ಬೆಂಗಳೂರು: ಅಮೇರಿಕಾ ಹಾಗೂ ಇನ್ನಿತರೆ ದೇಶಗಳಲ್ಲಿ ಸ್ವಿಜರ್‌ಲ್ಯಾಂಡ್‌ನಲ್ಲಿರುವ ಕ್ವಾಂಟಮ್ ತಂತ್ರಜ್ಞಾನದ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿಸಲು ಸಿದ್ಧಪಡಿಸಿರುವ ʼಸ್ವಿಸ್‌ನೆಕ್ಸ್ ಕ್ವಾಂಟಮ್ ಮ್ಯಾಪ್ʼನ ಮಾದರಿಯಲ್ಲಿ, ʼಕರ್ನಾಟಕ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್ʼ ತಯಾರಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜು ಸೂಚನೆ ನೀಡಿದ್ದಾರೆ.
ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸ್ವಿಸ್‌ನೆಕ್ಸ್ ಇಂಡಿಯಾದ ಸಿಇಓ & ಕೌನ್ಸ್‌ಲ್ ಜೆನರಲ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಇತ್ತೀಚೆಗೆ ಸ್ವಿಜರ್‌ಲ್ಯಾಂಡ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ವಿಸ್‌ನೆಕ್ಸ್ ಕ್ವಾಂಟಮ್ ಹಾಗೂ ಜೆಸ್ಡಾ ಸಮ್ಮೇಳನದಲ್ಲಿ ಭಾಗವಹಿಸಲಾಯಿತು. ಅಲ್ಲದೇ, ಇಟಿಹೆಚ್ ಜ್ಯೂರಿಕ್, ಸೆರ್ನ್ ಗೆ ಭೇಟಿ ನೀಡಿ ಕ್ವಾಂಟಮ್ ಕ್ಷೇತ್ರದ ಸಂಶೋಧನೆ ಹಾಗೂ ಪಾಲುದಾರಿಕೆಯ ಬಗ್ಗೆ ಅಲ್ಲಿನ ಮುಖ್ಯಸ್ಥರು ಹಾಗೂ ವಿಜ್ಞಾನಿಗೊಳೊಂದಿಗೆ ಸಭೆ ನಡೆಸಲಾಗಿದೆ. ಈ ಸಭೆಗಳಲ್ಲಿ ನಡೆದ ಚರ್ಚೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಂದು ಸ್ವಿಸ್‌ನೆಕ್ಸ್ ಕೌನ್ಸಲ್ ಜೆನರಲ್ ಜೊತೆ ಸಭೆಯನ್ನು ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಹಾಗೂ ಸ್ವಿಜರ್‌ಲ್ಯಾಂಡ್ ಮಧ್ಯೆ ಸಂಶೋಧನೆ ಹಾಗೂ ಉದ್ಯಮಗಳ ತಂತ್ರಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಈ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸ್ವಿಸ್‌ನೆಕ್ಸ್ ಸಿಇಓ & ಜೆನರಲ್ ಇನ್ ಇಂಡಿಯಾ ಡಾ. ಎಂಜೆಲಾ ಹೊನೆಗ್ಗರ್, ಸ್ವಿಟ್ಜರ್ಲೆಟಂಡ್ ಕ್ವಾಂಟಮ್ ಕ್ಷೇತ್ರದ ಅವಿಷ್ಕಾರ ಹಾಗೂ ಉದ್ಯಮಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಈ ಬಗ್ಗೆ ಅಮೇರಿಕಾ ಹಾಗೂ ಇನ್ನಿತರ ದೇಶಗಳಲ್ಲಿ ಪ್ರಚಾರ ಮಾಡುವ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ʼಸ್ವಿಸ್‌ನೆಕ್ಸ್ ಕ್ವಾಂಟಮ್ ಮ್ಯಾಪ್ʼ ರಚಿಸಲಾಗಿತ್ತು. ಇದರಿಂದ ಕ್ವಾಂಟಮ್ ಕ್ಷೇತ್ರದ ಯಾವ ವಿಷಯದಲ್ಲಿ, ಯಾವ ಯಾವ ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸಹಯೋಗದ ಅವಕಾಶ ಎಲ್ಲಿದೆ ಎನ್ನುವ ಬಗ್ಗೆ ಮಾಹಿತಿಯನ್ನು ಕ್ರೋಢೀಕರಿಸಲಾಗಿತ್ತು. ಇದೇ ರೀತಿಯ ಮ್ಯಾಪ್ ಸಿದ್ಧಪಡಿಸಿದಲ್ಲಿ ಎರಡೂ ರಾಷ್ಟ್ರಗಳ ನಡುವೆ ವಿಚಾರ ವಿನಿಮಯದ ಮೊದಲ ದಾರಿಯಾಗಲಿದೆ ಎನ್ನುವ ಸಲಹೆಯನ್ನು ನೀಡಿದರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಭೋಸರಾಜು ಮಾತನಾಡಿ, ಬೆಂಗಳೂರು ನಗರ ದೇಶದ ʼಕ್ವಾಂಟಮ್ ಸ್ಟಾರ್ಟ್‌ಅಪ್ ಕ್ಯಾಪಿಟಲ್ʼ ಆಗಿದೆ. ಈಗಾಗಲೇ, ಬೆಂಗಳೂರು ನಗರದಲ್ಲಿ ಹಲವಾರು ಕ್ವಾಂಟಮ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ಟಾರ್ಟ್‌ಅಪ್‌ಗಳು, ಉದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಹಲವಾರು ಸಂಶೋಧನಾ ಸಂಸ್ಥೆಗಳು ಸಂಶೋಧನೆಯಲ್ಲಿ ತೊಡಗಿಕೊಂಡಿವೆ. ದೇಶದಲ್ಲಿಯೇ ಅತಿ ಹೆಚ್ಚು ಕ್ವಾಂಟಮ್ ಕ್ಷೇತ್ರದಲ್ಲಿ ಪ್ರಾವಿಣ್ಯತೆಯನ್ನು ಹೊಂದಿರುವ ಮಾನವ ಸಂಪನ್ಮೂಲವೂ ಲಭ್ಯವಿದೆ. ದೇಶದಲ್ಲೇ ಮೊದಲ ಕ್ಯೂ-ಸಿಟಿಯನ್ನು ನಿರ್ಮಾಣಕ್ಕೆ ಭೂಮಿಯನ್ನೂ ಮಂಜೂರು ಮಾಡಲಾಗಿದೆ. ಈ ಎಲ್ಲಾ ವಿಷಯಗಳನ್ನು ಉತ್ತಮ ರೀತಿಯಲ್ಲಿ ಪ್ರಚುರ ಪಡಿಸಲು ಮ್ಯಾಪ್ ರಚಿಸುವುದು ಸೂಕ್ತವಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಕ್ವಾಂಟಮ್ ಎಕೋಸಿಸ್ಟಮ್ ಮ್ಯಾಪ್ ರಚಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಕರ್ನಾಟಕ ಮತ್ತು ಸ್ವಿಸ್‌ನೆಕ್ಸ್ ನಡುವಿನ ಸಂಯುಕ್ತ ಡೆಸ್ಕ್ ಸ್ಥಾಪನೆ ಕುರಿತ ಪ್ರಸ್ತಾವನೆಯನ್ನು ಸಹ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂಯುಕ್ತ ವೇದಿಕೆ ಸಂಶೋಧನೆ, ಸ್ಟಾರ್ಟ್‌ಅಪ್‌ಗಳ ಉತ್ತೇಜನ ಮತ್ತು ನೀತಿ ಸಮನ್ವಯಕ್ಕಾಗಿ ಕಾರ್ಯನಿರ್ವಹಿಸಲಿದ್ದು, ಎರಡು ರಾಷ್ಟ್ರಗಳ ವಿಶ್ವವಿದ್ಯಾಲಯಗಳು, ಕೈಗಾರಿಕೆಗಳು ಮತ್ತು ನವೋದ್ಯಮ ಸಂಸ್ಥೆಗಳನ್ನು ಸಂಪರ್ಕಿಸುವ ಏಕಕೇಂದ್ರಿಯಾಗಿ ಕಾರ್ಯನಿರ್ವಹಿಸಲಿದೆ. ಇದರ ಮೂಲಕ ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (AI) ಮತ್ತು ಸ್ಥಿರ ನವೋತ್ಪಾದನೆ ಮುಂತಾದ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಯುಕ್ತ ಸಂಶೋಧನಾ ಯೋಜನೆಗಳು, ಸ್ಟಾರ್ಟ್‌ಅಪ್ ಇಂಕ್ಯುಬೇಶನ್ ಸಹಕಾರ ಹಾಗೂ ಉತ್ತಮ ಅಭ್ಯಾಸಗಳ ವಿನಿಮಯಕ್ಕೆ ಅವಕಾಶ ಸಿಗಲಿದೆ. ಈ ಕ್ರಮವು ಎರಡೂ ರಾಷ್ಟ್ರಗಳ ನವೀನತಾ ಪರಿಸರಗಳ ದೀರ್ಘಕಾಲೀನ ಸಹಕಾರವನ್ನು ಸಂಸ್ಥಾನೀಕರಿಸುವುದರೊಂದಿಗೆ, ನೀತಿಗಳ ಸಮ್ಮಿಳನ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ವೃದ್ಧಿಸಲು ನೆರವಾಗಲಿದೆ.
ಸಭೆಯಲ್ಲಿ ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು, ಭಾರತೀಯ ವಿಜ್ಞಾನ ಸಂಸ್ಘೆಯ ಪ್ರೊ. ಅರಿಂದಮ್ ಘೋಷ್, ಸ್ವಿಸ್‌ನೆಕ್ಸ್ ಸಂಸ್ಥೆಯ ಹೆಡ್ ಆಪ್ ಇನ್ನೋವೇಷನ್ ರಾಹುಲ್ ಕುಲಶ್ರೇಷ್ಠ, ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರ ಹಂಚಿನಾಳ್ ಉಪಸ್ಥಿತರಿದ್ದರು.


