಕ್ರೌರ್ಯಗಳಿಗೆ ಸ್ಪಂದಿಸುವುದು ಆಲಂಕಾರಿಕವಾಗಿ, ಮರುದಿನವೇ ನೆನಪಿನಿಂದ ಜಾರಿಬಿಡುತ್ತದೆ.

K N  RAJANNA :  JDS ಸೇರಲು ಸೂಚನೆ ಕೊಟ್ರಾ..? ಮಾಜಿ ಸಚಿವ ಕೆ ಎನ್ ರಾಜಣ್ಣ #pratidhvani #knrajanna #tumkur

ನಾವು ಮಾಡಬೇಕಿರುವುದೇನು ?

ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸುವುದು, ನ್ಯಾಯ ವಿತರಣೆಯ ವಿಳಂಬವನ್ನು ಕಡಿಮೆ ಮಾಡುವುದು, ಅಪರಾಧಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು ಇವೆಲ್ಲವೂ ಆಡಳಿತಾತ್ಮಕ ಕ್ರಮಗಳು, ಸಂಭವಿಸಿದ ಅಥವಾ ಸಂಭವಿಸಬಹುದಾದ ಅಪರಾಧಗಳನ್ನು ಕಡಿಮೆ ಮಾಡಲು ನೆರವಾಗುತ್ತವೆ. ಆದರೆ ಅಪರಾಧಗಳ ಮೂಲ ಬೇರುಗಳನ್ನು, ಅಂದರೆ ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಬೇರೂರಿರುವ ಪುರುಷಾಧಿಪತ್ಯದ ನೆಲೆಗಳನ್ನು ಭೇದಿಸಲಾಗುವುದಿಲ್ಲ. ಪಾತಕ ಜಗತ್ತನ್ನು ಭೇದಿಸುವಾಗ, ಅಪರಾಧ ಎನ್ನುವುದು ಒಂದು ಸಾಮಾಜಿಕ ವ್ಯಾಧಿ (Social Malaise) ಎಂದು ಪರಿಗಣಿಸದ ಹೊರತು, ಈ ದಿಕ್ಕಿನಲ್ಲಿ ಹೆಜ್ಜೆ ಇಡಲಾಗುವುದಿಲ್ಲ. ಸದ್ಯದ ವಾತಾವರಣದಲ್ಲಿ ಈ ಅರಿವು ಮೂಡಿಸುವ, ಜಾಗೃತಗೊಳಿಸುವ ಜವಾಬ್ದಾರಿಯನ್ನು ಕೇವಲ ಮಹಿಳಾ ಸಂಘಟನೆಗಳು ಹೊತ್ತುಕೊಂಡಿವೆ. ಸಮಾನತೆ, ಬದುಕುವ ಹಕ್ಕು, ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಪ್ರತಿಯೊಂದು ಸಂಘಟನೆಯೂ , ತಾವು ಪ್ರತಿನಿಧಿಸುವ ಸಮಾಜದಲ್ಲಿ ಮಕ್ಕಳೂ ಇದ್ದಾರೆ, ವಿಶೇಷವಾಗಿ ಹೆಣ್ಣು ಮಕ್ಕಳು ಅರ್ಧದಷ್ಟಿದ್ದಾರೆ, ಇವರೇ ಹೆಚ್ಚಿನ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ ಎಂಬ ಸುಡು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿದೆ.

ಮಕ್ಕಳಲ್ಲಿ ಅರಿವು ಮೂಡಿಸಬಹುದು ಆದರೆ ಜಾಗೃತಿ ಮೂಡಿಸಬೇಕಿರುವುದು ಹಿರಿಯ ಸಮಾಜದಲ್ಲಿ, ಸುಶಿಕ್ಷಿತ ಹಿತವಲಯದ ಸಮಾಜಗಳಲ್ಲಿ, ಸಂವಿಧಾನದ ಫಲಾನುಭವಿಗಳಲ್ಲಿ ಹಾಗೂ ಆಳ್ವಿಕೆಯ ವಾರಸುದಾರರಲ್ಲಿ. ಈ ಹೆಜ್ಜೆಯನ್ನು ಅನುಸರಿಸುವುದಾದರೆ, ನಾವು ನವಂಬರ್‌ 14ರ ʼಮಕ್ಕಳ ದಿನಾಚರಣೆʼ ಯನ್ನು ತಲೆಎತ್ತಿ ಆಚರಿಸಬಹುದು. ಸುಖಿ ಸಮಾಜದ ನಡುವೆಯೇ ದೌರ್ಜನ್ಯ ಅಪರಾಧಗಳ ಜಗತ್ತು ಇರುವುದನ್ನು ಗಮನಿಸಲು ಹೊರಳಿ ನೋಡಬೇಕಾಗುತ್ತದೆ, ಹಿಂತಿರುಗಿ ನೋಡಬೇಕಾಗುತ್ತದೆ. ಇದು ಆತ್ಮಾವಲೋಕನ, ಆತ್ಮವಿಮರ್ಶೆಯ ಮೂಲಕ ಆಗಬಹುದಾದ ಕೆಲಸ. ಈ ದಿಕ್ಕಿನಲ್ಲಿ ಗಂಭೀರ ಆಲೋಚನೆ ಮಾಡುತ್ತಲೇ ʼಮಕ್ಕಳ ದಿನಾಚರಣೆಯನ್ನುʼ ಆಚರಿಸೋಣ.

K N  Rajanna :  ಇವನಿಂದ ನನಗೆ ದೊಡ್ಡ ಸಮಸ್ಯೆ ಅವನು ಒನ್ ತರ ಬಂಗಾರಪ್ಪ ಇದ್ದಾಗೆ #pratidhvani #knrajanna
Tags: children's dayChildren's Day 2025Kannadana divakara
Previous Post

ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ- ಸಚಿವ ಪ್ರಿಯಾಂಕ್‌ ಖರ್ಗೆ

Next Post

ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು

Related Posts

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
0

"ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. (Deputy Chief...

Read moreDetails

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

November 18, 2025

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

November 18, 2025

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 18, 2025
Next Post
ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು

ಇಂದಿನ ರಾಶಿ ಭವಿಷ್ಯ: ಈ ದಿನದ ಅದೃಷ್ಟದ ರಾಶಿಗಳಿವು

Recent News

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
Top Story

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
November 18, 2025
Top Story

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

by ಪ್ರತಿಧ್ವನಿ
November 18, 2025
Top Story

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

by ಪ್ರತಿಧ್ವನಿ
November 18, 2025
Top Story

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
November 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada